ಆರ್ ಅಶೋಕ್, ಡಿ ಕೆ ಶಿವಕುಮಾರ್ (ಸಂಗ್ರಹ ಚಿತ್ರ) 
ರಾಜಕೀಯ

ಜನಾಕ್ರೋಶಕ್ಕೆ ಬೆಚ್ಚಿಬಿದ್ದು ಮತ್ತೊಮ್ಮೆ ಮಂಡಿಯೂರಿದ ಡಿಕೆಶಿ ಸರ್ಕಾರ: 15 ದಿನಗಳಲ್ಲಿ ಬಿಜೆಪಿಯ ಹೋರಾಟಕ್ಕೆ ಎರಡು ಗೆಲುವು!

ಪ್ರತಿಯೊಂದರಲ್ಲೂ ಯುಟರ್ನ್‌ ಮಾಡುವ ಮುಖ್ಯಮಂತ್ರಿಗಳಿಗೆ ಇಂತಹ ಸಲಹೆಗಳನ್ನು ಯಾರು ನೀಡುತ್ತಿದ್ದಾರೆ? ಉದ್ಯಮಿ ಗೌತಮ್‌ ಅದಾನಿಗೆ ಸುರಂಗ ರಸ್ತೆ ಯೋಜನೆ ನೀಡಲು ಉದ್ಯಾನಗಳನ್ನು ನಾಶ ಮಾಡಲು ಮುಂದಾಗಿದ್ದರು.

ಬೆಂಗಳೂರು: ಕಾಂಗ್ರೆಸ್​ ಸರ್ಕಾರ ಉದ್ಯಾನಗಳಲ್ಲಿ ಶೇ.5ರಷ್ಟು ಭೂಮಿಯನ್ನು ಮೂಲಸೌಕರ್ಯಕ್ಕೆ ಬಳಸುವ ಮಸೂದೆ ಹಿಂಪಡೆದಿರುವುದು ಬಿಜೆಪಿಯ ಹೋರಾಟಕ್ಕೆ ಸಿಕ್ಕ ಮತ್ತೊಂದು ಜಯ. ಮುಂದೆಯೂ ಉದ್ಯಾನಗಳನ್ನು ಬಳಸುವುದಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್​.ಅಶೋಕ್​ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾರ್ಕ್​​ ಉಳಿಸಿ ಬೆಂಗಳೂರು ರಕ್ಷಿಸಿ ಎಂಬ ಅಭಿಯಾನ ಮಾಡುವುದಾಗಿ ಬಿಜೆಪಿ ವತಿಯಿಂದ ಘೋಷಣೆ ಮಾಡಲಾಗಿತ್ತು. ಈಗ ರಾಜ್ಯ ಕಾಂಗ್ರೆಸ್​​ ಸರ್ಕಾರ ಉದ್ಯಾನಗಳಲ್ಲಿ ಶೇ.5ರಷ್ಟು ಭೂಮಿಯನ್ನು ಮೂಲಸೌಕರ್ಯಕ್ಕೆ ಬಳಸುವ ಮಸೂದೆ ಹಿಂಪಡೆದಿದೆ. ಈ ಮೂಲಕ, ಒಂದೇ ತಿಂಗಳಲ್ಲಿ ಬಿಜೆಪಿಗೆ ಎರಡು ಜಯ ಸಿಕ್ಕಿದೆ. ಇದು ಶಾರ್ಟ್‌ ಟರ್ಮ್‌ ಮುಖ್ಯಮಂತ್ರಿ ಮತ್ತು ಯುಟರ್ನ್‌ ಸರ್ಕಾರ ಎಂದಿದ್ದಾರೆ.

ಈ ಮೊದಲು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಮಾಡಿದ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆಯಲಾಗಿತ್ತು. ಈಗ ಉದ್ಯಾನಗಳನ್ನು ವಾಣಿಜ್ಯೀಕರಣ ಮಾಡಲು ಹೊರಟಿದ್ದ ಸರ್ಕಾರ, ಬಿಜೆಪಿಯ ಹೋರಾಟದ ಎಚ್ಚರಿಕೆಯಿಂದ ಮಸೂದೆಯನ್ನು ವಾಪಸ್‌ ಪಡೆದಿದೆ. ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸುವ ಅಗತ್ಯವೇ ಇಲ್ಲ. ಉದ್ಯಾನಗಳ ಜಾಗ ನುಂಗುವುದಕ್ಕೆ ನಾವು ಅವಕಾಶ ನೀಡುವುದಿಲ್ಲ. ಇದು ಬೆಂಗಳೂರನ್ನು ಪ್ರೀತಿಸುವ, ಗಾರ್ಡನ್‌ ಸಿಟಿ ಉಳಿಸುವ ಜನರಿಗೆ ಸಿಕ್ಕಿರುವ ಜಯ ಎಂದರು.

ಪ್ರತಿಯೊಂದರಲ್ಲೂ ಯುಟರ್ನ್‌ ಮಾಡುವ ಮುಖ್ಯಮಂತ್ರಿಗಳಿಗೆ ಇಂತಹ ಸಲಹೆಗಳನ್ನು ಯಾರು ನೀಡುತ್ತಿದ್ದಾರೆ? ಉದ್ಯಮಿ ಗೌತಮ್‌ ಅದಾನಿಗೆ ಸುರಂಗ ರಸ್ತೆ ಯೋಜನೆ ನೀಡಲು ಉದ್ಯಾನಗಳನ್ನು ನಾಶ ಮಾಡಲು ಮುಂದಾಗಿದ್ದರು. ಬೆಂಗಳೂರಿನಲ್ಲಿ 1,523 ಉದ್ಯಾನಗಳಿವೆ. 240 ಎಕರೆ ವಿಸ್ತೀರ್ಣ ಇರುವ ಲಾಲ್‌ಬಾಗ್‌ನಲ್ಲಿ ಶೇ.5ರಷ್ಟು ಭೂಮಿ ಎಂದರೆ 12 ಎಕರೆಯಾಗುತ್ತದೆ.

192 ಎಕರೆ ವಿಸ್ತೀರ್ಣ ಇರುವ ಕಬ್ಬನ್‌ ಉದ್ಯಾನದಲ್ಲಿ ಶೇ.5ರಷ್ಟು ಭೂಮಿ ಎಂದರೆ 10 ಎಕರೆಯಾಗುತ್ತದೆ. ಲಾಲ್‌ಬಾಗ್‌ ನಿರ್ಮಿಸಿದ ಪುಣ್ಯಾತ್ಮರು ಬೆಂಗಳೂರು ಉದ್ಯಾನ ನಗರಿಯಾಗಬೇಕೆಂಬ ಗುರಿ ಇಟ್ಟುಕೊಂಡಿದ್ದರು. ಆಗಿನ ಕಾಲದ ಆಡಳಿತಗಾರರಿಗೆ ಹಸಿರು ಉಳಿಸುವ ಜ್ಞಾನವಿತ್ತು. ಆದರೆ ಈಗಿನ ಮುಖ್ಯಮಂತ್ರಿಗೆ ಹಸಿರು ಕಾಣಿಸದೆ ಕೇವಲ ರಿಯಲ್‌ ಎಸ್ಟೇಟ್‌ ಮಾತ್ರ ಕಾಣುತ್ತಿದೆ ಎಂದು ಟೀಕಿಸಿದರು.

ಈ ಕ್ರಮ ಮುಂದಿನ ಪೀಳಿಗೆಗೆ ಮಾರಕವಾಗುತ್ತಿತ್ತು. ಈಗ ಶೇ.5ರಷ್ಟು ಇರುವ ಭೂ ಬಳಕೆ ಮುಂದೆ ಶೇ.10 ಆಗುತ್ತಿತ್ತು. 1975ರಲ್ಲಾದ ಉದ್ಯಾನಗಳ ಸಂರಕ್ಷಣೆ ಅಧಿನಿಯಮದಲ್ಲಿ ಹಸಿರು ಹೆಚ್ಚಬೇಕು, ರಾಜ್ಯದಲ್ಲಿ ಶೇ.30ಕ್ಕಿಂತ ಅಧಿಕ ಹಸಿರು ಇರಬೇಕು ಎಂಬ ಉದ್ದೇಶವಿದೆ. ಹಸಿರು ಕಡಿಮೆಯಾದಂತೆ ನಗರದಲ್ಲಿ ಪ್ರವಾಹ ಹೆಚ್ಚಿದೆ. ಎಚ್‌ಎಸ್‌ಆರ್‌ ಲೇಔಟ್‌, ಜಯನಗರ, ಹೆಬ್ಬಾಳ ಮೊದಲಾದ ಪ್ರದೇಶಗಳು ಮಳೆಯಿಂದ ಮುಳುಗುತ್ತಿದೆ. ಸುರಂಗ ರಸ್ತೆ ಯೋಜನೆ ಜಾರಿಯಾದರೆ ಇಡೀ ನಗರ ಮುಳುಗಡೆಯಾಗಲಿದೆ. ರಾಜಕಾಲುವೆಯ ಹೂಳು ತೆಗೆಯದೆ, ಒಳಚರಂಡಿ ವ್ಯವಸ್ಥೆ ಸರಿಪಡಿಸದೆ ಸುರಂಗ ರಸ್ತೆ ಯೋಜನೆ ಜಾರಿ ಮಾಡಲಾಗುತ್ತಿದೆ. ಇದರಿಂದಾಗಿ ರಸ್ತೆಗಳು ಸ್ಟೋರೇಜ್‌ ಟ್ಯಾಂಕ್‌ಗಳಾಗಲಿವೆ ಎಂದು ತಿಳಿಸಿದರು.

ಉದ್ಯಾನಗಳನ್ನು ಇನ್ನಷ್ಟು ಹೆಚ್ಚಿಸುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಘೋಷಣೆ ಮಾಡಬೇಕಿತ್ತು. ಅದನ್ನು ಬಿಟ್ಟು ಉದ್ಯಾನಗಳನ್ನು, ಮರಗಳನ್ನು ನಾಶ ಮಾಡುತ್ತಿದ್ದಾರೆ. ಬೆಂಗಳೂರಿನ ಜನರು ಇದರಿಂದ ರೊಚ್ಚಿಗೆದ್ದಿದ್ದಾರೆ. ನಾವು ಹೋರಾಟವನ್ನು ಘೋಷಣೆ ಮಾಡಿದ್ದಕ್ಕೆ ಜನರಿಂದ ಬೆಂಬಲ ಸಿಕ್ಕಿದೆ. ಎಲ್ಲ ಶಾಸಕರು, ಮಾಜಿ ಕಾರ್ಪೊರೇಟರ್‌ಗಳು ಉದ್ಯಾನಗಳಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದರು. 5 ಲಕ್ಷ ಸಹಿ ಸಂಗ್ರಹದ ಗುರಿ ಇತ್ತು. ಯೋಗ ಕ್ಲಬ್‌, ನಗೆಕೂಟಗಳನ್ನು ಸಂಪರ್ಕಿಸಲಾಗಿತ್ತು. ಇದು ದೊಡ್ಡ ಹೋರಾಟವಾಗುತ್ತಿತ್ತು. ಇದರಿಂದ ಬೆದರಿದ ಸರ್ಕಾರ ಮಸೂದೆ ಹಿಂಪಡೆದಿದೆ. ಇನ್ನು ಮುಂದೆಯೂ ಮತ್ತೆ ಈ ಮಸೂದೆ ತರಬಾರದು ಎಂದರು.

ಬೆಂಗಳೂರು ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಹಸಿರಿಗೆ ಕತ್ತರಿ ಹಾಕುವ ಯಾವುದೇ ಪ್ರಯತ್ನಕ್ಕೆ ಬಿಜೆಪಿ ಗೋಡೆಯಂತೆ ನಿಲ್ಲುತ್ತದೆ. ಇದು ಬಿಜೆಪಿಯ ಹೋರಾಟದ ಭರ್ಜರಿ ಗೆಲುವು. ಇದು ಬೆಂಗಳೂರಿನ ಜನರ ಗೆಲುವು.ಇದು ನಮ್ಮ ಹೆಮ್ಮೆಯ ಉದ್ಯಾನ ನಗರಿಯ ಹಸಿರಿನ ಗೆಲುವು ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಸ್ರೋದ GSLV-F17 ರಾಕೆಟ್‌ ಉಡಾವಣೆ ಯಶಸ್ವಿ: ಮಳೆಯ ನಡುವೆಯೂ ನಭಕ್ಕೆ ಚಿಮ್ಮಿದ ಭಾರತದ ಮೊದಲ ಭೂವೀಕ್ಷಣಾ ಉಪಗ್ರಹ

ಮೈಸೂರು ದಸರಾಗೆ ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ತೀರ್ಮಾನ: ಏರ್ ಶೋ ನಡೆಸಲು ಚಿಂತನೆ

ಬೆಳಗಾವಿ ನೂತನ ಪೊಲೀಸ್ ಆಯುಕ್ತರಾಗಿ ಪ್ರಕಾಶ ನಿಕ್ಕಂ ಅಧಿಕಾರ ಸ್ವೀಕಾರ

ಬಿಜೆಪಿ 'ಬಳ್ಳಾರಿ ಚಲೋ'ಗೆ 3ನೇ ದಿನವೂ ಭರ್ಜರಿ ಸ್ಪಂದನೆ: ರೈತರ 5 ಲಕ್ಷ ರು. ವರೆಗಿನ ಸಾಲಮನ್ನಾಗೆ ವಿಜಯೇಂದ್ರ ಪಟ್ಟು!

ತೈಲ ಖರೀದಿಸುವುದು ಅಥವಾ ಖರೀದಿಸದಿರುವುದು ಉಕ್ರೇನ್ ಯುದ್ಧವನ್ನು ಪರಿಹರಿಸುವುದಿಲ್ಲ: ಕೈವ್‌ನಲ್ಲಿ ರಾಜತಾಂತ್ರಿಕತೆಗೆ EAM ಜೈಶಂಕರ್ ಕರೆ