ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ - ಶಾಸಕ ಮುನಿರತ್ನ ನಡುವೆ ವಾಗ್ವಾದ ನಡೆಯಿತು. ಈ ವೇಳೆ ನನ್ನ ಯೋಗ್ಯತೆ, ದಮ್ಮು, ತಾಕತ್ತು ತೋರಿಸಬೇಕಾ ಎಂದು ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ಡಿಸಿಎಂ ಡಿಕೆಶಿ ಅವರು ಆ ದಿನಗಳ ಗೂಂಡಾಗಿರಿ ಬಿಡುವುದಿಲ್ಲ ಎಂದು ಟೀಕಿಸಿದೆ.
ಬೆಂಗಳೂರಿಗೆ ಸಂಬಂಧಿಸಿದಂತೆ ಚರ್ಚೆ ವೇಳೆ ನನ್ನ ಪ್ರಶ್ನೆಗೆ ಉತ್ತರ ಕೊಡುವ ತಾಕತ್ತು ಇದೆಯಾ ಎಂದು ಶಾಸಕ ಮುನಿರತ್ನ ಕೇಳಿದಾಗ ನನ್ನ ಯೋಗ್ಯತೆ, ತಾಕತ್ತು, ದಮ್ಮು ತೋರಿಸಬೇಕಾ ಎಂದು ಸಿಡಿದೆದ್ದರು. ಮಾತಿಗೆ ಮಾತಿಗೆ ಬೆಳೆದು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ದೊಡ್ಡ ಗದ್ದಲವೇ ನಡೆಯಿತು.
ಡಿಕೆ ಶಿವಕುಮಾರ್ ಸದನದಲ್ಲಿ ಮಾತನಾಡಿರುವ ವಿಡಿಯೋವನ್ನು ಟ್ವೀಟ್ ಮೂಲಕ ಹಂಚಿಕೊಂಡಿರುವ ಕರ್ನಾಟಕ ಬಿಜೆಪಿ, ಡಿಸಿಎಂ ಡಿಕೆಶಿ ಅವರಿಗೆ ಆ ದಿನಗಳು ನೆನಪಾಗಿದಂತಿದೆ. ರೌಡಿ ಕೊತ್ವಾಲನ ಶಿಷ್ಯ ಎಂಬುದನ್ನು ಸದನದಲ್ಲಿ ತೋರಿಸುವ ಯಾವ ಅಗತ್ಯವೂ ಇರಲಿಲ್ಲ.
ಉಪಮುಖ್ಯಮಂತ್ರಿಗಳ ರೌಡಿಸಂ ಇತಿಹಾಸ ರಾಜ್ಯದ ಜನತೆಗೆ ತಿಳಿದಿದೆ. ಸದನಕ್ಕೆ ಕಳುಹಿಸಿದ್ದು ತೋಳ್ಬಲ, ಧಮ್ಮು ತಾಕತ್ತಿನ ಪ್ರದರ್ಶನಕ್ಕಲ್ಲ ಎನ್ನುವುದನ್ನು ಡಿಕೆಶಿ ಅವರು ತಿಳಿದುಕೊಳ್ಳಲಿ ಎಂದು ಕಿಡಿಕಾರಿದೆ.
ನರಿನ ಸಿಂಹಾಸನದ ಮೇಲೆ ಕೂರಿಸಿದರೂ ಅದರ ಚಾಳಿ ಬಿಡುವುದಿಲ್ಲ. ಹಾಗೆ ಕೊತ್ವಾಲ್ ಶಿಷ್ಯಂದಿರನ್ನು ಉನ್ನತಮಟ್ಟದ ಸ್ಥಾನಕ್ಕೆ ಕೂರಿಸಿದರೂ ಗೂಂಡಾಗಿರಿಯನ್ನು ಬಿಡುವುದಿಲ್ಲ ಎನ್ನುವುದಕ್ಕೆ ಆ ದಿನಗಳ ಡಿಕೆ ಶಿವಕುಮಾರ್ ಅವರೇ ಸಾಕ್ಷಿ. ಮಿಸ್ಟರ್ ಡಿಕೆ ಶಿವಕುಮಾರ್ ಅವರು ಜನರ ಸಂಕಟ, ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಚರ್ಚೆ ಮಾಡಬೇಕಾದ ಸದನವನ್ನು ಧಮ್ಕಿ ಹಾಕುವುದಕ್ಕೆ ಬಳಸಿಕೊಂಡಿದ್ದಾರೆ.
ಡಿಸಿಎಂ ಆಗಿರುವಾಗಲೇ ಹೀಗೆ ಇನ್ನೂ ಸಿಎಂ ಕುರ್ಚಿ ಸಿಕ್ಕರೆ ರಾಜ್ಯದಲ್ಲಿ ಕೊತ್ವಾಲ್ ದುರಾಡಳಿತವೇ ಗ್ಯಾರಂಟಿ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.