ಬೆಂಗಳೂರು: ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಲ್ಲಿ ಒಂದನ್ನೂ ಗೆಲ್ಲಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಆತ್ಮಾವಲೋಕನ ಮಾಡಿಕೊಳ್ಳಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ತಿಳಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳಲ್ಲೂ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ. ಈ ಬಗ್ಗೆ ಇಂದು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಖರ್ಗೆ, ಈ ಫಲಿತಾಂಶವನ್ನು ನಾವು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಯಾವುದೇ ಚುನಾವಣೆ ಒಂದು ಎಚ್ಚರಿಕೆಯ ಗಂಟೆ ಇದ್ದಂತೆ. ಆದರೆ ಇದರಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
"ಪ್ರಜಾಪ್ರಭುತ್ವದಲ್ಲಿ ನಾವು ಜನರ ತೀರ್ಪನ್ನು ಗೌರವಿಸಬೇಕು ಮತ್ತು ಅದಕ್ಕೆ ತಲೆಬಾಗಬೇಕು. ಪ್ರತಿಯೊಂದು ಚುನಾವಣೆಯೂ ನಮಗೆ ಎಚ್ಚರಿಕೆಯ ಗಂಟೆಯಿದ್ದಂತೆ. ಆದಾಗ್ಯೂ, ಈ ಫಲಿತಾಂಶ ಸರ್ಕಾರದ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುವುದಿಲ್ಲ ಮತ್ತು 2028ಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ" ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ತನ್ನ ಸಂಘಟನೆಯನ್ನು ಬಲಪಡಿಸಿಕೊಳ್ಳಬೇಕಿದೆ ಹಾಗೂ ಶಿಕ್ಷಕರು ಮತ್ತು ಪದವೀಧರರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
"ನಾವು 2028ರಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ನಮಗಿದೆ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಜಿ. ಪರಮೇಶ್ವರ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ" ಎಂದು ಖರ್ಗೆ ತಿಳಿಸಿದರು.
ಇದೇ ವೇಳೆ ಎಲೆಕ್ಟ್ರಾನಿಕ್ ಮತಯಂತ್ರಗಳ(EVM) ಬಗ್ಗೆ ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದ್ದರೂ, ಎಂಎಲ್ಸಿ ಚುನಾವಣೆಯಲ್ಲಿ ಏಕೆ ಮತಪತ್ರಗಳನ್ನು (ballot papers) ಬಳಸಲಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಇಂತಹ ಚುನಾವಣೆಗಳು ಸಾಂಪ್ರದಾಯಿಕವಾಗಿ ಮತಪತ್ರಗಳ ಮೂಲಕವೇ ನಡೆಯುತ್ತವೆ. ಇದರಲ್ಲಿ ಮತದಾರರ ಸಂಖ್ಯೆ ಸೀಮಿತವಾಗಿರುತ್ತದೆ ಮತ್ತು ಇದನ್ನು ಸಾರ್ವತ್ರಿಕ ಚುನಾವಣೆಗಳಿಗೆ ಹೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಇವಿಎಂಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಲು "ನೈತಿಕ ಹ್ಯಾಕಥಾನ್" (ethical hackathon) ನಡೆಸುವಂತೆ ಕರೆ ನೀಡಿದ ಅವರು, ಅದರಲ್ಲಿ ಕಂಡುಬರುವ ಯಾವುದೇ ದೋಷಗಳನ್ನು ಸರಿಪಡಿಸಬೇಕು ಎಂದು ಹೇಳಿದರು.
ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ, ಮತ್ತು ಅಗತ್ಯವಿದ್ದರೆ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿಯೂ ಮತಪತ್ರಗಳನ್ನು ಬಳಸುವಂತೆ ಅವರು ಸಲಹೆ ನೀಡಿದರು.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ, ಜೆಡಿ(ಎಸ್) ಅಭ್ಯರ್ಥಿ ಎ.ಪಿ. ರಂಗನಾಥ್ ಅವರು, ಹಾಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ (MLC) ಪುಟ್ಟಣ್ಣ ಅವರನ್ನು 908 ಮತಗಳ ಅಂತರದಿಂದ ಸೋಲಿಸಿದರು.
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ, ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರನ್ನು 3,297 ಮತಗಳ ಅಂತರದಿಂದ ಸೋಲಿಸಿ ತಮ್ಮ ಸ್ಥಾನವನ್ನು ಉಳಿಸಿಕೊಂಡರು.
ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ, ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಅವರನ್ನು 23,098 ಮತಗಳ ಅಂತರದಿಂದ ಸೋಲಿಸಿದರು. ಹಾಗೆಯೇ, ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಅವರು ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರನ್ನು 9,323 ಮತಗಳ ಅಂತರದಿಂದ ಸೋಲಿಸಿ ತಮ್ಮ ಸ್ಥಾನವನ್ನು ಉಳಿಸಿಕೊಂಡರು.