ಬೆಂಗಳೂರು: ಮುಖ್ಯಮಂತ್ರಿಯವರು, ಉಪಮುಖ್ಯಮಂತ್ರಿಯವರು ಯಾವಾಗಲೂ ಜೊತೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ವಿಪಕ್ಷದಲ್ಲಿ ಇದ್ದಾಗಿನಿಂದಲೂ ಪ್ರತಿ ಹೋರಾಟವನ್ನೂ ಸೇರಿ ಇಲ್ಲಿಯತನಕ ಒಟ್ಟಾಗಿ ಕೆಲಸ ಮಾಡಿಕೊಂಡೆ ಬಂದಿದ್ದಾರೆ. ಮುಂದೆಯೂ ಸಹ ಒಟ್ಟಾಗಿ ಇರುತ್ತೇವೆ ಎಂದು ಹೇಳಿದ್ದಾರೆ. ಉಳಿದ ವಿಚಾರಗಳನ್ನು ಪಕ್ಷದ ಹೈಕಮಾಂಡ್ ಗಮನಿಸುತ್ತದೆ ಎಂದು ಬಮೂಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ಹೇಳಿದರು.
ಸದಾಶಿವನಗರದ ನಿವಾಸದಲ್ಲಿ ಗುರುವಾರ ನಡೆದ ಮಾದ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು. ಹಾಲು ಜೇನು ಬೆರೆತು ಹೋಗಿದೆ ಹಾಗೂ ಪ್ರತಿ ಅಧಿವೇಶನಕ್ಕೂ ಮೊದಲು ಇಬ್ಬರೂ ನಾಯಕರು ಒಗ್ಗಟ್ಟಾಗಿ ಇದ್ದೇವೆ ಎಂದು ಸೂಚಿಸುತ್ತಾ ಇರುವುದು ಹೈಕಮಾಂಡ್ ಆದೇಶವೇ ಎಂದು ಕೇಳಿದಾಗ, "ನನಗೆ ಇದರ ಬಗ್ಗೆ ಮಾಹಿತಿಯಿಲ್ಲ, ತಿಳುವಳಿಕೆಯೂ ಇಲ್ಲ. ನನಗೆ ಅಷ್ಟು ರಾಜಕಾರಣವೂ ಗೊತ್ತಾಗುವುದಿಲ್ಲ. ನೀವು ವಿಶ್ಲೇಷಣೆ, ವ್ಯಾಖ್ಯಾನ ಮಾಡುವುದಕ್ಕೆ ಹೇಳಿದ್ದಾರೆ ಎನಿಸುತ್ತದೆ ನೀವು ಏನು ಬೇಕಾದರೂ ಮಾಡಿ" ಎಂದರು.
ಮಾಧ್ಯಮದವರು ಹೇಳಿದ್ದಲ್ಲ ಕುಮಾರಸ್ವಾಮಿ ಅವರು ಹೇಳಿದ್ದು ಎಂದಾಗ, "ನಾವೇನು ಚೆನ್ನಾಗಿಲ್ಲ ಎಂದು ಹೇಳಿಲ್ಲ. ನಾವು ಒಂದು ಪಕ್ಷದಲ್ಲಿದ್ದು. ಆ ಪಕ್ಷದ ಸಿದ್ಧಾಂತ, ನಾಯಕತ್ವ ಎಲ್ಲದಕ್ಕೂ ಗೌರವ ನೀಡಬೇಕಾಗುತ್ತದೆ. ಆ ಗೌರವನ್ನ ಕೊಡ್ತಾ ಇದಾರೆ" ಎಂದು ಹೇಳಿದರು. ಹಾಲು ಬೇಕು ಎಂದರೆ ಡೈರಿ ವೃತ್ತಕ್ಕೆ ಬನ್ನಿ ನೀಡುತ್ತೇನೆ. ಮೈಸೂರು ಪಾಕ್, ತಾಜಾ ಖೋವಾ ತಿನ್ನಲು ನೀಡುತ್ತೇನೆ. ಜೇನಿನ ಬಗ್ಗೆ ನನಗೆ ಗೊತ್ತಿಲ್ಲ. ಜೇನು ಮಡಿಕೇರಿ, ಮೈಸೂರು, ಚಾಮರಾಜನಗರದ ಕಡೆ ಜಾಸ್ತಿ. ನಮ್ಮಲ್ಲೂ ಇರುತ್ತದೆ. ಆದರೆ ಮಾರಾಟ ಮಾಡುವಷ್ಟು ಇರುವುದಿಲ್ಲ" ಎಂದರು.
ಮುಖ್ಯಮಂತ್ರಿಯವರು ಹಾಗೂ ಉಪಮುಖ್ಯಮಂತ್ರಿಯವರು ಇಬ್ಬರೂ ಫೋನ್ ಕದ್ದಾಲಿಕೆ ಮಾಡಿದ್ದಾರೆ ಎನ್ನುವ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು ಇದರ ಬಗ್ಗೆ ನನಗೆ ಗೊತ್ತಿಲ್ಲ. ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದಲ್ಲಿದ್ದಾರೆ, ಇವರು ರಾಜ್ಯ ಸರ್ಕಾರದಲ್ಲಿದ್ದಾರೆ. ನಾವು ಸಾಮಾನ್ಯ ಕಾರ್ಯಕರ್ತರು. ನಮಗೆ ಇದರ ಬಗ್ಗೆ ಮಾಹಿತಿ ಇರುವುದಿಲ್ಲ" ಎಂದರು. "ಇದರ ಬಗ್ಗೆ ಅವರನ್ನೇ ಕೇಳಬೇಕು. ಅವರು ಮುಖ್ಯಮಂತ್ರಿಯಾಗಿದ್ದವರು. ಹಾಗಾಗಿ ಅವರಿಗೆ ಎಲ್ಲಾ ವಿಚಾರಗಳು ಗೊತ್ತಿರುತ್ತದೆ. ಅವರನ್ನು ಕೇಳಿದರೆ ಉತ್ತರ ಗೊತ್ತಿರುತ್ತದೆ" ಎಂದು ಹೇಳಿದರು.
ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯ
ಕೆಪಿಎಸ್ ಇ ಪರೀಕ್ಷೆಯಲ್ಲಿ ಒಂದೇ ಕೇಂದ್ರದಲ್ಲಿನ 15 ಕ್ಕೂ ಹೆಚ್ಚು ಅಭ್ಯರ್ಥಿಗಳು ಉತ್ತೀರ್ಣರಾಗಿರುವ ಬಗ್ಗೆ ಮಾತನಾಡಿದ ಅವರು ಇದು ಗಂಭೀರವಾದ ವಿಚಾರ. ಒಂದೇ ಕ್ಲಾಸ್ ರೂಮ್ ನಲ್ಲಿ ಇರುವವರು ಅತಿ ಹೆಚ್ಚು ಅಂಕ ಗಳಿಸಿ ಆಯ್ಕೆಯಾಗಿದ್ದಾರೆ ಎಂದರೆ ಎಲ್ಲರಿಗೂ ಸಹ ಅಪನಂಬಿಕೆ ಬರುವುದಕ್ಕೆ ಪ್ರಾರಂಭವಾಗುತ್ತದೆ. ನಕಲು ಆಗಿರಬಹುದಾ ಎನ್ನುವ ಅನುಮಾನ ಇರಬಹುದು.
ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ, ನೊಂದಂತಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯ. ಏಕೆಂದರೆ ಈಗಿನ ಕಾಲದಲ್ಲಿ ಉದ್ಯೋಗ ಎನ್ನುವುದು ಮರೀಚಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಆರೋಪಗಳು ಬಂದಾಗ ಯುವಕರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಂಡು ಸರ್ಕಾರ ಆದಷ್ಟು ಬೇಗೆ ಮಾಹಿತಿ ನೀಡಬೇಕು" ಎಂದರು.