ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಗಂಭೀರ ಹಾಗೂ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಸ್ಟಿಂಗ್ ಆಪರೇಷನ್ ವಿಚಾರ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಮಾಜಿ ಸಚಿವ ಕೆ.ಎನ್. ರಾಜಣ್ಣ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ತನಿಖೆ ನಡೆಸಿ, ಜನರಲ್ಲಿರುವ ಅನುಮಾನಗಳನ್ನು ದೂರ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್‌ಗಳಿಗೆ ಸಂಬಂಧಿಸಿದಂತೆ ಒಂದೇ ರೀತಿಯ ವ್ಯವಸ್ಥೆ ಅಥವಾ ಜಾಲವಿದೆ. ಅದರ ಪಾಲುದಾರರು ಬೇರೆ ಇರಬಹುದು ಎಂದು ಹೇಳಿದ ರಾಜಣ್ಣ, ರಮೇಶ್ ಜಾರಕಿಹೊಳಿ ಪ್ರಕರಣದ ಬಗ್ಗೆ ಪ್ರಸ್ತಾಪಿಸಿ, ಆ ಸ್ಟಿಂಗ್ ಆಪರೇಷನ್ ಅನ್ನು ಯಾರು ನಡೆಸಿದ್ದರು ಎಂಬುದನ್ನು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ವಿಚಾರವನ್ನು ಪ್ರಸ್ತಾಪಿಸಿದರು. ಸ್ಟಿಂಗ್ ಆಗಿರುವುದಕ್ಕಾಗಿಯೇ ಸಿದ್ದರಾಮಯ್ಯನವರು ಸ್ಟೇ ಪಡೆದುಕೊಂಡಿದ್ದಾರೆ. ಇದು ಹೊಸದೇನಲ್ಲ, ಹಿಂದೆ ಸ್ಟಿಂಗ್ ಆಪರೇಷನ್ ಮಾಡಿಯೇ ಸಿದ್ದರಾಮಯ್ಯನವರ ರಾಜೀನಾಮೆ ಪಡೆಯಲಾಯಿತೇ ಎಂಬ ಅನುಮಾನವೂ ಇರಬಹುದು, ಅದನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದರು.
ಇದೇ ವೇಳೆ ತಮ್ಮ ಮೇಲೂ ಇಂತಹ ಪ್ರಯತ್ನ ನಡೆದಿತ್ತು ಎಂದು ಬಹಿರಂಗಪಡಿಸಿದ ರಾಜಣ್ಣ, “ಹಿಂದೆ ನನ್ನ ಮೇಲೂ ಸ್ಟಿಂಗ್ ಮಾಡಲು ಪ್ರಯತ್ನ ಮಾಡಿದ್ದರು. ಅದು ಸರ್ಕಾರಿ ನಿವಾಸವಾಗಿದ್ದರಿಂದ ಭದ್ರತೆಗೆ ಸಿಸಿಟಿವಿ ಇರುತ್ತದೆ ಎಂದು ಭಾವಿಸಿದ್ದೆ, ಆದರೆ ನಂತರ ಅಲ್ಲಿ ಸಿಸಿಟಿವಿ ಇಲ್ಲ ಎಂಬುದು ಗೊತ್ತಾಯಿತು ಎಂದು ಮಾಹಿತಿ ಹಂಚಿಕೊಂಡರು.
ಈ ಇಡೀ ಬೆಳವಣಿಗೆಯನ್ನು ‘ಬ್ಲ್ಯಾಕ್‌ಮೇಲ್ ತಂತ್ರ’ ಎಂದು ಬಣ್ಣಿಸಿದ ಅವರು, ಮುಖ್ಯಮಂತ್ರಿಗಳ ಬಳಿ ಎಲ್ಲಾ ತನಿಖಾ ಸಂಸ್ಥೆಗಳಿದೆ. ಜನರಲ್ಲಿರುವ ಗೊಂದಲವನ್ನು ಅವರೇ ತನಿಖೆ ಮಾಡಿಸಿ ದೂರ ಮಾಡಬೇಕು. ರಮೇಶ್ ಜಾರಕಿಹೊಳಿ ಅವರ ಸಿಡಿಯನ್ನು ಯಾರು ಮಾಡಿಸಿದ್ದು ಎಂದು ನೀವೇ ಹೇಳಿ? ಅವರದ್ದು ಮಾಡಿಸಿದವರೇ ಈಗ ಸಿದ್ದರಾಮಯ್ಯನವರದ್ದನ್ನೂ ಮಾಡಿಸಿದ್ದಾರೆ.
ಇದರಿಂದ ಇಡೀ ಕರ್ನಾಟಕದ ಮಾನ-ಮರ್ಯಾದೆ ಹರಾಜಾಗುತ್ತಿದೆ, ನಮ್ಮ ಗೌರವವನ್ನು ನಾವೇ ಕಳೆದುಕೊಳ್ಳುತ್ತಿದ್ದೇವೆ. ಸಿಎಂ ಅವರೇ ಅಸಹಾಯಕರಂತೆ ಮಾತನಾಡಿದರೆ ಹೇಗೆ? ತನಿಖೆ ನಡೆಸಿ ಎಲ್ಲವನ್ನೂ ಬಹಿರಂಗಪಡಿಸಿದರೆ ಈ ಸ್ಟಿಂಗ್ ದಂಧೆ ಇಲ್ಲಿಗೇ ನಿಲ್ಲುತ್ತದೆ ಎಂದು ಆಗ್ರಹಿಸಿದರು.