ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಕಾರ್ಯಾಚರಣೆಯಲ್ಲಿ ಪೊಲೀಸರು ಯಾರಿಗೆ ಕ್ಲೀನ್ ಚಿಟ್ ಕೊಡುತ್ತಾರೆ ಎಂಬುದು ಮುಖ್ಯವಾಗಲಿದೆ. ಕೃಪಾ ಆಳ್ವಾ ಅಥವಾ ಮತ್ತೊಬ್ಬರಿಗೆ ಕ್ಲೀನ್ ಚಿಟ್ ಕೊಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಕಾರ್ಯಾಚರಣೆ ಬಗ್ಗೆ ತನಿಖೆ ನಡೆಯುತ್ತಿದೆ. ಯಾವ ಕಾರಣಕ್ಕೆ ಇದು ನಡೆಯಿತು ಎಂಬ ಅಂಶ ಹೊರಬರಬೇಕಿದೆ ಎಂದರು. ಡಿ.ಕೆ.ಶಿವಕುಮಾರ್ ಬಹಳ ಕಷ್ಟಪಟ್ಟು ಮುಖ್ಯಮಂತ್ರಿ ಆಗಿರುವುದಾಗಿ ಹೇಳಿದ್ದಾರೆ. ಅವರು ಶ್ರಮಪಟ್ಟೇ ಅಧಿಕಾರ ಪಡೆದುಕೊಂಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ತೊಂದರೆ ಕೊಡಲಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ.
ಈ ಹಿಂದೆ ಕಾಂಗ್ರೆಸ್ ಜತೆ ಸೇರಿ ಸಿ.ಎಂ ಆಗಲು ನಾನು ಯಾರಿಗೂ ಅರ್ಜಿ ಹಾಕಿರಲಿಲ್ಲ. ಅವರೇ ಬಂದು ಸಿ.ಎಂ ಮಾಡಿದ್ದರು. ಆಗ ರೈತರ ಸಾಲ ಮನ್ನಾ ಮಾಡಬೇಕಾದರೆ ಅವರು ಎಷ್ಟು ಬೆಂಬಲ ನೀಡಿದರು ಅನ್ನುವುದು ನನಗೆ ಮಾತ್ರ ಗೊತ್ತು. ಅವರು ಸಿ.ಎಂ ಆದರೆ ನಾನು ಯಾಕೆ ಅಸೂಯೆಪಡಲಿ. ಮುಖ್ಯಮಂತ್ರಿ ಸ್ಥಾನ ನಮ್ಮಪ್ಪನ ಮನೆ ಆಸ್ತಿಯೇ ಎಂದು ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ್ ಪ್ರತಿಬಾರಿಯೂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸುಳ್ಳೇ ಮನೆದೇವರು ಎಂದು ದೂರುತ್ತಾರೆ. ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ ಇವರು ಮಾಡಿದ್ದೇನು? ದಕ್ಷಿಣ ಕನ್ನಡ ಜಿಲ್ಲೆಗೆ ₹32 ಸಾವಿರ ಕೋಟಿ ಘೋಷಣೆ ಮಾಡಿದರು. ಈ ಸರ್ಕಾರದ ಬಳಿ ಅಷ್ಟು ಹಣ ಇದೆಯಾ? ಇದು ಸುಳ್ಳು ಅಲ್ಲವೇ? ಇವರ ಮನೆದೇವರು ಯಾವುದು ಎಂದು ಹೇಳಲಿ ಎಂದು ಕೇಳಿದರು.