ವಿಜ್ಞಾನ-ತಂತ್ರಜ್ಞಾನ

ಕ್ಯಾನ್ಸರ್ ಪತ್ತೆಗಾಗಿ ಕೃತಕ ಚರ್ಮ ನಿರ್ಮಿಸಿದ ಗೂಗಲ್

Rashmi Kasaragodu

ಮಾರಕ ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚಲು ಗೂಗಲ್ ಕೃತಕ ಮನುಷ್ಯ ಚರ್ಮವನ್ನು ತಯಾರಿಸುತ್ತಿದೆ. ಕ್ಯಾನ್ಸರ್ ನಿಯಂತ್ರಣಕ್ಕಾಗಿ ಮಣಿಕಟ್ಟುಬ್ಯಾಂಡ್ (Wrist Band) ಸಂಶೋಧನೆಯ ಅಂಗವಾಗಿ ಗೂಗಲ್ ಈ ಕೃತಕ ಚರ್ಮವನ್ನು ತಯಾರಿಸುತ್ತಿದೆ.

ಕ್ಯಾನ್ಸರ್ ಪತ್ತೆಗಾಗಿ ರಿಸ್ಟ್ ಬ್ಯಾಂಡ್ ತಯಾರಿಸುತ್ತಿದ್ದೇವೆ ಎಂಬ ಸುದ್ದಿಯನ್ನು ಗೂಗಲ್ ಎಕ್ಸ್ ಲ್ಯಾಬ್ ಕಳೆದ ವರ್ಷವೇ ಪ್ರಕಟಿಸಿತ್ತು. ರಕ್ತದೊಂದಿಗೆ ಕಳುಹಿಸಿಕೊಡಲಾಗುವ ಮ್ಯಾಗ್ನೆಟಿಕ್ ನ್ಯಾನೋ ಅಣುಗಳ ಮೂಲಕ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳನ್ನು ಪತ್ತೆ ಹಚ್ಚುವ ತಂತ್ರಜ್ಞಾನವನ್ನು ಕಂಡುಹಿಡಿಯಲು ಗೂಗಲ್ ಎಕ್ಸ್  ಲ್ಯಾಬ್ ಪ್ರಯತ್ನಿಸುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಗೂಗಲ್ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಸಂಶೋಧನೆಗಳನ್ನು ಮಾಡುತ್ತಾ ಬರುತ್ತಿದೆ. ನೂರಕ್ಕಿಂತಲೂ ಹೆಚ್ಚು ವೈದ್ಯರು ಮತ್ತು ವಿಜ್ಞಾನಿಗಳು ಕ್ಯಾಲಿಫೋರ್ನಿಯಾದಲ್ಲಿರುವ ಎಕ್ಸ್  ಲ್ಯಾಬ್‌ನಲ್ಲಿ ಸಂಶೋಧನೆಯಲ್ಲಿ ತೊಡಗಿದ್ದು, ಎಕ್ಸ್ ಲ್ಯಾಬ್‌ನ ಪ್ರಧಾನ ಪ್ರಾಜೆಕ್ಟ್‌ಗಳಲ್ಲೊಂದಾಗಿ ಈ ರಿಸ್ಟ್ ಬ್ಯಾಂಡ್.

ನ್ಯಾನೋ ಪಾರ್ಟಿಕಲ್ಸ್‌ಗಳಿರುವ ಮಾತ್ರೆಗಳನ್ನು ನುಂಗುವ ಮೂಲಕ ಇದು ದೇಹದಲ್ಲಿ ಕಾರ್ಯ ನಿರ್ವಹಿಸುತ್ತದೆ. ಅದು ಹೇಗೆಂದರೆ, ರಕ್ತದೊಂದಿಗೆ ಈ ನ್ಯಾನೋ ಪಾರ್ಟಿಕಲ್‌ಗಳು ಬೆರೆತು ದೇಹದಲ್ಲಿ ರೋಗ ಬಾಧಿಸುವ ಕೋಶಗಳನ್ನು ಪತ್ತೆ ಹಚ್ಚುತ್ತದೆ. ಇಂಥಾ ಕೋಶಗಳನ್ನು ಪತ್ತೆ ಹಚ್ಚಿದಾಗ ನ್ಯಾನೋ ಪಾರ್ಟಿಕಲ್ಸ್ ಬೆಳಕಿನ ತರಂಗಗಳ ಮೂಲಕ ರಿಸ್ಟ್ ಬ್ಯಾಂಡ್‌ಗೆ ಸಂದೇಶ ರವಾನಿಸುತ್ತದೆ.

ಈ ತರಂಗಗಳು ಮನುಷ್ಯನ ಚರ್ಮದೊಳಗೆ ಹೇಗೆ ಸಂಚರಿಸುತ್ತವೆ ಎಂಬುದರ ಬಗ್ಗೆ ಕಲಿಕೆಗಾಗಿ ನಾವು ಮಾನವ ಚರ್ಮ ನಿರ್ಮಿಸಿದೆವು ಎಂದು ಎಕ್ಸ್ ಲ್ಯಾಬ್ ಹೇಳಿದೆ. ಮಾತ್ರವಲ್ಲದೆ ಮನುಷ್ಯನ ಕೈಯ ಮಾದರಿಯನ್ನೂ ಎಕ್ಸ್ ಲ್ಯಾಬ್ ನಿರ್ಮಿಸಿದೆ.

ಗೂಗಲ್‌ನ ಈ ಸಂಶೋಧನೆ ಯಶಸ್ವಿಯಾದರೆ ಕ್ಯಾನ್ಸರ್ ಮೊದಲಾದ ಮಾರಕ ರೋಗಗಳು ಬರುವ ಮುನ್ನವೇ ಎಚ್ಚರಿಕೆ ವಹಿಸಿ, ರೋಗವನ್ನು ತಡೆಯಬಹುದಾಗಿದೆ.

SCROLL FOR NEXT