ವಿಜ್ಞಾನ-ತಂತ್ರಜ್ಞಾನ

ಭಾರತ- ಇಸ್ರೇಲ್ ಅಭಿವೃದ್ಧಿಪಡಿಸಿರುವ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ

Srinivas Rao BV

ನವದೆಹಲಿ: ಭಾರತ- ಇಸ್ರೇಲ್  ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಭೂಮಿಯ ಮೇಲ್ಮೈಯಿಂದ ಗಗನಕ್ಕೆ ಚಿಮ್ಮುವ ದೂರಗಾಮಿ ಬರಾಕ್ 8 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಈ ತಿಂಗಳಲ್ಲಿ ನಡೆಯಲಿದೆ. ಭಾರತ- ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿ, ಒಳಬರುವ ಕ್ಷಿಪಣಿಯ ಹಾಗೂ ಡ್ರೋನ್ ಗಳ ದಾಳಿಯ ರಕ್ಷಕನಾಗಿ ಕಾರ್ಯನಿರ್ವಹಿಸಲಿದೆ.

ಇಸ್ರೇಲ್ ನಲ್ಲಿ ಮೊದಲ ಪ್ರಯೋಗ ನಡೆಯಲಿದ್ದು, ಇದು ಯಶಸ್ವಿಯಾದರೆ  ಮತ್ತೊಂದು ಪರೀಕ್ಷೆಯನ್ನು ಸೆಪ್ಟೆಂಬರ್ ವೇಳೆಗೆ ಭಾರತದಲ್ಲಿ ನಡೆಸಲಾಗುತ್ತದೆ. ಬರಾಕ್ -8 ಕ್ಷಿಪಣಿಗಳು ಭಾರತದ ಯುದ್ಧನೌಕೆಗಳಲ್ಲಿ ಬಳಕೆಯಾಗಲಿವೆ.   ಕಳೆದ ನವೆಂಬರ್ ನಲ್ಲಿ ಇಸ್ರೇಲ್ ನಲ್ಲಿ ನಡೆಸಲಾದ ಪರೀಕ್ಷೆ ಯಶಸ್ವಿಯಾಗಿದೆ. ನಂತರದ ಪರೀಕ್ಷೆ ಭಾರತದಲ್ಲಿ ನಡೆಯಬೇಕಿತ್ತಾದರೂ ಭಾರತೀಯ ನೌಕಾ ಪಡೆ ಕಳೆದ ಪರೀಕ್ಷೆ ವೇಳೆ ಕೆಲ ಬದಲಾವಣೆಗೆ ಸೂಚಿಸಿತ್ತು. ಆದ್ದರಿಂದ ಬದಲಾವಣೆಗೊಂಡ ನಂತರ ನಡೆಯುತ್ತಿರುವ ಕ್ಷಿಪಣಿಯ ಪರೀಕ್ಷೆ ಇಸ್ರೇಲ್ ನಲ್ಲೇ ನಡೆಯಲಿದೆ. ಈ ಬಾರಿಯ ಕ್ಷಿಪಣಿ ಪರೀಕ್ಷೆ ಬದಲಾವಣೆಗಳು ಯಶಸ್ವಿಯಾಗಿರಿವುದರ ಬಗ್ಗೆ ತಿಳಿಸಲಿದೆ.       

ಈ ಕ್ಷಿಪಣಿಯನ್ನು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರಿ ಹಾಗೂ ಭಾರತದ ಡಿ.ಆರ್.ಡಿ.ಒ, ಇಸ್ರೇಲ್ ನ ಶಸ್ತ್ರಾಸ್ತ್ರ ಅಭಿವೃದ್ಧಿ ಆಡಳಿತಮಂಡಳಿಯಿಂದ ಅಭಿವೃದ್ಧಿಪಡಿಸಲಾಗಿದೆ. ಪಾಕಿಸ್ತಾನ ಹಾಗೂ ಚೀನಾ ನೌಕಾಪಡೆಯಿಂದ ಎದುರಾಗಬಹುದಾದ ದಾಳಿಯನ್ನು ತಡೆಗಟ್ಟಲು ಭಾರತ- ಇಸ್ರೇಲ್ ಅಭಿವೃದ್ಧಿ ಪಡಿಸಿರುವ ಕ್ಷಿಪಣಿ ನೆರವಾಗಲಿದೆ.

SCROLL FOR NEXT