ದಾವಣಗೆರೆ: ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ. ಈ ಚುನಾವಣೆಯಲ್ಲಿ ಈ ಹಿಂದಿನ ಉಪ ಚುನಾವಣೆಯಂತೆ ಬಿಜೆಪಿ ಸೋಲಲಿದೆ ಎಂದಿದ್ದಾರೆ.
ಕಾಂಗ್ರೆಸ್‌ನ ಇತರ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನವನ್ನು ತಳ್ಳಿಹಾಕಿದ ಅವರು, ಎಲ್ಲರನ್ನೂ ಮನವೊಲಿಸಿ ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಉಪ ಚುನಾವಣೆ ನಡೆಯಲಿದೆ. ಹಿರಿಯ ಕಾಂಗ್ರೆಸ್ ಶಾಸಕರಾದ ಎಚ್ ವೈ ಮೇಟಿ ಮತ್ತು ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಚುನಾವಣೆ ಅನಿವಾರ್ಯವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡೂ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ನನಗೆ ನೂರಕ್ಕೆ ನೂರು ವಿಶ್ವಾಸವಿದೆ. ಬಿಜೆಪಿಯವರು ಗೆಲ್ಲುತ್ತೇವೆ ಎಂದು ಹೇಳಬಹುದು, ಆದರೆ ಅವರು ಎಲ್ಲಿ ಗೆದ್ದಿದ್ದಾರೆ? ಹಿಂದಿನ ಉಪಚುನಾವಣೆಯಲ್ಲಿ ಅವರು ಇದೇ ರೀತಿಯ ಹೇಳಿಕೆ ನೀಡಿದ್ದರು. ನಾವು ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ ಮತ್ತು ಎಚ್‌ಡಿ ಕುಮಾರಸ್ವಾಮಿ ಅವರ ಪುತ್ರರನ್ನು ಸೋಲಿಸಲಿಲ್ಲವೇ? ಎಂದರು.
ಬಿಜೆಪಿಯವರು ಹೇಳಿಕೊಳ್ಳಬಹುದು, ಆದರೆ ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಭರವಸೆಗಳನ್ನು ಈಡೇರಿಸಿದೆ ಮತ್ತು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದೆ. ರಾಜ್ಯದ ಜನರು ಕಾಗ್ರೆಸ್ ಪರವಾಗಿದ್ದಾರೆ. ಹಿಂದಿನ ಉಪಚುನಾವಣೆಯಲ್ಲಿ ನಾವು ಅದನ್ನು ಸಾಬೀತುಪಡಿಸಿದ್ದೇವೆ. ದಲಿತರು, ಹಿಂದುಳಿದ ವರ್ಗದವರು, ಬಡವರು, ರೈತರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರೂ ನಮ್ಮೊಂದಿಗಿದ್ದಾರೆ ಎಂದು ಅವರು ಹೇಳಿದರು.
ಉಪಚುನಾವಣೆ ಫಲಿತಾಂಶವು ರಾಜ್ಯದಲ್ಲಿ 2028 ರ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂಬ ಕೆಲ ಬಿಜೆಪಿ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ. ಅವರು ಗೆಲ್ಲುವುದಿಲ್ಲ. ನಾವು ಅಧಿಕಾರದಲ್ಲಿದ್ದೇವೆ, ನಾವು ಈ ಹಿಂದೆ ಮೂರು ಉಪಚುನಾವಣೆಗಳನ್ನು ಗೆದ್ದಿದ್ದೇವೆ. ಈ ಉಪಚುನಾವಣೆಯಲ್ಲೂ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
2024ರ ನವೆಂಬರ್‌ನಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳಾದ ಸಂಡೂರು, ಶಿಗ್ಗಾಂವ್ ಮತ್ತು ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಚುನಾವಣೆ ನಡೆಯಲಿರುವ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಬಿಜೆಪಿ ಸೋಲಲಿದೆ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಕ್ಷದ ಟಿಕೆಟ್‌ಗಾಗಿ ತೀವ್ರ ಪೈಪೋಟಿಯ ನಡುವೆ ಹಲವು ಸುತ್ತಿನ ಚರ್ಚೆಯ ನಂತರ, ಕಾಂಗ್ರೆಸ್ ಭಾನುವಾರ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕ್ರಮವಾಗಿ ಉಮೇಶ್ ಮೇಟಿ ಮತ್ತು ಸಮರ್ಥ ಮಲ್ಲಿಕಾರ್ಜುನ ಅವರನ್ನು ಪಕ್ಷದ ಅಭ್ಯರ್ಥಿಗಳಾಗಿ ಘೋಷಿಸಿತು.
ಎರಡೂ ಕ್ಷೇತ್ರಗಳಲ್ಲಿ ದಿವಂಗತ ಶಾಸಕರ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಉಮೇಶ್ ಮೇಟಿ ಎಚ್ ವೈ ಮೇಟಿ ಅವರ ಪುತ್ರನಾದರೆ, ಸಮರ್ಥ ಮಲ್ಲಿಕಾರ್ಜುನ್ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ. ಅದರಲ್ಲೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಹಿನ್ನೆಲೆಯಲ್ಲಿ ಪಕ್ಷದೊಳಗಿನ ಅಸಮಾಧಾನ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿಎಂ, ಅಭ್ಯರ್ಥಿ ಆಯ್ಕೆ ಪಕ್ಷದ ಸರ್ವಾನುಮತದ ನಿರ್ಧಾರ ಎಂದರು.
ಟಿಕೆಟ್ ಆಕಾಂಕ್ಷಿ ಸಾದಿಕ್ ಪೈಲ್ವಾನ್ ಅವರು ದಾವಣಗೆರೆ ದಕ್ಷಿಣದಲ್ಲಿ ಬಂಡಾಯವಾಗಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ ಎಂದರು.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದವರ ಸಂಖ್ಯೆ ಗಣನೀಯವಾಗಿ ಇರುವುದರಿಂದ ಅವರಿಗೆ ಟಿಕೆಟ್ ನೀಡಬೇಕೆಂದು ಮುಸ್ಲಿಂ ಬಾಂಧವರಿಂದಲೂ ಭಾರಿ ಬೇಡಿಕೆ ಇತ್ತು. ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡುವುದಕ್ಕೆ ಕಾಂಗ್ರೆಸ್‌ನ ಕೆಲವು ಬಣಗಳು ವಿರೋಧ ವ್ಯಕ್ತಪಡಿಸಿದ್ದವು.