ಹಾಸನ: ತಮ್ಮ ಮೊಮ್ಮಗ ಮತ್ತು ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆ ನಡೆಸಿದ ವಿಶೇಷ ತನಿಖಾ ತಂಡಕ್ಕೆ 25 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದಕ್ಕೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ನಗರದ ಬೂವನಹಳ್ಳಿ ಸಮೀಪ ನಡೆದ ಜೆಡಿಎಸ್ ಬೆಳ್ಳಿ ಹಬ್ಬದ ಸಂಭ್ರಮ ಬೃಹತ್ ಜನತಾ ಸಮಾವೇಶದಲ್ಲಿ ಮಾತನಾಡಿದ ಅವರು, ಎಚ್.ಡಿ. ರೇವಣ್ಣ ಮತ್ತು ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ಪಿತೂರಿ ನಡೆಸಿದೆ ಎಂದು ಆರೋಪಿಸಿದರು ಜೆಡಿಎಸ್ ಹಾಗೂ ರೇವಣ್ಣ ಕುಟುಂಬವನ್ನು ಮುಗಿಸಲು ನಡೆದ ಎಲ್ಲಾ ಕುತಂತ್ರಗಳನ್ನು ರಾಜ್ಯದ ಜನರು ನೋಡಿದ್ದಾರೆ.
ಎಸ್‌ಐಟಿ ತನಿಖೆ, ಬಂಧನಗಳು ಮತ್ತು ಇದೀಗ ಅದೇ ಅಧಿಕಾರಿಗಳಿಗೆ ಬಹುಮಾನ ಇವೆಲ್ಲವೂ ಆತ್ಮವಿಮರ್ಶೆಗೆ ಒಳಪಡಬೇಕು ಎಂದು ಹೇಳಿದರು. ಜೆಡಿಎಸ್ ಮುಗಿದಿದೆ ಎನ್ನುವವರಿಗೆ ಇಲ್ಲಿ ಸೇರಿರುವ ಜನಸ್ತೋಮವೇ ತಕ್ಕ ಉತ್ತರ ನೀಡಿದೆ. ಕಾಂಗ್ರೆಸ್ ಪಕ್ಷಕ್ಕೆ ಇದೇ ನಮ್ಮ ಉತ್ತರ. ಇದೇ ನಮ್ಮ ಸಂದೇಶ ಎಂದರು.
ರೇವಣ್ಣ ಅವರನ್ನು ಬಂಧಿಸಲು ಎಸ್ಐಟಿ ತಂಡ ತಮ್ಮ ಮಗಳು ಶೈಲಜಾ ಅವರ ಬೆಂಗಳೂರಿನ ನಿವಾಸಕ್ಕೆ ಬಂದಿದ್ದನ್ನು ನೆನಪಿಸಿಕೊಂಡರು. "ಕಾಡುಗಳ್ಳ ವೀರಪ್ಪನ್ ಅವರನ್ನು ಸೆರೆಹಿಡಿದ ತಂಡಕ್ಕೆ ಬಹುಮಾನ ನೀಡಲಾಗಿತ್ತು ಎಂದು ನಾನು ಕೇಳಿದ್ದೇನೆ.ಆದರೆ ಈಗ ಸರ್ಕಾರ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದವರಿಗೆ ಬಹುಮಾನ ನೀಡಿದೆ" ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ರಾಜಕೀಯ ಶಕ್ತಿಯಾಗಿ ಮುಂದುವರೆದಿದೆ ಎಂದು ಹೇಳಿದರು. ಹಾಸನದಲ್ಲಿ ನಡೆದ ಸಮಾವೇಶದ ಮೂಲಕ, ಜೆಡಿಎಸ್ ಇನ್ನೂ ಬಲಿಷ್ಠವಾಗಿದೆ ಮತ್ತು ಅದರ ಎಲ್ಲಾ ನಾಯಕರು ಒಗ್ಗಟ್ಟಾಗಿದ್ದಾರೆ ಎಂಬ ಸ್ಪಷ್ಟ ಸಂದೇಶವನ್ನು ಕಳುಹಿಸಿದೆ ಎಂದರು. ಹಾಸನಕ್ಕೆ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ತರುವುದು ಮತ್ತು ಬಡ ಕುಟುಂಬಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ತಮ್ಮ ಕನಸು ಎಂದು ದೇವೇಗೌಡ ತಿಳಿಸಿದರು. ಮೋದಿ ಆಡಳಿತದಲ್ಲಿ ದೇಶದ ಆರ್ಥಿಕತೆ ಹದಗೆಟ್ಟಿದೆ ಎಂದು ಹೇಳಿದ್ದಕ್ಕಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಅವರು ಟೀಕಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಎಚ್‌ಡಿ ಕುಮಾರಸ್ವಾಮಿ, ರಾಜ್ಯ ಸರ್ಕಾರ ರಾಜ್ಯದ ಜನರನ್ನು ಲೂಟಿ ಮಾಡುತ್ತಿದೆ ಎಂದು ಹೇಳಿದರು. ಜೆಡಿಎಸ್ ಎಲ್ಲಿದೆ ಎಂದು ಕೇಳುವವರಿಗೆ ಇಂದಿನ ಜನಸ್ತೋಮವೇ ಉತ್ತರ ಎಂದರು.
ಕಾಂಗ್ರೆಸ್ ಸರ್ಕಾರ ರೈತರ ಕಷ್ಟಗಳನ್ನು ಪರಿಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ಸಾಧನೆಗಳ ಕುರಿತು ಚರ್ಚೆಗೆ ನಾನು ಸವಾಲು ಹಾಕುತ್ತೇನೆ" ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷರೂ ಆಗಿರುವ ಕುಮಾರಸ್ವಾಮಿ ಹೇಳಿದರು. ಸಿದ್ದರಾಮಯ್ಯ ರಾಜಕೀಯ ಲಾಭಕ್ಕಾಗಿ ಅಹಿಂದ ಸಮುದಾಯವನ್ನು ಬಳಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.