ನವದೆಹಲಿ: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ.
ಇಂದು ದೆಹಲಿಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಸ್ಟಿಂಗ್ ಆಪರೇಷನ್ ಪ್ರಕರಣ, ಇದರ ಸಂಬಂಧವಾಗಿ ರಾಜದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಪೊನ್ನಣ್ಣ ಸಹ ಉಪಸ್ಥಿತರಿದ್ದರು.
ರಾಹುಲ್ ಗಾಂಧಿ ಜೊತೆ ಸುಮಾರು 45 ನಿಮಿಷಗಳಿಗೂ ಹೆಚ್ಚು ಚರ್ಚೆ ನಡೆಸಿದ ಸಿದ್ದರಾಮಯ್ಯ, ನೀವು ಹೇಳಿದ್ರಿ ಎಂಬ ಒಂದೇ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಬೇರೆಯವರ ಒತ್ತಡದಿಂದ ನಾನು ರಾಜೀನಾಮೆ ನೀಡಿಲ್ಲ. ಆದರೆ ನಾನು ಅಧಿಕಾರದಿಂದ ಇಳಿದ ಬಳಿಕ ನನ್ನ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. ಇದೆಲ್ಲ ಕೆಲವರು ಸೃಷ್ಟಿಸಿದ ಬೆಳವಣಿಗೆ ಎಂದು ಹೇಳುವ ಮೂಲಕ ಸ್ಟಿಂಗ್ ಪ್ರಕರಣದ ಬಗ್ಗೆ ರಾಹುಲ್ ಗಾಂಧಿ ಎದುರೇ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮುಂದೆ ಚುನಾವಣೆಯಲ್ಲೂ ಸ್ಪರ್ಧಿಸಲ್ಲ ಎಂದು ಹೇಳಿದ್ದೇನೆ. ನಾನು ಮತ್ತೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೂ ಅಲ್ಲ. ಅದಾಗ್ಯೂ ಈ ರಾಜಕೀಯ ಷಡ್ಯಂತ್ರ ನಡೆಸಿದ್ದು ಯಾರು? ಆ ವಿಡಿಯೋ ಹಂಚಿಕೊಂಡವರು ಯಾರೆಂದು ನನಗೆ ಗೊತ್ತು. ಆ ವಿಡಿಯೋ ಮಾಡಿದ್ದು ಯಾರು, ಹಿಂದಿನ ಉದ್ದೇಶವೇನು? ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ಹೆಸರಿಗೆ ಧಕ್ಕೆ ತರಲಾಗುತ್ತಿದೆ. ಇದರಿಂದ ನನಗೆ ತೀವ್ರ ಬೇಸರವಾಗಿದೆ. ನನ್ನ ಇಮೇಜ್ಗೆ ಧಕ್ಕೆ ಆದ್ರೆ ಚುನಾವಣಾ ಪ್ರಚಾರಕ್ಕೆ ಬರಲ್ಲ ಎಂದು ಮಾಜಿ ಸಿಎಂ, ರಾಹುಲ್ ಗಾಂಧಿಗೆ ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗಿದೆ.