ಬೆಂಗಳೂರು: ಏಳೂವರೆ ಕೋಟಿ ಕನ್ನಡಿಗರ ಪ್ರತಿನಿಧಿಯಾದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನಡೆಸಿಕೊಂಡ ರೀತಿ ಅತ್ಯಂತ ಖಂಡನೀಯ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಹೆಚ್ಚು ಕಾರ್ಯಕರ್ತರು ಬರುತ್ತಾರೆ ಎಂದು ಗೊತ್ತಿದ್ದರೂ ಮುಖ್ಯಮಂತ್ರಿಗಳಿಗೆ ಸೂಕ್ತವಾದ ಭದ್ರತೆಯನ್ನು ಕಾಂಗ್ರೆಸ್ ಸರ್ಕಾರ ನೀಡಿಲ್ಲ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾತ್ರ ತಮಗೆ ಭದ್ರತೆ ಒದಗಿಸಿಕೊಂಡು ಮುಖ್ಯಮಂತ್ರಿಗಳನ್ನು ಕಡೆಗಣಿಸಿದ್ದಾರೆ. ಮುಖ್ಯಮಂತ್ರಿ ಎಂಬ ಎಚ್ಚರಿಕೆಯೇ ಇಲ್ಲದ ಅವರೊಂದಿಗೆ ನಿಕೃಷ್ಟವಾಗಿ ನಡೆದುಕೊಂಡು ತಳ್ಳಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಇಷ್ಟೆಲ್ಲ ಆಗುವಾಗ ನಿಮ್ಮ ಇಲಾಖೆ ನಿದ್ರೆ ಮಾಡುತ್ತಿತ್ತೇ? ಮುಖ್ಯಮಂತ್ರಿಗಳು ಎಲ್ಲೇ ಹೋದರೂ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿರುವುದು ಭದ್ರತಾ ಸಿಬ್ಬಂದಿಯ ಕರ್ತವ್ಯವಲ್ಲವೇ? ಕಾಂಗ್ರೆಸ್ ಹೈಕಮಾಂಡ್, ನಮ್ಮ ರಾಜ್ಯದ ನಾಯಕರನ್ನು ಇಷ್ಟು ಕೀಳಾಗಿ ಕಂಡರೂ ಪ್ರಶ್ನೆ ಮಾಡುವ ತಾಕತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ರಾಜಕೀಯ ಏನೇ ಇರಲಿ, ಮುಖ್ಯಮಂತ್ರಿಗಳನ್ನು ಈ ರೀತಿ ನಡೆಸಿಕೊಳ್ಳುವುದನ್ನು ಯಾರೂ ಒಪ್ಪುವುದಿಲ್ಲ. ಪ್ರತಿ ಬಾರಿಯೂ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಮುಖ್ಯಮಂತ್ರಿಗಳನ್ನು ಹೀನಾಯವಾಗಿ ನಡೆಸಿಕೊಳ್ಳುವುದು ಇತಿಹಾಸದಲ್ಲೇ ಸಾಬೀತಾಗಿದೆ. ರಾಜ್ಯದ ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿಗಳನ್ನು ಈ ರೀತಿ ನಡೆಸಿಕೊಳ್ಳುವುದೇ ಕಾಂಗ್ರೆಸ್ ನ ಸಂಸ್ಕೃತಿ ಎಂಬುದು ದಿಟವಾಗಿದೆ.
ಈ ಕುರಿತು ತನಿಖೆ ನಡೆಸಿ, ಭದ್ರತೆ ಒದಗಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ. ರಾಜ್ಯದ ಗೃಹ ಸಚಿವರು ಹೊಣೆಗಾರಿಕೆ ಹೊತ್ತು ಜನರ ಕ್ಷಮೆ ಯಾಚಿಸಲಿ. ರಾಜ್ಯದ ಕಾಂಗ್ರೆಸ್ ನಾಯಕರಿಗೆ ಮರ್ಯಾದೆ ಕೊಡದ ಹೈಕಮಾಂಡ್ ಗೆ ಇನ್ನಾದರೂ ಬುದ್ಧಿ ಬರಲಿ ಎಂದು ಹೇಳಿದ್ದಾರೆ.