ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಮೈಸೂರಿನಲ್ಲಿ ಸಂವಿಧಾನ ದಿನಾಚರಣೆ: ಕಾಂಗ್ರೆಸ್ ನಾಯಕರ ಒಗ್ಗಟ್ಟು ಸಂದೇಶಕ್ಕೆ ಸಾಕ್ಷಿಯಾಯಿತೇ ವೇದಿಕೆ ?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಅವರ ನಡುವಿನ ಭಿನ್ನಾಭಿಪ್ರಾಯಗಳು, ತಮ್ಮ ತಮ್ಮ ರಾಜಕೀಯ ಪ್ರಭಾವವನ್ನು ಪ್ರದರ್ಶಿಸಲು ಇಬ್ಬರೂ ಪ್ರತ್ಯೇಕ ಸಭೆಗಳನ್ನು ನಡೆಸುವ ಸಾಧ್ಯತೆಗಳ ಕುರಿತು ಎದ್ದಿದ್ದ ಊಹಾಪೋಹಗಳು

Sumana Upadhyaya
Updated On : 27 Nov 2026, 8:29 am

ಮೈಸೂರು: ರಾಜ್ಯದ ಇಬ್ಬರು ಪ್ರಮುಖ ಕಾಂಗ್ರೆಸ್ ನಾಯಕರ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಬಹುದು ಎಂದು ಆರಂಭದಲ್ಲಿ ನಿರೀಕ್ಷಿಸಲಾಗಿದ್ದ ಮೈಸೂರಿನಲ್ಲಿ ನಿನ್ನೆ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮ, ಉಭಯ ನಾಯಕರ ನಡುವಿನ ಸೌಹಾರ್ದ ಮತ್ತು ರಾಜಕೀಯ ಒಗ್ಗಟ್ಟಿನ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಪಕ್ಷದೊಳಗಿನ ಒಗ್ಗಟ್ಟಿನ ಸಂದೇಶ ಸಾರಲು ಈ ಕಾರ್ಯಕ್ರಮ ಅವಕಾಶ ಕಲ್ಪಿಸಿತು ಎಂದು ಹೇಳಬಹುದು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಅವರ ನಡುವಿನ ಭಿನ್ನಾಭಿಪ್ರಾಯಗಳು, ತಮ್ಮ ತಮ್ಮ ರಾಜಕೀಯ ಪ್ರಭಾವವನ್ನು ಪ್ರದರ್ಶಿಸಲು ಇಬ್ಬರೂ ಪ್ರತ್ಯೇಕ ಸಭೆಗಳನ್ನು ನಡೆಸುವ ಸಾಧ್ಯತೆಗಳ ಕುರಿತು ಎದ್ದಿದ್ದ ಊಹಾಪೋಹಗಳು, ಮಹದೇವಪ್ಪ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ತಣ್ಣಗಾದಂತೆ ಕಂಡುಬಂದವು.

Also Read

ಹಿರಿಯೂರು ಉಪಚುನಾವಣೆ ಟಿಕೆಟ್ ಹಂಚಿಕೆ ಗೊಂದಲ ಮಧ್ಯೆ ಬಿ.ಕೆ ಹರಿಪ್ರಸಾದ್ ಭೇಟಿ ಮಾಡಿದ ಜಮೀರ್ ಅಹ್ಮದ್; AHINDA ಒಗ್ಗಟ್ಟಿನ ಸಂದೇಶವೇ?

ಮೊನ್ನೆ ಬುಧವಾರ ತಡರಾತ್ರಿ ಮಹದೇವಪ್ಪ ಅವರು ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ, ಆಪ್ತರ ಸಮ್ಮುಖದಲ್ಲಿ ಇಬ್ಬರೂ ಚರ್ಚೆ ನಡೆಸಿದ ಬಳಿಕ ಈ ಸೌಹಾರ್ದ ಬೆಳವಣಿಗೆ ಕಂಡುಬಂದಿದೆ. ನಿನ್ನೆ ಗುರುವಾರ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರ ಕೈ ಹಿಡಿದು ಮೇಲಕ್ಕೆತ್ತುವ ಮೂಲಕ ಈ ಸೌಹಾರ್ದಕ್ಕೆ ಮತ್ತಷ್ಟು ಪುಷ್ಟಿ ನೀಡಿದರು.

Advertisement

Advertisement

ಕಾಂಗ್ರೆಸ್‌ನಲ್ಲಿ ನಾಯಕತ್ವದ ಪ್ರಶ್ನೆ, ವಿಶೇಷವಾಗಿ ಮೈಸೂರು ಭಾಗದಲ್ಲಿ ದಲಿತ ಮತ್ತು ಅಹಿಂದ ಸಮುದಾಯಗಳ ಪ್ರಭಾವಿ ನಾಯಕತ್ವದ ವಿಚಾರವಾಗಿ ನಡೆಯುತ್ತಿರುವ ಚರ್ಚೆಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ರಾಜಕೀಯ ಮಹತ್ವ ಪಡೆದುಕೊಂಡಿದೆ. ದಶಕಗಳಿಂದ ನಿಕಟ ರಾಜಕೀಯ ಒಡನಾಟ ಹೊಂದಿರುವ ಇಬ್ಬರು ಹಿರಿಯ ನಾಯಕರ ನಡುವಿನ ಭಿನ್ನಾಭಿಪ್ರಾಯಗಳ ಕುರಿತ ಚರ್ಚೆಯೂ ಈ ಬೆಳವಣಿಗೆ ಹಿನ್ನೆಲೆಯಲ್ಲಿತ್ತು.

Also Read

ಒಮ್ಮೆ ಸ್ನೇಹಿತನಾದವನು ಎಂದೆಂದಿಗೂ ಸ್ನೇಹಿತನೇ; ಜಗಳವೇ ಆಡಿಲ್ಲ, ಮುನಿಸು ಎಲ್ಲಿಂದ ಬಂತು? ಸಿದ್ದರಾಮಯ್ಯ ಭೇಟಿ ಬಳಿಕ ಮಹದೇವಪ್ಪ ಸ್ಪಷ್ಟನೆ

ರಾಜ್ಯಮಟ್ಟದ ಸಂವಿಧಾನ ದಿನಾಚರಣೆಯಿಂದ ಮಹದೇವಪ್ಪ ದೂರ ಉಳಿದು, ಬದಲಿಗೆ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿತ್ತು. ಹಿಂದಿನ ಪೂರ್ವಸಿದ್ಧತಾ ಸಭೆಗೆ ಅವರು ಗೈರಾಗಿದ್ದುದೂ ಸಿದ್ದರಾಮಯ್ಯ ಅವರಿಂದ ಮಹದೇವಪ್ಪ ದೂರವಾಗುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ಕಾರಣವಾಗಿತ್ತು.

ಡಿ ಕೆ ಶಿವಕುಮಾರ್ ಸಂಪುಟದಲ್ಲಿ ಮಹದೇವಪ್ಪ ಅವರಿಗೆ ಸ್ಥಾನ ದೊರೆಯದಿರುವುದು ಹಾಗೂ ಪಕ್ಷದ ಹೈಕಮಾಂಡ್‌ಗೆ ಸಿದ್ದರಾಮಯ್ಯ ಶಿಫಾರಸು ಮಾಡಿದ್ದ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಹದೇವಪ್ಪನವರ ಹೆಸರು ಕೈಬಿಟ್ಟಿರುವುದು ಸೇರಿದಂತೆ ಹಲವು ರಾಜಕೀಯ ಬೆಳವಣಿಗೆಗಳು ಉಭಯ ನಾಯಕರ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವೆಂದು ಹೇಳಲಾಗಿತ್ತು.

Also Read

'ನೀವು ಇಂಥ ಪ್ರಶ್ನೆ ಕೇಳಿ ಕಾಂಗ್ರೆಸ್ ಪಾರ್ಟಿಯನ್ನು ಡಿವೈಡ್ ಮಾಡೋಕೆ ನೋಡ್ತಿದ್ದೀರಿ; ಮಹದೇವಪ್ಪ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸ್ತಾರೆ': ಸಿದ್ದರಾಮಯ್ಯ ಗರಂ; Video

ಇಬ್ಬರೂ ಪ್ರತ್ಯೇಕ ಕಾರ್ಯಕ್ರಮಗಳನ್ನು ನಡೆಸುವ ಸಾಧ್ಯತೆ ಸಂವಿಧಾನ ದಿನಾಚರಣೆಗೆ ರಾಜಕೀಯ ಬಣ್ಣ ಪಡೆದುಕೊಳ್ಳುವಂತೆ ಮಾಡಿತ್ತು. ಈ ಕಾರ್ಯಕ್ರಮಗಳು ತಮ್ಮ ತಮ್ಮ ರಾಜಕೀಯ ಶಕ್ತಿ ಮತ್ತು ಬೆಂಬಲದ ನೆಲೆಯನ್ನು ಪ್ರದರ್ಶಿಸುವ ವೇದಿಕೆಯಾಗಬಹುದು ಎಂದು ವಿಶ್ಲೇಷಿಸಲಾಗಿತ್ತು. ಆದರೆ, ನಿನ್ನೆಯ ಬೆಳವಣಿಗೆಗಳು ಈ ರಾಜಕೀಯ ಚಿತ್ರಣವನ್ನು ಬದಲಿಸಿದಂತೆ ಕಂಡುಬಂದಿವೆ.

ಬಿಜೆಪಿ ಬಯಸಿದಂತೆ ಸಂವಿಧಾನ ಬದಲಿಸುವುದಲ್ಲ, ಅಗತ್ಯ ತಿದ್ದುಪಡಿಗಳಾಗಬೇಕು: ಡಿಕೆಎಸ್

ಬಿಜೆಪಿಯ ಆಶಯದಂತೆ ಸಂವಿಧಾನವನ್ನು ಬದಲಿಸುವುದಲ್ಲ, ಜನರ ಭಾವನೆಗಳು ಮತ್ತು ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಪರಿಹಾರ ಕಲ್ಪಿಸುವ ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ನಿನ್ನೆ ಕೊಪ್ಪಳ ತಾಲ್ಲೂಕಿನ ಬಸಾಪುರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಸಂವಿಧಾನ ಎಲ್ಲ ವರ್ಗದ ಜನರಿಗೂ ಅನ್ವಯವಾಗುವಂತೆ ಜಾತ್ಯತೀತತೆಗೆ ಸಂಬಂಧಿಸಿದ ಒಂದು ಅಥವಾ ಎರಡು ಪದಗಳನ್ನು ಸೇರಿಸಿದ್ದರು ಎಂದು ಹೇಳಿದರು.

ನಿಮ್ಮ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371(ಜೆ) ವಿಧಿಯಿಂದ ಅನುಕೂಲವಾಗಿದೆ. ಇದು ಸಂವಿಧಾನ ಬದಲಿಸುವ ವಿಚಾರವಲ್ಲ. ಈ ಭಾಗದ ಜನರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು 371(ಜೆ) ವಿಧಿಯನ್ನು ಜಾರಿಗೆ ತರಲಾಯಿತು. ಇದರಿಂದ ನಿಮಗೆ ಎಷ್ಟು ಅನುಕೂಲವಾಗಿದೆ ಎಂಬುದು ನಿಮಗೆ ಗೊತ್ತಿದೆ. ಜನರಿಗೆ ಕಾಲೇಜುಗಳಲ್ಲಿ ಸೀಟುಗಳು ದೊರೆತಿವೆ, ಮೀಸಲಾತಿಯ ಪ್ರಯೋಜನವಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement