ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಅವರನ್ನು ಗುರಿಯಾಗಿಸಿಕೊಂಡು ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಹಿಂದೆ ಸಚಿವರಾದ ಜಮೀರ್ ಅಹ್ಮದ್ ಖಾನ್ ಮತ್ತು ಪ್ರಿಯಾಂಕ್ ಖರ್ಗೆ ಅವರ ಕೈವಾಡವಿರಬಹುದು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಶಂಕಿಸಿದ್ದಾರೆ.
ಕುಮಾರಸ್ವಾಮಿಯವರೇ ಸ್ಟಿಂಗ್ ವಿಡಿಯೋ ಮಾಡಿಸಿರಬಹುದು ಎಂಬ ಜಮೀರ್ ಅಹ್ಮದ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯನವರು ಆರಂಭದಲ್ಲಿ ಜಮೀರ್ಗೆ ಸಚಿವ ಸ್ಥಾನ ನೀಡಬಾರದು ಎಂದು ಯಾಕೆ ಹಠ ಹಿಡಿದಿದ್ದರು? ಯಾಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂದು ಪ್ರಶ್ನಿಸಿದ್ದಾರೆ.
ಮೊನ್ನೆ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗಿದ್ದೇ ಜಮೀರ್ ಅಹ್ಮದ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಹೈಕಮಾಂಡ್ಗೆ ತಿಳಿಸಲು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ. ಈ ವಿಷಯ ಜಮೀರ್ ಗಮನಕ್ಕೆ ಬಂದಿದ್ದರಿಂದ, ತಾವೇ ಖುದ್ದಾಗಿ ಸ್ಟಿಂಗ್ ಆಪರೇಷನ್ ಟೀಂ ಜೊತೆ ಕೈಜೋಡಿಸಿ ಈ ವಿಡಿಯೋ ಬಿಡುಗಡೆ ಮಾಡಿಸಿರಬಾರದು ಯಾಕೆ ಎಂದು ಪ್ರಶ್ನಿಸಿದರು. ಈ ಬಗ್ಗೆ ತಮಗೆ ಪ್ರತ್ಯೇಕ ವರದಿಗಳು ಲಭ್ಯವಾಗುತ್ತಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಹೇಳಿದರು.
ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ತೀವ್ರ ಆಪಾದನೆ ಮಾಡಿದ ಹೆಚ್ಡಿಕೆ, ಪ್ರಿಯಾಂಕ್ ಖರ್ಗೆ ಅವರ ಇತ್ತೀಚಿನ ನಡವಳಿಕೆಗಳನ್ನು ಗಮನಿಸಿದರೆ, ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಒಳಗೆಯೇ ದೊಡ್ಡ ಸಂಚು ನಡೆದಿರುವುದು ಸ್ಪಷ್ಟವಾಗುತ್ತದೆ. ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ತಪ್ಪಲು ಸಿದ್ದರಾಮಯ್ಯ ಅವರೇ ಪ್ರಮುಖ ಕಾರಣ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಈ ಸ್ಟಿಂಗ್ ಷಡ್ಯಂತ್ರ ರೂಪಿಸಲಾಗಿದೆಯೇ ಎಂಬ ಬಲವಾದ ಅನುಮಾನ ಮೂಡುತ್ತಿದೆ ಎಂದರು.
ಸಿದ್ದರಾಮಯ್ಯನವರಿಗೆ ಸ್ವಪಕ್ಷೀಯರೇ ಬೆನ್ನಿಗೆ ಚೂರಿ ಹಾಕಿದ್ದಾರೋ ಅಥವಾ ಎದುರಿನಿಂದಲೇ ಚೂರಿ ಹಾಕಿದ್ದಾರೋ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಪಕ್ಷದ ಆಂತರಿಕ ಸಂಘರ್ಷ ಹಾಗೂ ಖರ್ಗೆ ಕುಟುಂಬಕ್ಕೆ ಆದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ಪ್ರಿಯಾಂಕ್ ಖರ್ಗೆ ಈ ಜಾಲದಲ್ಲಿ ಭಾಗಿಯಾಗಿರುವ ಗುಮಾನಿಯಿದೆ ಎಂದು ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದರು.