ರಾಜಕೀಯ

ರಾಜ್ಯಗಳ ಮೇಲೆ ಕೇಂದ್ರದ ನಿಯಂತ್ರಣ; ಶೀಘ್ರದಲ್ಲೇ ದಕ್ಷಿಣ ಭಾರತದ ಸಿಎಂಗಳ ಸಮ್ಮೇಳನ: ಸಿದ್ದರಾಮಯ್ಯ

ಭಾರತದ ಒಕ್ಕೂಟ ವ್ಯವಸ್ಥೆ ಎಂದರೆ ಕೇಂದ್ರ ಸರ್ಕಾರ ಅನೇಕ ರಾಜ್ಯಗಳನ್ನು ಆಳುವುದಲ್ಲ. ಬದಲಾಗಿ ಅನೇಕ ರಾಜ್ಯಗಳು ಒಂದು ಒಕ್ಕೂಟವನ್ನು ಬಲಪಡಿಸುವುದು ಎಂದು ಸಿಎಂ ಹೇಳಿದರು.

ಬೆಂಗಳೂರು: ಒಕ್ಕೂಟ ವ್ಯವಸ್ಥೆಯಿಂದ ಬಲವಂತದಿಂದ ಕೇಂದ್ರೀಕರಣ ಮಾಡುತ್ತಿರುವ ಅಪಾಯಕಾರಿ ಬದಲಾವಣೆಗೆ ದೇಶ ಸಾಕ್ಷಿಯಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಇಂದು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಸಮಾಜವಾದಿ ಅಧ್ಯಯನ‌ ಕೇಂದ್ರ ಮತ್ತು ಸಮಾಜವಾದಿ ಸಮಾಗಮ‌ ಸಂಸ್ಥೆ ಆಯೋಜಿಸಿದ್ದ "ದಕ್ಷಿಣ ಭಾರತ ಸಮಾಜವಾದಿಗಳ‌ ಸಮ್ಮೇಳನ" ಉದ್ಘಾಟಿಸಿ ಮಾತನಾಡಿದ ಸಿಎಂ, ದೆಹಲಿಯಲ್ಲೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ಅವುಗಳನ್ನು "ರಾಜ್ಯಗಳ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ. ಅಲ್ಲದೆ ಅದನ್ನು ಸುಧಾರಣೆ ಎಂದು ಸಂಭ್ರಮಿಸಲಾಗುತ್ತಿದೆ" ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಭಾರತದ ಒಕ್ಕೂಟ ವ್ಯವಸ್ಥೆ ಎಂದರೆ ಕೇಂದ್ರ ಸರ್ಕಾರ ಅನೇಕ ರಾಜ್ಯಗಳನ್ನು ಆಳುವುದಲ್ಲ. ಬದಲಾಗಿ ಅನೇಕ ರಾಜ್ಯಗಳು ಒಂದು ಒಕ್ಕೂಟವನ್ನು ಬಲಪಡಿಸುವುದು ಎಂದು ಸಿಎಂ ಹೇಳಿದರು.

ಭಾರತದ ಒಕ್ಕೂಟ ಪ್ರಜಾಪ್ರಭುತ್ವದ ಮೂಲಾಧಾರಗಳೇ ಒತ್ತಡಕ್ಕೆ ಸಿಲುಕಿವೆ. ‘ಭಾರತ’ ಎಂಬ ಪರಿಕಲ್ಪನೆಯೇ ಇಂದು ಪರೀಕ್ಷೆಗೆ ಒಳಗಾಗುತ್ತಿದೆ. ರಾಜ್ಯಗಳ ಮೇಲೆ ಕೇಂದ್ರದ ನಿಯಂತ್ರಣವನ್ನು ಹೇರಲಾಗುತ್ತಿದೆ. ಆದರೆ, ರಾಜ್ಯಗಳು ದೆಹಲಿಯ ಮುನ್ಸಿಪಾಲಿಟಿಗಳಲ್ಲ. ಕೃಷಿ, ಆರೋಗ್ಯ, ಶಿಕ್ಷಣ, ನೀರು ಹಾಗೂ ಸಂಸ್ಕೃತಿ ರಾಜ್ಯದ ವಿಷಯಗಳು. ಆದರೂ, ಇಂದು ರಾಜ್ಯಗಳ ಜೊತೆಗಿನ ಸಮಾಲೋಚನೆಯೇ ಇಲ್ಲದೆ ನಿರ್ಧಾರಗಳನ್ನು ಹೇರಲಾಗುತ್ತಿದೆ. ಒಮ್ಮತವಿಲ್ಲದ ಶಿಕ್ಷಣ ನೀತಿ (NEP), ರಾಜ್ಯಗಳ ಒಪ್ಪಿಗೆಯಿಲ್ಲದ ಕೃಷಿ ಕಾಯ್ದೆಗಳು, ಪರಿಹಾರದ ಖಚಿತತೆಯಿಲ್ಲದ ಜಿಎಸ್‍ಟಿ – ಇವು ಸಾಂವಿಧಾನಿಕ ನೈತಿಕತೆಯನ್ನು ನಾಶ ಮಾಡುತ್ತಿವೆ. ಚುನಾಯಿತ ಸರ್ಕಾರಗಳ ಸಲಹೆಯಂತೆ ನಡೆಯಬೇಕಾದ ರಾಜ್ಯಪಾಲರನ್ನು ರಾಜ್ಯಗಳ ಆಡಳಿತಕ್ಕೆ ಅಡ್ಡಿಪಡಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಸಿಎಂ ಹೇಳಿದರು.

"ಒಕ್ಕೂಟ ವ್ಯವಸ್ಥೆಯು ಒಂದು ಆಯ್ಕೆಯಲ್ಲ; ಅದು ನಮ್ಮ ಸಂವಿಧಾನದ ಆತ್ಮ", ಸಂವಿಧಾನ ಸಭೆಯಿಂದ ಸಮಕಾಲೀನ ಚರ್ಚೆಗಳವರೆಗೆ ಈ ತತ್ವವು ಪ್ರತಿಧ್ವನಿಸುತ್ತಿದೆ. “ಒಕ್ಕೂಟ ವ್ಯವಸ್ಥೆಯು ಭಿಕ್ಷೆಯಲ್ಲ, ಸಾಂವಿಧಾನಿಕ ಹಕ್ಕು. ರಾಜ್ಯಗಳ ಹಕ್ಕು, ಒಕ್ಕೂಟ ವ್ಯವಸ್ಥೆ, ಸಾಂವಿಧಾನಿಕ ನ್ಯಾಯದ ರಕ್ಷಣೆಗಾಗಿ ಎಲ್ಲರೂ ಒಗ್ಗೂಡಬೇಕಿದೆ. ಹೋರಾಟ ನಡೆಸಬೇಕಿದೆ” ಎಂದರು.

‘ಭಾರತದ ಬಲವು ಏಕತೆ ಮತ್ತು ಸ್ವಾಯತ್ತತೆಯ ನಡುವಿನ ಸಮತೋಲನದಲ್ಲಿದೆ’ ಎಂಬುದನ್ನು ಡಾ. ಬಿ.ಆರ್. ಅಂಬೇಡ್ಕರ್ ನೆನಪಿಸಿದ್ದರು. ಆದರೆ ಇಂದು ಆ ಸಮತೋಲನವನ್ನು ಉದ್ದೇಶಪೂರ್ವಕವಾಗಿ ಅಸ್ಥಿರಗೊಳಿಸಲಾಗುತ್ತಿದೆ” ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವು ಹಣವನ್ನು ತಡೆಹಿಡಿದಾಗ, ವಿಪತ್ತು ಪರಿಹಾರವನ್ನು ವಿಳಂಬಗೊಳಿಸಿದಾಗ ಮತ್ತು ಏಕರೂಪದ ನೀತಿಗಳನ್ನು ಹೇರಿದಾಗ, ಅದು ಕೇವಲ ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆಯಲ್ಲ, ಬದಲಾಗಿ ಸಂವಿಧಾನದ ಸಮಾಜವಾದಿ ಚೈತನ್ಯಕ್ಕೆ ಮಾಡುತ್ತಿರುವ ದ್ರೋಹ ಎಂದರು.

“ಕಾಂಗ್ರೆಸ್ ನೇತೃತ್ವದಲ್ಲಿ, ಭಾರತವು ಸಾಮಾಜಿಕ ನ್ಯಾಯ ಮತ್ತು ಒಕ್ಕೂಟದ ಸ್ವಾಯತ್ತತೆಯನ್ನು ಸಮತೋಲನಗೊಳಿಸುವ ಸಂವಿಧಾನವನ್ನು ಅಳವಡಿಸಿಕೊಂಡಿತು. ಹಿಂದಿನ ಕಾಂಗ್ರೆಸ್ ಸರ್ಕಾರಗಳು ಹಣಕಾಸು ಆಯೋಗವನ್ನು ಸ್ವತಂತ್ರ ಸಂಸ್ಥೆಯಾಗಿ ಗೌರವಿಸಿದ್ದವು. ಯೋಜನಾ ಆಯೋಗದಂತಹ ಸಂಸ್ಥೆಗಳನ್ನು ರಾಜ್ಯಗಳೊಂದಿಗೆ ಸಹಕರಿಸಲು ವೇದಿಕೆಯನ್ನಾಗಿ ಬಳಸಲಾಗಿತ್ತು. ಭೂ ಸುಧಾರಣೆ, ಸಾರ್ವಜನಿಕ ವಿತರಣೆ, ನೀರಾವರಿ, ಶಿಕ್ಷಣ ಮತ್ತು ಆರೋಗ್ಯದಂತಹ ಪ್ರಮುಖ ಯೋಜನೆಗಳನ್ನು ರಾಜ್ಯಗಳ ಮೂಲಕವೇ ಜಾರಿಗೆ ತರಲಾಯಿತು. ಯುಪಿಎ ಅವಧಿಯಲ್ಲಿ ಉದ್ಯೋಗ ಖಾತರಿ, ಆಹಾರ ಭದ್ರತೆ ಮತ್ತು ಮಾಹಿತಿ ಹಕ್ಕಿನಂತಹ ಕಾನೂನುಗಳ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಯಿತು” ಎಂದು ಸಿದ್ದರಾಮಯ್ಯ ವಿವರಿಸಿದರು.

“ಆದರೆ, ಇಂದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನಂಬಿಕೆಯ ಬದಲಿಗೆ ನಿಯಂತ್ರಣವನ್ನು ಮತ್ತು ಸಹಭಾಗಿತ್ವದ ಬದಲಿಗೆ ಶಿಕ್ಷೆಯನ್ನು ನೀಡುತ್ತಿದೆ. ತೆರಿಗೆ ಹಂಚಿಕೆಯನ್ನು ಕಡಿತಗೊಳಿಸುವ ಮೂಲಕ ಮತ್ತು ‘ಸೆಸ್’ ಹಾಗೂ ‘ಸರ್‌ಚಾರ್ಜ್’ಗಳ ಮೂಲಕ ಸಂಪನ್ಮೂಲಗಳನ್ನು ಕಬಳಿಸುತ್ತಿದೆ. ಆರ್ಥಿಕ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ರಾಜ್ಯಗಳನ್ನು ಅಧಿಕಾರವಿಲ್ಲದ ಕೇವಲ ‘ಅನುಷ್ಠಾನಕಾರ’ರನ್ನಾಗಿ ಮಾಡಲಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶಕ್ಕೆ ಮೂರು ಪ್ರಮುಖ ಬಿಕ್ಕಟ್ಟುಗಳನ್ನು ತರುತ್ತಿವೆ: ಕ್ಷೇತ್ರ ಮರುವಿಂಗಡಣೆ, ಸಾಂವಿಧಾನಿಕ ತತ್ವಗಳ ನಾಶ ಮತ್ತು ಆರ್ಥಿಕ ಒಕ್ಕೂಟ ತತ್ವದ ದಮನ” ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಶೀಘ್ರದಲ್ಲೇ ದಕ್ಷಿಣ ಭಾರತದ ಸಿಎಂಗಳ ಸಮ್ಮೇಳನ

ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ಕೈಗೊಳ್ಳುತ್ತಿರುವ ನಿರ್ಧಾರಗಳ ಕುರಿತು ಚರ್ಚಿಸಲು ಶೀಘ್ರದಲ್ಲೇ ದಕ್ಷಿಣ ಭಾರತದ ಮುಖ್ಯಮಂತ್ರಿಗಳ ಸಭೆಯನ್ನು ಕರೆಯಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದು, ಇದರಿಂದ ರಾಜ್ಯಗಳಿಗೆ ಕೇಂದ್ರದಿಂದ ಬರಬೇಕಾದ ಅನುದಾನ ಕಡಿಮೆಯಾಗಿದೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಿಗೆ ಹೆಚ್ಚು ಅನ್ಯಾಯವಾಗುತ್ತಿದೆ. ಇದನ್ನು ಪ್ರಜಾಸತ್ತಾತ್ಮಕವಾಗಿಯೇ ಪ್ರಶ್ನಿಸಬೇಕಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಮದರ್ ಆಫ್ ಆಲ್ ಡೀಲ್': ಅಂತಿಮ ಹಂತ ತಲುಪಿದ ಭಾರತ-ಯುರೋಪಿಯನ್ ಒಕ್ಕೂಟದ FTA ಮಾತುಕತೆ!

ಭೋಪಾಲ್‌: ಲಿಫ್ಟ್ ಶಾಫ್ಟ್‌ಗೆ ಬಿದ್ದು ವ್ಯಕ್ತಿಯ ಸಾವು; 10 ದಿನಗಳ ನಂತರ ಮೃತದೇಹ ಪತ್ತೆ

BBK 12 ಮುಕ್ತಾಯ ಬೆನ್ನಲ್ಲೇ ಕಿಚ್ಚ ಸುದೀಪ್, ಮ್ಯಾನೇಜರ್ ಚಂದ್ರಚೂಡ್ ವಿರುದ್ಧ ವಂಚನೆ ಆರೋಪ: ಕಮಿಷನರ್‌ಗೆ ದೂರು

ಪ್ರಮುಖ ಹುದ್ದೆ ಹೊಂದಲು ನಿರ್ದಿಷ್ಟ ಕುಟುಂಬಕ್ಕೆ ಸೇರಬೇಕಾಗಿಲ್ಲದ ಏಕೈಕ ಪಕ್ಷ ಬಿಜೆಪಿ: ನೂತನ ಅಧ್ಯಕ್ಷ ನಿತಿನ್ ನಬಿನ್

ಬೀದಿ ನಾಯಿ ವಿಷಯ ಸಂಬಂಧ ಮೇನಕಾ ಗಾಂಧಿಗೆ 'ಸುಪ್ರೀಂ' ಛೀಮಾರಿ: ಉಗ್ರ ಕಸಬ್ ಬಗ್ಗೆ ಕೋರ್ಟ್ ಪ್ರಸ್ತಾಪಿಸಿದ್ದೇಕೆ?

SCROLL FOR NEXT