ಬೆಂಗಳೂರು: ರಾಜ್ಯಪಾಲರ ಮೂಲಕ ಒಕ್ಕೂಟ ವ್ಯವಸ್ಥೆಯ ಮೌಲ್ಯಗಳನ್ನು ನೆಲಕ್ಕೆ ಹಾಕಿ ಹೊಸಕುತ್ತಿರುವ ನಿಮಗೆ ಕನ್ನಡಿಗರು ಪಾಠ ಕಲಿಸುವುದು ನಿಶ್ಚಿತ ಎಂದು ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆಯವರು ಕಿಡಿಕಾರಿದ್ದಾರೆ.
ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸರ್ಕಾರ ನೀಡಿದ್ದ ಭಾಷಣವನ್ನು ಓದದೆ ಕೇವಲ ಎರಡೇ ಮಾತುಗಳಲ್ಲಿ ಶುಭಾಶಯ ಕೋರಿ ಹೊರನಡೆದ ಘಟನೆ ಸದನದಲ್ಲಿ ಭಾರೀ ಹೈಡ್ರಾಮಾಗೆ ಕಾರಣವಾಗಿದೆ.
ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆಯವರು, ಬಿಜೆಪಿ ಕನ್ನಡಿಗರನ್ನು ಅವಮಾನಿಸುವ ಪ್ರಕ್ರಿಯೆ ಮುಂದುವರೆದಿದೆ,ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ಆಡಳಿತಾತ್ಮಕವಾಗಿ ಕನ್ನಡಿಗರನ್ನು ಮತ್ತು ಕರ್ನಾಟಕವನ್ನು ಕಡೆಗಣಿಸಿ, ಶೋಷಿಸಿದ್ದ ಬಿಜೆಪಿ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ರಾಜ್ಯಪಾಲರ ಮೂಲಕವೇ ಕನ್ನಡಿಗರನ್ನು ಅವಮಾನಿಸಿದೆ ಎಂದು ಕಿಡಿಕಾರಿದ್ದಾರೆ.
ರಾಷ್ಟ್ರಗೀತೆ ನುಡಿಸುವವರೆಗೂ ಕಾಯದೆ ಎದ್ದು ಹೊರಟ ರಾಜ್ಯಪಾಲರು ಶಿಷ್ಟಾಚಾರವನ್ನು ಬದಿಗೊತ್ತಿ ರಾಷ್ಟ್ರಗೀತೆಗೂ ಅವಮಾನಿಸಿದ್ದಾರೆ. ಈ ಮೂಲಕ ಬಿಜೆಪಿ ರಾಷ್ಟ್ರ ಗೀತೆಯ ವಿರೋಧಿ, ಸಂವಿಧಾನ ವಿರೋಧಿ, ಕನ್ನಡಿಗರ ವಿರೋಧಿ ಎನ್ನುವುದು ಜಗಜ್ಜಾಹೀರಾಗಿದೆ.
ಕನ್ನಡಿಗರನ್ನು ಉದ್ದೇಶಿಸಿ ಪೂರ್ಣ ಭಾಷಣ ಮಾಡದಷ್ಟು ತೀವ್ರ ಅಸಹನೆಯನ್ನು ತೋರಿರುವ ರಾಜ್ಯಪಾಲರು ಬಿಜೆಪಿಯ ದರ್ಪ, ದ್ರಾಷ್ಟ್ಯದ ವಕ್ತಾರರಾಗಿ ನಿರೂಪಿಸಿದ್ದಾರೆ.ಅಸಡ್ಡೆಯಿಂದ ಕೂಡಿದ ನಾಲ್ಕು ಸಾಲಿನ ಮಾತು, ಸರ್ಕಾರದ ಭಾಷಣದ ತಿರಸ್ಕಾರವು ಸಂವಿಧಾನದ ಆಶಯಗಳ ಉಲ್ಲಂಘನೆ ಮಾತ್ರವಲ್ಲ, ಕನ್ನಡಿಗರಿಗೆ ಎಸಗಿದ ಘೋರ ಅವಮಾನ. ರಾಜ್ಯಪಾಲರ ಮೂಲಕ ಒಕ್ಕೂಟ ವ್ಯವಸ್ಥೆಯ ಮೌಲ್ಯಗಳನ್ನು ನೆಲಕ್ಕೆ ಹಾಕಿ ಹೊಸಕುತ್ತಿರುವ ಬಿಜೆಪಿಗೆ ಕನ್ನಡಿಗರು ಪಾಠ ಕಲಿಸುವುದು ನಿಶ್ಚಿತ ಎಂದು ತಿಳಿಸಿದ್ದಾರೆ.