ಮುಖ್ಯಮಂತ್ರಿ ಡಿ ಕೆ ಶಿವಕುಮಾರ್  
ರಾಜಕೀಯ

ಏಳು ವಿಧಾನ ಪರಿಷತ್ ಸ್ಥಾನಗಳಿಗೆ ಇಂದು ಬಿಗ್ ಫೈಟ್: ಕಾಂಗ್ರೆಸ್‌ಗೆ 5, ಬಿಜೆಪಿಗೆ 2 ಸೀಟು ದಕ್ಕುವ ಚಾನ್ಸ್; ಜೆಡಿಎಸ್ ಪ್ಲಾನ್ ಸಕ್ಸಸ್ ಆಗುತ್ತಾ?-Video

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿದ ಬಳಿಕ ಎದುರಿಸುತ್ತಿರುವ ಮೊದಲ ಚುನಾವಣೆಯಾಗಿರುವುದರಿಂದ ಇದು ಅವರಿಗೆ ಮಹತ್ವದ ಪರೀಕ್ಷೆಯಾಗಿದೆ. ತಮ್ಮ ಆಪ್ತ ಸಹೋದ್ಯೋಗಿ ವಿನಯ್ ಕಾರ್ತಿಕ್ ಅವರನ್ನು ಕಾಂಗ್ರೆಸ್‌ನ ಐದನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ.

ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ತಿನ (MLC) ಏಳು ಸ್ಥಾನಗಳಿಗೆ ಇಂದು ಗುರುವಾರ ನಡೆಯುತ್ತಿರುವ ದ್ವೈವಾರ್ಷಿಕ ಚುನಾವಣೆಗೆ ಮತದಾನ ಪ್ರಗತಿಯಲ್ಲಿದೆ. ಈ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ಐವರು, ಬಿಜೆಪಿಯ ಇಬ್ಬರು ಹಾಗೂ ಜೆಡಿಎಸ್‌ನ ಒಬ್ಬ ಅಭ್ಯರ್ಥಿ ಸೇರಿದಂತೆ ಒಟ್ಟು ಎಂಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಪ್ರಮುಖರಾಗಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿದ ಬಳಿಕ ಎದುರಿಸುತ್ತಿರುವ ಮೊದಲ ಚುನಾವಣೆಯಾಗಿರುವುದರಿಂದ ಇದು ಅವರಿಗೆ ಮಹತ್ವದ ಪರೀಕ್ಷೆಯಾಗಿದೆ. ತಮ್ಮ ಆಪ್ತ ಸಹೋದ್ಯೋಗಿ ವಿನಯ್ ಕಾರ್ತಿಕ್ ಅವರನ್ನು ಕಾಂಗ್ರೆಸ್‌ನ ಐದನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ.

ಪ್ರತಿ ಅಭ್ಯರ್ಥಿಯ ಗೆಲುವಿಗೆ 28 ಶಾಸಕರ ಮತಗಳು ಅಗತ್ಯವಿದೆ. 222 ಸದಸ್ಯರ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ 135 ಶಾಸಕರು, ಬಿಜೆಪಿಗೆ 63 ಶಾಸಕರು (ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ) ಮತ್ತು ಜೆಡಿಎಸ್‌ಗೆ 18 ಶಾಸಕರಿದ್ದಾರೆ.

ಇವುಗಳ ಹೊರತಾಗಿ, ದರ್ಶನ್ ಪುಟ್ಟಣ್ಣಯ್ಯ, ಪುಟ್ಟಸ್ವಾಮಿ ಗೌಡ ಮತ್ತು ಲತಾ ಮಲ್ಲಿಕಾರ್ಜುನ ಎಂಬ ಮೂವರು ಪಕ್ಷೇತರ ಶಾಸಕರು ಇದ್ದಾರೆ. ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಕೂಡ ವಿಧಾನಸಭೆಯ ಸದಸ್ಯರಾಗಿದ್ದಾರೆ.

ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ನಿರೀಕ್ಷೆಯಲ್ಲಿದ್ದು, ಐದನೇ ಸ್ಥಾನವನ್ನೂ ಪಕ್ಷೇತರರ ಬೆಂಬಲ ಹಾಗೂ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರ ಮತಗಳ ಸಹಾಯದಿಂದ ಗೆಲ್ಲಬಹುದು ಎಂಬ ವಿಶ್ವಾಸ ಹೊಂದಿದೆ. ಈ ಇಬ್ಬರು ಶಾಸಕರು ಕಾಂಗ್ರೆಸ್ ಶಾಸಕರು ತಂಗಿದ್ದ ಬಿಡದಿಯ ರೆಸಾರ್ಟ್‌ನಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ಗಮನಾರ್ಹ ವಿಷಯ.

ಅಡ್ಡ ಮತದಾನ ಸಾಧ್ಯತೆ

ಕೆಲವು ಅಸಮಾಧಾನಗೊಂಡ ಜೆಡಿಎಸ್ ಶಾಸಕರು, ವಿಶೇಷವಾಗಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡಬಹುದು ಅಥವಾ ಮತದಾನದಿಂದ ದೂರ ಉಳಿಯಬಹುದು ಎಂಬ ನಿರೀಕ್ಷೆ ಕಾಂಗ್ರೆಸ್‌ಗೆ ಇದೆ.

ಇದನ್ನು ತಡೆಯಲು ಜೆಡಿಎಸ್ ತನ್ನ ಶಾಸಕರನ್ನು ದೇವನಹಳ್ಳಿಯ ರೆಸಾರ್ಟ್‌ನಲ್ಲಿ ಉಳಿಸಿಕೊಂಡಿತ್ತು. ವಿಶೇಷವೆಂದರೆ, ಜಿ.ಟಿ. ದೇವೇಗೌಡ ಅವರ ಪುತ್ರ ಹಾಗೂ ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ ಅವರು ಪಕ್ಷದ ಶಾಸಕರಿಗೆ ವಿಪ್ ಜಾರಿಗೊಳಿಸಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಕೂಡ ತಮ್ಮ ಶಾಸಕರ ಸಭೆ ನಡೆಸಿ ಎಲ್ಲರಿಗೂ ವಿಪ್ ಜಾರಿಗೊಳಿಸಿವೆ. ಆದರೆ ಮತದಾನ ರಹಸ್ಯ ಮತದಾನವಾಗಿರುವುದರಿಂದ ಅಡ್ಡ ಮತದಾನ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ತಂತ್ರ

ಯಾವುದೇ ಮತ ಅಮಾನ್ಯವಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ನಿನ್ನೆ ಬುಧವಾರ ಅಣಕು ಮತದಾನ ನಡೆಸಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ಉಪಸ್ಥಿತರಿದ್ದರು.

ಬಿದದಿಯ ರೆಸಾರ್ಟ್‌ನಲ್ಲಿ ನಿನ್ನೆ ಮಾತನಾಡಿದ ಡಿ.ಕೆ. ಶಿವಕುಮಾರ್, ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ ಸೇರಿದಂತೆ 4-5 ಕಾಂಗ್ರೆಸ್ ಶಾಸಕರಿಗೆ ಜೆಡಿಎಸ್ ನಾಯಕರಿಂದ ಕರೆಗಳು ಬಂದಿವೆ ಎಂದು ನಮಗೆ ಗೊತ್ತಾಗಿದೆ ಎಂದು ಆರೋಪಿಸಿದರು.

ಕುಮಾರಸ್ವಾಮಿ ಪ್ರತಿಕ್ರಿಯೆ

ಆದರೆ ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಈ ಆರೋಪವನ್ನು ತಳ್ಳಿಹಾಕಿದರು.

ನಾವು ಸಣ್ಣ ಪಕ್ಷ. ಸರ್ಕಾರ ಅವರ (ಕಾಂಗ್ರೆಸ್) ಕೈಯಲ್ಲಿದೆ. ಅವರ ಬಳಿ ಜನಬಲ, ಹಣಬಲ ಮತ್ತು ಅಧಿಕಾರಬಲ ಎಲ್ಲವೂ ಇದೆ. ನಾವು ಹೇಗೆ ಹೋರಾಡಬಹುದು? ನಮ್ಮ ಪಕ್ಷದ ಮತಗಳು ಚದುರದಂತೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ನಮ್ಮ ಅಭ್ಯರ್ಥಿ ಆತ್ಮಸಾಕ್ಷಿಯ ಮತವನ್ನು ಕೇಳಿದ್ದಾರೆ. ಹೆಚ್ಚುವರಿ ಮತಗಳನ್ನು ನಮ್ಮ ಅಭ್ಯರ್ಥಿಗೆ ವರ್ಗಾಯಿಸುವಂತೆ ಬಿಜೆಪಿ ನಾಯಕರಿಗೂ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್‌ನ ಒಳಜಗಳ ಜೆಡಿಎಸ್‌ಗೆ ಲಾಭವಾಗಬಹುದೇ ಎಂಬ ಪ್ರಶ್ನೆಗೆ, ಹಾಗಾದರೆ ಅದು ದೇವರ ಇಚ್ಛೆ. ಸರ್ಕಾರವನ್ನು ನಿಯಂತ್ರಿಸಲು ಅದು ಸಹಕಾರಿಯಾಗಬಹುದು ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ಬಿಜೆಪಿ-ಜೆಡಿಎಸ್ ಸಮನ್ವಯ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕರ ಸಭೆ ನಡೆಯಿತು. ಜೆಡಿಎಸ್ ಮುಖಂಡರು, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

ಮತಗಳ ಲೆಕ್ಕಾಚಾರ

ಕಾಂಗ್ರೆಸ್ ತನ್ನ 140 ಮತಗಳಲ್ಲಿ ತಲಾ 29 ಮತಗಳನ್ನು ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರು , ಪಿ.ವಿ. ಮೋಹನ್ ಮತ್ತು ಬಿ.ಎಸ್. ಶಿವಣ್ಣ ಅವರಿಗೆ ಹಂಚುವ ಸಾಧ್ಯತೆ ಇದೆ. ಉಳಿದ 24 ಮತಗಳನ್ನು ವಿನಯ್ ಕಾರ್ತಿಕ್ ಅವರಿಗೆ ನೀಡಲಾಗುತ್ತದೆ. ಜೊತೆಗೆ ಎರಡನೇ ಆದ್ಯತೆಯ ಮತಗಳೂ ಅವರಿಗೆ ಸಿಗಲಿವೆ.

ಅದೇ ರೀತಿ ಬಿಜೆಪಿ ತನ್ನ 63 ಮತಗಳಲ್ಲಿ ತಲಾ 29 ಮತಗಳನ್ನು ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ ಅವರಿಗೆ ನೀಡಿ, ಉಳಿದ ಐದು ಮತಗಳನ್ನು ಜೆಡಿಎಸ್ ಅಭ್ಯರ್ಥಿ ಇಂಚರ ಗೋವಿಂದರಾಜು ಅವರಿಗೆ ವರ್ಗಾಯಿಸುವ ಸಾಧ್ಯತೆ ಇದೆ. ಹೀಗಾದರೆ ಜೆಡಿಎಸ್ ಅಭ್ಯರ್ಥಿಯ ಮತಗಳ ಸಂಖ್ಯೆ 23ಕ್ಕೆ ಏರಲಿದೆ.

ಆದರೆ ಅಡ್ಡ ಮತದಾನ ಅಥವಾ ಮತದಾನದಿಂದ ದೂರ ಉಳಿಯುವ ಘಟನೆಗಳು ನಡೆದರೆ ಚುನಾವಣಾ ಫಲಿತಾಂಶದ ಲೆಕ್ಕಾಚಾರವೇ ಬದಲಾಗಬಹುದು. ಜೆಡಿಎಸ್ ಅಭ್ಯರ್ಥಿಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬೆಂಬಲವನ್ನೂಹೆಚ್ ಡಿ ಕುಮಾರಸ್ವಾಮಿ ಕೋರಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಧವ್ ಠಾಕ್ರೆಗೆ ಭಾರೀ ಹಿನ್ನಡೆ: ಪಕ್ಷದ ಸಂಸದೀಯ ಸಭೆಗೆ 6 ಸಂಸದರು ಗೈರು; ಶಿಂಧೆ ಬಣ ಸೇರುವ ಸಾಧ್ಯತೆ

ಸೇನಾ-ಯುಬಿಟಿ ಕಾರ್ಯಕರ್ತರಿಂದ ಬಂಡಾಯ ನಾಯಕರ ಮುಖಕ್ಕೆ ಸಗಣಿ ಬಳಿಯುವುದಾಗಿ ಬೆದರಿಕೆ!

ಪರಿಷತ್‌ ಚುನಾವಣೆ: ಅಡ್ಡ ಮತದಾನ ಮಾಡಿಬಿಟ್ರಾ ಜಿ.ಟಿ ದೇವೇಗೌಡ? ಜೆಡಿಎಸ್ ಗೆ 'ಕೈ' ಕೊಟ್ರಾ GTD!

ಸಮಾಜವಾದಿ ಪಕ್ಷಕ್ಕೆ ಶಾಕ್: 25-26 ಸಂಸದರು ಪಕ್ಷ ತೊರೆಯಲು ಸಿದ್ಧ; ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸ್ಫೋಟಕ ಹೇಳಿಕೆ..!

ದಲಿತ ವ್ಯಕ್ತಿಗೆ ಆರ್‌ಎಸ್‌ಎಸ್ ಬಗ್ಗೆ ಕಾಳಜಿ ಏಕೆ? RSS ತಂಟೆಗೆ ಬಂದವರು ಉಳಿದಿಲ್ಲ; ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ

SCROLL FOR NEXT