ಉಪ ಮುಖ್ಯಮಂತ್ರಿ ಜಿ ಪರಮೇಶ್ವರ ಮತ್ತು ಸಿಎಂ ಡಿಕೆ ಶಿವಕುಮಾರ್ 
ರಾಜಕೀಯ

ಸಂಪುಟ ವಿಸ್ತರಣೆಗೂ ತಟ್ಟಿದ ದೆಹಲಿ ಪ್ರತಿಭಟನೆಯ ಬಿಸಿ; ಮತ್ತೆ ಮುಂದೂಡಿಕೆ; ಇನ್ನೂ ಇಬ್ಬರಿಗೆ ಡಿಸಿಎಂ ಪಟ್ಟ?

ರಾಜ್ಯದ ಹಿರಿಯ ನಾಯಕರಿಗೆ ಸಂಪುಟ ವಿಸ್ತರಣೆ ಸಂಬಂಧ ಶನಿವಾರ ಅಥವಾ ಭಾನುವಾರ ಮತ್ತೆ ಚರ್ಚೆಗೆ ಬರುವಂತೆ ಸೂಚಿಸಲಾಗಿದೆ. ಆಗ ಪಟ್ಟಿಯನ್ನು ಅಂತಿಮಗೊಳಿಸಬಹುದು.

ನವದೆಹಲಿ: ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆ ಹಾಗೂ ಸಂಸತ್ ಅಧಿವೇಶನದ ಬಿಸಿಯಿಂದಾಗಿ ಬಹು ನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಲ್ಪಟ್ಟಿದೆ.

ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ​ ಪಾರ್ಟಿ ಸೋಮವಾರ ನಡೆಸಿದ "ಸಂಸತ್ ಚಲೋ" ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಬಲ ಪ್ರಯೋಗ ಖಂಡಿಸಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮುಂದ ಧರಣಿ ನಡೆಸಿತು. ಈ ವೇಳೆ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಬಲವಂತವಾಗಿ ಪೊಲೀಸರು ವಶಕ್ಕೆ ಪಡೆದಿದ್ದರು.

ದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕೇಂದ್ರ ನಾಯಕತ್ವ ನಿರತವಾಗಿರುವುದರಿಂದ, ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗಲಿದೆ.

ಪ್ರಧಾನಿ ನಿವಾಸದ ಮುಂದೆ ದಿಢೀರ್ ಪ್ರತಿಭಟನೆಯಿಂದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಕಾಂಗ್ರೆಸ್ ಹೈಕಮಾಂಡ್ ಜೊತೆ ಸಂಭಾವ್ಯ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ.

ಪ್ರತಿಭಟನೆ ಹಾಗೂ ಸಂಸತ್ತಿನ ಅಧಿವೇಶನ ಹಿನ್ನಲೆಯಲ್ಲಿ, ಸಿಎಂ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿಕೆ ಹರಿಪ್ರಸಾದ್, ಖಾಲಿ ಕೈಯಲ್ಲಿ ಬೆಂಗಳೂರಿಗೆ ವಾಪಸ್ ಹೊರಡಲಿದ್ದಾರೆ.

"ರಾಜ್ಯದ ಹಿರಿಯ ನಾಯಕರಿಗೆ ಸಂಪುಟ ವಿಸ್ತರಣೆ ಸಂಬಂಧ ಶನಿವಾರ ಅಥವಾ ಭಾನುವಾರ ಮತ್ತೆ ಚರ್ಚೆಗೆ ಬರುವಂತೆ ಸೂಚಿಸಲಾಗಿದೆ. ಆಗ ಪಟ್ಟಿಯನ್ನು ಅಂತಿಮಗೊಳಿಸಬಹುದು ಮತ್ತು ಮುಂದಿನ ವಾರ ಸಂಪುಟ ವಿಸ್ತರಣೆ ಮಾಡಬಹುದು" ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

"ದೇಶದ ಹಿತಾಸಕ್ತಿಗಾಗಿ ನಡೆದ ಪ್ರತಿಭಟನೆಯಿಂದಾಗಿ" ಸಂಪುಟ ವಿಸ್ತರಣೆ ಚರ್ಚೆ ನಡೆಯಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಲಿಂಗಾಯತ ಸಮುದಾಯಗಳನ್ನು ಪ್ರತಿನಿಧಿಸಲು ಎರಡು ಉಪಮುಖ್ಯಮಂತ್ರಿ ಹುದ್ದೆಗಳನ್ನು ರಚಿಸುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

"ಇನ್ನೂ ಎರಡು ಡಿಸಿಎಂ ಮಾಡುವಂತೆ ನಾವು ಕೇಳಿದ್ದೇವೆ. ಆದರೆ ಅಂತಿಮ ನಿರ್ಧಾರವನ್ನು ಹಿರಿಯ ನಾಯಕರು ತೆಗೆದುಕೊಳ್ಳಬೇಕು" ಎಂದು ಜಾರಕಿಹೊಳಿ ತಿಳಿಸಿದ್ದಾರೆ.

ಬೆಂಗಳೂರಿಗೆ ತೆರಳುವ ಮೊದಲು, ಸಿದ್ದರಾಮಯ್ಯ ದೆಹಲಿಯಲ್ಲಿ ಬಸವರಾಜ ರಾಯರೆಡ್ಡಿ, ಅಶೋಕ್ ಪಟ್ಟಣ್, ರಾಜೇಂದ್ರ ರಾಜಣ್ಣ, ಬಸವರಾಜ ಶಿವಣ್ಣನವರ್ ಮತ್ತು ತೇಜಸ್ವಿನಿ ಗೌಡ ಸೇರಿದಂತೆ ಕೆಲವು ಶಾಸಕರೊಂದಿಗೆ ಉಪಾಹಾರ ಸಭೆ ನಡೆಸಿದರು.

ಇನ್ನೂ ಇಬ್ಬರಿಗೆ ಡಿಸಿಎಂ ಪಟ್ಟ?

ರಾಜ್ಯದಲ್ಲಿ ಈಗಾಗಲೇ ಡಾ.ಪರಮೇಶ್ವರ್ ಅವರು ಡಿಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ, ಇಬ್ಬರಿಗೆ ಡಿಸಿಎಂ ಹುದ್ದೆಯನ್ನು ನೀಡಿ, ಸಂಖ್ಯೆಯನ್ನು ಮೂರಕ್ಕೇರಿಸಲು, ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಲಿಂಗಾಯತ ಸಮುದಾಯ ಮತ್ತು ಅಹಿಂದ ಸಮುದಾಯದ ನಾಯಕರಿಗೆ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡುವ ನಿರ್ಧಾರಕ್ಕೆ ಕಾಂಗ್ರೆಸ್ ವರಿಷ್ಠರು ಬಂದಿದ್ದಾರೆ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಇನ್ನೊಂದು ಸುತ್ತಿನ ಮಾತುಕತೆಯ ನಂತರ, ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೆಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಿದೆ: 7.8ರಷ್ಟು GDP ಬೆಳವಣಿಗೆಯ ಟೀಕಾಕಾರರನ್ನು ಖಂಡಿಸಿದ ಪ್ರಧಾನಿ ಮೋದಿ!

ಏಷ್ಯಾಕಪ್ 2026: ಪಾಕಿಸ್ತಾನ ನೀಡಿದ ಅಲ್ಪಮೊತ್ತದ ರನ್ ಬೆನ್ನಟ್ಟಿ ಗೆದ್ದ ಭಾರತ

ತುಂಗಭದ್ರಾ ಜಲಾಶಯದ ಹೂಳು ತೆರವು ಸಾಧ್ಯವಿಲ್ಲದಿದ್ದರೆ ಸಮಾನಾಂತರ ಜಲಾಶಯ ನಿರ್ಮಿಸಿ: ರಾಜ್ಯ ಸರ್ಕಾರಕ್ಕೆ ಬಿ.ವೈ. ವಿಜಯೇಂದ್ರ ಆಗ್ರಹ!

ಏಷ್ಯಾಕಪ್ 2026: 3 ಡಕೌಟ್, ಪಾಕಿಸ್ತಾನವನ್ನು 55 ರನ್‌ಗಳಿಗೆ ಆಲೌಟ್ ಮಾಡಿದ ಭಾರತ, ಕಳಪೆ ದಾಖಲೆ ಸೃಷ್ಟಿ!

'ದುಡ್ಡಿನ ಧಿಮಾಕು.. ಕಾರಿಗೇ ಬೆಂಕಿ ಹಾಕಿ ಬಾ ಅಂತ ಹೇಳಿದ್ದೆ': ನಟ 'ಯಶ್' ತಾಯಿ ಪುಷ್ಪ ಅರುಣ್ ಕುಮಾರ್!