ನವದೆಹಲಿ: ಟ್ವಿಟರ್ ನಲ್ಲಿ ನೇರ ಸಂದೇಶ (ಡೈರೆಕ್ಟ್ ಮೆಸೇಜ್) ಅಕ್ಷರಮಿತಿಯನ್ನು 140 ರಿಂದ 10,000 ಏರಿಕೆ ಮಾಡಿದ್ದು ಏಕಾಏಕಿ ಈ ಇಲ್ಲದ ನಿರ್ಧಾರ ತೆಗೆದುಕೊಂಡಿರುವುದರ ಬಗ್ಗೆ ಟ್ವಿಟರ್ ಬಳಕೆದಾರರಿಗೆ ಸಂತಸದ ಜತೆಗೆ ಅಚ್ಚರಿಯನ್ನು ಉಂಟು ಮಾಡಿದೆ.
ವೇಗವಾಗಿ ಬೆಳೆಯುತ್ತಿರುವ ವಾಟ್ಸ್ ಆಪ್ ಹಾಗೂ ಫೇಸ್ ಬುಕ್ ನ ಜನಪ್ರಿಯತೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಬಳಕೆದಾರರನ್ನು ಸಂತೋಷಗೊಳಿಸುವ ಮೂಲಕ ಸೈಟ್ ನ್ನು ಸ್ಪರ್ಧಾತ್ಮಕವಾಗಿರಿಸಲು ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ಅಕ್ಷರಮಿತಿ ಏರಿಕೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಟ್ವಿಟರ್ ಮೈಕ್ರೋ ಬ್ಲಾಗಿಂಗ ಸೈಟ್ ಎಂದೆ ಖ್ಯಾತಿ ಪಡೆದಿತ್ತು, ಆದರೆ ಅಕ್ಷರಮಿತಿಯನ್ನು ಏರಿಕೆ ಮಾಡಲು ಬಳಕೆದಾರರಿಂದ ಒತ್ತಾಯ ಬಂದಿದ್ದು ಟ್ವಿಟರ್ ಅಕ್ಷರಮಿತಿ ಏರಿಕೆ ಮಾಡುವ ನಿರ್ಧಾರ ಕೈಗೊಂಡಿದೆ ಎಂದು ಗಾರ್ಟ್ ನರ್ ನ ಮುಖ್ಯ ಸಂಶೋಧನಾ ವಿಶ್ಲೇಷಕ ರಿಷಿ ತೇಜ್ ಪಾಲ್ ಅಭಿಪ್ರಾಯಪಟ್ಟಿದ್ದಾರೆ.
ನೇರ ಸಂದೇಶಗಳನ್ನು ಉತ್ತಮಗೊಳಿಸಲು ಟ್ವಿಟರ್ ಕಳೆದ ಒಂದು ವರ್ಷದಿಂದ ಸಾಕಷ್ಟು ಪ್ರಯತ್ನ ನಡೆಸಿದ್ದು ಇದೀಗ ಬಳಕೆದಾರರಿಗೆ ಅತಿ ಹೆಚ್ಚು ಕುತೂಹಲಕಾರಿಯಾಗಿರುವ ಕೆಲಸ ಪ್ರಗತಿಯಲ್ಲಿದೆ ಎಂದು ಟ್ವಿಟರ್ ನ ಡೆವಲಪರ್ ಒಬ್ಬರು ತಿಳಿಸಿದ್ದಾರೆ. ನೇರ ಸಂದೇಶ ಸೌಲಭ್ಯವನ್ನೇ ಗಮನದಲ್ಲಿಟ್ಟುಕೊಂಡು ತನ್ನ ವೈಶಿಷ್ಟ್ಯಗಳನ್ನು ಅಪ್ ಗ್ರೇಡ್ ಮಾಡುತ್ತಿದೆ. ಅಕ್ಷರಮಿತಿಯನ್ನು ಏರಿಕೆ ಮಾಡುತ್ತಿರುವುದು, ಗ್ರಾಹಕರನ್ನು ನಿರ್ವಹಿಸಲು ಬ್ರಾಂಡ್ ಗಳಿಗೂ ಸಹಕಾರಿಯಾಗಲಿದೆ ಎಂದು ಲೈಟ್ ಹೌಸ್ ನ ಡಿಜಿಟಲ್ ಮಾರುಕಟ್ಟೆ ನಿರ್ವಾಹಕಿ ಸುಮನಾ ಸುಮುಖ್ ಅಭಿಪ್ರಾಯಪಟ್ಟಿದಾರೆ.
ಟ್ವಿಟರ್ ನ ಈ ನಿರ್ಧಾರ ಹೊಸತನ ಪರಿಚರಿಸಲಿದ್ದು ವ್ಯಾಪಾರ ಉದ್ದೇಶದಿಂದಲೂ ಸಹಕಾರಿಯಾಗಲಿದೆ. ಪದಮಿತಿಯನ್ನು ತೆಗೆದುಹಾಕಿರುವುದರಿಂದ ಉತ್ಪನ್ನ ಸುದ್ದಿಪತ್ರವನ್ನು ನೇರ ಸಂದೇಶದಲ್ಲಿ ಕಳಿಸಬಹುದಾಗಿದೆ. ವಿವರಣಾತ್ಮಕ, ಸೂಕ್ತ ಪದಗಳನ್ನು ಬಳಸಿ ಬರೆಯಲು ಇಷ್ಟಪಡುವವರಿಗೆ ಅಕ್ಷರಮಿತಿ ತೆಗೆದುಹಾಕಿರುವುದು ಅನುಕೂಲಕರವಾಗಲಿದೆ.