ಸಾಂದರ್ಭಿಕ ಚಿತ್ರ  
ರಾಜಕೀಯ

ಸೋತ ಕ್ಷೇತ್ರಗಳಿಂದ ಕಾಂಗ್ರೆಸ್‌ ಹೊಸ ಅಭಿಯಾನ: 2028ರ ಚುನಾವಣೆಗೆ ಪಕ್ಷಗಳ ತಯಾರಿ ಹೇಗಿದೆ?

ರಾಜ್ಯದಲ್ಲಿ ಆಡಳಿತಾರೂಢ ಸರ್ಕಾರ ಸತತವಾಗಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಾರದ ನಾಲ್ಕು ದಶಕಗಳ ಶಾಪವನ್ನು ಮುರಿಯುವ ಸಂಕಲ್ಪದಲ್ಲಿರುವ ಕಾಂಗ್ರೆಸ್, ವಿಧಾನಸಭಾ ಚುನಾವಣೆಯ ಸಿದ್ಧತೆಗಳನ್ನು ದುಪ್ಪಟ್ಟು ವೇಗದಲ್ಲಿ ನಡೆಸುತ್ತಿರುವಂತೆ ತೋರುತ್ತಿದೆ.

ಕರ್ನಾಟಕದಲ್ಲಿ 2028ರ ವಿಧಾನಸಭಾ ಚುನಾವಣೆಗೆ ಇನ್ನೂ ಸುಮಾರು 18 ತಿಂಗಳು ಬಾಕಿ ಇರುವಾಗಲೇ ರಾಜಕೀಯ ಪಕ್ಷಗಳು ಬಹುತೇಕ ಚುನಾವಣಾ ಮೂಡ್ ಗೆ ಬಂದಂತೆ ಕಾಣುತ್ತಿದೆ.

ರಾಜ್ಯದಲ್ಲಿ ಆಡಳಿತಾರೂಢ ಸರ್ಕಾರ ಸತತವಾಗಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಾರದ ನಾಲ್ಕು ದಶಕಗಳ ಶಾಪವನ್ನು ಮುರಿಯುವ ಸಂಕಲ್ಪದಲ್ಲಿರುವ ಕಾಂಗ್ರೆಸ್, ವಿಧಾನಸಭಾ ಚುನಾವಣೆಯ ಸಿದ್ಧತೆಗಳನ್ನು ದುಪ್ಪಟ್ಟು ವೇಗದಲ್ಲಿ ನಡೆಸುತ್ತಿರುವಂತೆ ತೋರುತ್ತಿದೆ.

ಸ್ಥಳೀಯ ಕಾರ್ಯಕರ್ತರಿಂದ ಪಡೆದ ಪ್ರತಿಕ್ರಿಯೆ ಆಧರಿಸಿ ಪಕ್ಷದ ಜಿಲ್ಲಾ ಘಟಕಗಳನ್ನು ಪುನರ್‌ರಚಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಪಕ್ಷ ಸೋತ 84 ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರನ್ನು ಸಂಘಟಿಸುವ ಉದ್ದೇಶದಿಂದ ರಾಜ್ಯ ನಾಯಕರು ‘ಭಾರತ್ ಜೋಡೋ 2.0’ ಮೂಲಕ ಈಗಾಗಲೇ ಕ್ಷೇತ್ರಕ್ಕಿಳಿದಿದ್ದಾರೆ.

ಇದರ ಜತೆಗೆ, ಮತದಾರರ ಪಟ್ಟಿಯ ಪರಿಷ್ಕರಣೆಗೆ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧದ ಅಭಿಯಾನವನ್ನೂ ಕಾಂಗ್ರೆಸ್ ತೀವ್ರಗೊಳಿಸಿದೆ. ತಳಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ರಾಜ್ಯದ 5,927 ಗ್ರಾಮ ಪಂಚಾಯಿತಿಗಳು ಹಾಗೂ ನಗರ ಪಾಲಿಕೆಗಳ ವಾರ್ಡ್‌ಗಳಲ್ಲಿ ತಲಾ ಆರು ಸದಸ್ಯರನ್ನು ಒಳಗೊಂಡ ಗ್ಯಾರಂಟಿ ಸಮಿತಿಗಳ ರಚನೆಯ ಉದ್ದೇಶ ಐದು ಪ್ರಮುಖ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಗೊಳಿಸುವುದಾಗಿ ಸರ್ಕಾರ ಹೇಳಿದೆ.

ಆದರೆ, ಇದನ್ನು ಸಾವಿರಾರು ಪಕ್ಷದ ಕಾರ್ಯಕರ್ತರಿಗೆ ಕೆಲವು ಹುದ್ದೆಗಳನ್ನು ನೀಡುವ ರಾಜಕೀಯ ಕ್ರಮವಾಗಿಯೂ ಕಾಣಲಾಗುತ್ತಿದೆ. 50,000 ಕೋಟಿಗೂ ಹೆಚ್ಚು ಬಜೆಟ್ ಅನುದಾನ ಹೊಂದಿರುವ ಈ ಯೋಜನೆಗಳ ಪ್ರಯೋಜನಗಳು ನೇರವಾಗಿ ಫಲಾನುಭವಿಗಳಿಗೆ ತಲುಪುವುದರಿಂದ, ಅವುಗಳ ಅನುಷ್ಠಾನದಲ್ಲಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಮಟ್ಟದ ಸಮಿತಿಗಳಿಗೆ ಹೆಚ್ಚಿನ ಪಾತ್ರವೇನೂ ಇಲ್ಲ ಎಂಬ ವಾದವೂ ಇದೆ. ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಖಚಿತಪಡಿಸುವ ಜವಾಬ್ದಾರಿ ಅಧಿಕಾರಿಗಳದ್ದಾಗಿದ್ದು, ಈಗಾಗಲೇ ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿಯೂ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸಲಾಗಿದೆ.

ವಾರ್ಷಿಕ 10 ಲಕ್ಷ ರೂ ಅನುದಾನದೊಂದಿಗೆ 10,000 ‘ಭಾರತ್ ಜೋಡೋ ಯುವ ಸಂಘ’ಗಳನ್ನು (ಯುವಕ ಸಂಘಗಳು) ಆರಂಭಿಸುವ ನಿರ್ಧಾರವೂ ಇದೇ ರೀತಿಯ ಮತ್ತೊಂದು ಪ್ರಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ. ಸಾರ್ವಜನಿಕ ಹಣವನ್ನು ಪಕ್ಷದ ಕಾರ್ಯಕರ್ತರ ಸಂಘಟನೆ ನಿರ್ಮಿಸಲು ಬಳಸಲಾಗುತ್ತಿದೆ ಎಂದು ಆರೋಪಿಸಿರುವ ಪ್ರತಿಪಕ್ಷಗಳು ಇದನ್ನು ಟೀಕಿಸಿವೆ.

ಇದೇ ವೇಳೆ, ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರದಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ರೈತರಿಗೆ ತಲಾ ಕೇವಲ 2,500 ಕೃಷಿ ಒಳಹರಿವುಗಳ ಮೇಲಿನ ಸಹಾಯಧನ ಘೋಷಿಸಿ, ಯುವ ಸಂಘಗಳಿಗೆ 1,010 ಕೋಟಿ ಮೀಸಲಿಡುವ ಸರ್ಕಾರದ ಆದ್ಯತೆ ಮತ್ತು ಅನುದಾನ ಹಂಚಿಕೆಯನ್ನೂ ಪ್ರತಿಪಕ್ಷಗಳು ಪ್ರಶ್ನಿಸಿವೆ.

ಬಹುಶಃ ಕಾಂಗ್ರೆಸ್ ಲೆಕ್ಕಚಾರ ಈ ಟೀಕೆಗಳು ಅಲ್ಪಕಾಲಿಕವಾಗಿರಬಹುದು; ಆದರೆ ದೀರ್ಘಾವಧಿಯಲ್ಲಿ ಪಕ್ಷಕ್ಕೆ ಇದರ ಲಾಭ ದೊರೆಯಬಹುದು ಎಂಬುದು ಅದರ ಲೆಕ್ಕಾಚಾರವಾಗಿರಬಹುದು.

ಯಡಿಯೂರಪ್ಪ ತವರು ಶಿಕಾರಿಪುರದಿಂದ ‘ಭಾರತ್ ಜೋಡೋ 2.0’

ಬಿಜೆಪಿಯ ಪ್ರಭಾವಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ತವರು ಶಿಕಾರಿಪುರದಿಂದ ಈ ವಾರದ ಆರಂಭದಲ್ಲಿ ‘ಭಾರತ್ ಜೋಡೋ 2.0’ ಪಾದಯಾತ್ರೆ ಆರಂಭವಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ಇದನ್ನು ಪೂರ್ಣ ಪ್ರಮಾಣದ ಚುನಾವಣಾ ಪ್ರಚಾರಕ್ಕೆ ಮುನ್ನದ ‘ವಾರ್ಮ್-ಅಪ್’ ಎಂದು ನೋಡಲಾಗುತ್ತಿದೆ.

ಆದರೆ, ಕಾಂಗ್ರೆಸ್ ಸರ್ಕಾರದ ಹಾಲಿ ಅವಧಿಯಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಆದಾಗ್ಯೂ, ಚುನಾವಣೆಗಳನ್ನು ನಡೆಸದಿರುವ ಹೊಣೆಯನ್ನು ಹೊತ್ತುಕೊಳ್ಳಲು ಸರ್ಕಾರ ಮತ್ತು ಪಕ್ಷ ಎರಡೂ ಸಿದ್ಧವಿರುವುದಿಲ್ಲ ಎಂದು ಕಾಂಗ್ರೆಸ್‌ನ ಕೆಲವರು ನಂಬಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವು ಪಕ್ಷದ ಪ್ರಸ್ತುತ ಸ್ಥಿತಿಯ ಸ್ಪಷ್ಟ ಚಿತ್ರಣ ನೀಡಲಿದೆ.

ವಿಧಾನಸಭಾ ಚುನಾವಣೆಗೂ ಮುನ್ನ ಹೆಚ್ಚಿನ ಗಮನ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸಲು ಹಾಗೂ ನಾಲ್ಕು ವರ್ಷಗಳ ಅನುಷ್ಠಾನದ ಬಳಿಕ ಗ್ಯಾರಂಟಿ ಯೋಜನೆಗಳ ಕುರಿತು ವಾಸ್ತವಿಕ ಪ್ರತಿಕ್ರಿಯೆ ಪಡೆಯಲು ಇದು ನೆರವಾಗಲಿದೆ ಎಂಬುದು ಅವರ ಅಭಿಪ್ರಾಯ.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಪ್ರತಿಪಕ್ಷ ಎನ್‌ಡಿಎಯ ಭಾಗವಾಗಿರುವ ಬಿಜೆಪಿ ಮತ್ತು ಜೆಡಿಎಸ್‌ಗೂ ತಮ್ಮ ಬಲ-ದೌರ್ಬಲ್ಯಗಳನ್ನು ಅಳೆಯಲು ಅವಕಾಶ ನೀಡಲಿವೆ. ತಳಮಟ್ಟದಲ್ಲಿ ಎರಡೂ ಪಕ್ಷಗಳು ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಮತ್ತು ಮತಗಳ ವರ್ಗಾವಣೆಯನ್ನು ಹೇಗೆ ಖಚಿತಪಡಿಸಿಕೊಳ್ಳಬಹುದು ಎಂಬುದನ್ನು ಪರೀಕ್ಷಿಸಲು ಇದು ವೇದಿಕೆಯಾಗಲಿದೆ.

BMIC ವಿಚಾರದಲ್ಲಿ ಕುಮಾರಸ್ವಾಮಿ, ಬಿಜೆಪಿ ವಾಗ್ದಾಳಿ

ಬಿಜೆಪಿ ಮತ್ತು ಜೆಡಿಎಸ್ ಕೂಡ ತಮ್ಮ ಚುನಾವಣಾ ತಂತ್ರ ಚುರುಕುಗೊಳಿಸುತ್ತಿವೆ. ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್ (BMIC) ಯೋಜನೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಯೋಜನೆಯನ್ನು ಅವರು ದೇಶದಲ್ಲೇ ಅತಿ ದೊಡ್ಡ ಹಗರಣ ಎಂದು ಆರೋಪಿಸಿದ್ದಾರೆ.

ಇತ್ತ ಬಿಜೆಪಿ ಬರ ನಿರ್ವಹಣೆಯಲ್ಲಿ ಸರ್ಕಾರದ ಕ್ರಮಗಳ ವಿರುದ್ಧ ತೀವ್ರವಾಗಿ ದಾಳಿ ನಡೆಸುತ್ತಿದೆ. ವಿಶೇಷವಾಗಿ ರೈತರಿಗೆ ಕೇವಲ 2,500 ಕೃಷಿ ಒಳಹರಿವು ಸಬ್ಸಿಡಿ ಘೋಷಿಸಿರುವುದು, ಭ್ರಷ್ಟಾಚಾರ, ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ನಡೆದಿರುವ ದೊಡ್ಡ ಪ್ರಮಾಣದ ಅಕ್ರಮಗಳು ಹಾಗೂ ರಾಜ್ಯದ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ಬಿಜೆಪಿ ಪ್ರಮುಖವಾಗಿ ಪ್ರಸ್ತಾಪಿಸುತ್ತಿದೆ.

ದೊಡ್ಡ ಯೋಜನೆಗಳನ್ನು ಘೋಷಿಸುವ ಮುನ್ನ ರಾಜ್ಯದ ಆರ್ಥಿಕ ಸ್ಥಿತಿಗತಿಗಳನ್ನು ವಾಸ್ತವಿಕವಾಗಿ ಪರಿಗಣಿಸುವಂತೆ ಹಣಕಾಸು ಇಲಾಖೆಯು ಮುಖ್ಯಮಂತ್ರಿಗೆ ನೀಡಿರುವ ಟಿಪ್ಪಣಿಯಲ್ಲೂ ಎಚ್ಚರಿಕೆ ನೀಡಿದೆ.

ರೈತರ ಅಸಮಾಧಾನ, ‘ಬೆಂಗಳೂರು ಕೇಂದ್ರಿತ’ ಸರ್ಕಾರ ಎಂಬ ಆರೋಪ

ಪ್ರಸ್ತುತ ಕಾಂಗ್ರೆಸ್ ಸರ್ಕಾರ ಬಗ್ಗೆ ರೈತರಲ್ಲಿ ಅಸಮಾಧಾನವಿದೆ. ಸರ್ಕಾರವು ಬೆಂಗಳೂರು ಕೇಂದ್ರಿತವಾಗಿದೆ ಎಂಬ ಭಾವನೆಯೂ ಅವರಲ್ಲಿದೆ. ಸಚಿವರು ಇತರ ಜಿಲ್ಲೆಗಳಿಗೆ ಅಪರೂಪವಾಗಿ ಭೇಟಿ ನೀಡುತ್ತಿರುವುದು ಈ ಭಾವನೆಗೆ ಕಾರಣವಾಗಿದೆ ಎನ್ನಲಾಗಿದೆ.

ಸರ್ಕಾರಕ್ಕೆ ಈ ಆತಂಕಗಳ ಅರಿವಿದೆ ಎಂದು ಹೇಳಲಾಗುತ್ತಿದ್ದರೂ, ಅದರ ಪ್ರತಿಕ್ರಿಯೆ ಕೇವಲ ಸಾಂಕೇತಿಕವಾಗಿದೆ ಎಂಬ ಅಭಿಪ್ರಾಯವೂ ಇದೆ.

ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಕೇಂದ್ರದ ತಂಡ ಇತ್ತೀಚೆಗಷ್ಟೇ ಆಗಮಿಸಿದ್ದು, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಕೇಂದ್ರದಿಂದ ರಾಜ್ಯಕ್ಕೆ ದೊರೆಯುವ ನೆರವಿನ ಪ್ರಮಾಣದ ಆಧಾರದ ಮೇಲೆಯೇ ರೈತರಿಗೆ ನೀಡುವ ಪರಿಹಾರದ ಮೊತ್ತವೂ ನಿರ್ಧಾರವಾಗಲಿದೆ ಎಂಬ ನಿರೀಕ್ಷೆಯಲ್ಲಿ ರಾಜ್ಯದ ರೈತರಿದ್ದಾರೆ.

38,000 ಕೋಟಿ ಬಾಕಿ ಪಾವತಿಗೆ ಗುತ್ತಿಗೆದಾರರ ಒತ್ತಾಯ

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಬಾಕಿ ಇರುವ 38,000 ಕೋಟಿ ಮೊತ್ತವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿರುವುದು ಸರ್ಕಾರದ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ತಮ್ಮ ಬೇಡಿಕೆಯನ್ನು ಸರ್ಕಾರ ಪರಿಗಣಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಹಾಗೂ ಕಮಿಷನ್ ಪಡೆದಿದ್ದಾರೆ ಎನ್ನಲಾದ ಶಾಸಕರ ಹೆಸರುಗಳನ್ನು ಬಹಿರಂಗಪಡಿಸುವುದಾಗಿ ಸಂಘದ ಸದಸ್ಯರು ಎಚ್ಚರಿಸಿದ್ದಾರೆ.

ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸರ್ಕಾರ ಗುತ್ತಿಗೆದಾರರ ಬೇಡಿಕೆಯನ್ನು ಹೇಗೆ ನಿಭಾಯಿಸಲಿದೆ ಎಂಬುದು ಸ್ಪಷ್ಟವಾಗಿಲ್ಲ. ಸದ್ಯಕ್ಕೆ, ಗುತ್ತಿಗೆದಾರರ ಬಾಕಿ ಬಿಲ್‌ಗಳಿಗೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ಸರ್ಕಾರ ಹಲವು ಸವಾಲುಗಳನ್ನು ಎದುರಿಸುತ್ತಿರುವ ನಡುವೆಯೇ, ಆಡಳಿತ ವಿರೋಧಿ ಅಲೆ ಎದುರಿಸಲು ಸಿದ್ಧವಾಗುತ್ತಿರುವ ಕಾಂಗ್ರೆಸ್ ಮಾತ್ರ ತನ್ನ ಚುನಾವಣಾ ಸಿದ್ಧತೆಗಳನ್ನು ಎಲ್ಲಾ ರೀತಿಯಲ್ಲೂ ಚುರುಕುಗೊಳಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಯೋತ್ಪಾದಕ ದಾಳಿ ವಿಫಲಗೊಳಿಸಿದ ಭಾರತೀಯ ಪೈಲಟ್‌ಗೆ Israel ಅತ್ಯುನ್ನತ ಗೌರವ: ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ, ಕ್ಯಾಪ್ಟನ್ ಸ್ಮಿತ್‌ಗೆ ಆಹ್ವಾನ..!

4 IAS ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ; ಯಾರಿಗೆಲ್ಲಾ ಬದಲಾವಣೆ

ಅಳಿವಿನಂಚಿನ ‘ಗೋಡಾವಣ’ಕ್ಕೆ ಮರುಜೀವ: ಜೈಸಲ್ಮೇರ್‌ನಲ್ಲಿ 2 Great Indian Bustards ಪಕ್ಷಿಗಳ ಬಿಡುಗಡೆ-Video

ಆಧಾರ ರಹಿತ ಆರೋಪ ಸರಿಯಲ್ಲ, ‘ದಾಖಲೆ ತೋರಿಸಿ, ಜಮೀನನ್ನೇ ನಿಮ್ಮ ಕುಟುಂಬಕ್ಕೆ ಕೊಡ್ತೀನಿ; HDK NICE ಆರೋಪಕ್ಕೆ ಸಚಿವ ಬಾಲಕೃಷ್ಣ ತಿರುಗೇಟು

SIR ಅಕ್ರಮಗಳ ಕುರಿತು ರಾಜ್ಯದಿಂದ ಪ್ರತ್ಯೇಕ ತನಿಖೆ ಇಲ್ಲ: CM ಡಿ.ಕೆ. ಶಿವಕುಮಾರ್ ಸ್ಪಷ್ಟನೆ