ವಾಷಿಂಗ್ಟನ್: ಜೀವಿಗಳ ಉಗಮದ ಅಧ್ಯಯನಕ್ಕೆ ಮಹತ್ವದ ನೆರವು ನೀಡಬಲ್ಲ ಸಂಶೋಧನೆಯೊಂದನ್ನು ಮೈಸೂರಿನ ವಿಜ್ಞಾನಿ ನೇತೃತ್ವದ ತಂಡವೊಂದು ಮಾಡಿದೆ.
ಪ್ರೊ. ನೀಲ್ ದೇವರಾಜ್ ನೇತೃತ್ವದ ತಂಡ ಜೀವಕೋಶದ ಮೊದಲ ಕೃತಕ ತೊಗಲನ್ನು ಅಭಿವೃದ್ಧಿಪಡಿಸಿದೆ. ಇದು ಜೀವಂತ ಜೀವಕೋಶದ ಪೊರೆಯ ರೀತಿಯಲ್ಲೇ ಬೆಳೆಯುವ ಸಾಮರ್ಥ್ಯ ಹೊಂದಿದೆ. ಈ ಪೊರೆಗಳು ಸಿಂಥೆಟಿಕ್ ಆಗಿದ್ದರೂ ಜೀವಂತ ಪೊರೆಯನ್ನೇ ಹೋಲುತ್ತವೆ. ಪರಿಸ್ಥಿತಿಗೆ ತಕ್ಕಂತೆ ಜೀವಂತ ಜೀವಕೋಶಗಳ ಪೊರೆಗಳು ಯಾವ ರೀತಿ ವರ್ತಿಸುತ್ತವೆಯೋ ಅದೇ ರೀತಿಯ ಗುಣಲಕ್ಷಣಗಳನ್ನು ಇವೂ ಪ್ರದರ್ಶಿಸುತ್ತವೆ ಎಂದು ಕ್ಯಾಲಿಫೋರ್ನಿಯಾ ವಿವಿಯ ರಸಾಯನಶಾಸ್ತ್ರ, ಜೀವಶಾಸ್ತ್ರ ಪ್ರೊಫೆಸರ್ ಹಾಗೂ ಸಂಶೋಧಕ ದೇವರಾಜ್ ಹೇಳಿದ್ದಾರೆ.
ದೇವರಾಜ್ ಹಾಗೂ ಅವರ ತಂಡ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‍ನಲ್ಲಿ ತಮ್ಮ ಸಂಶೋಧನೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಕ್ಯಾಟಲಿಸ್ಟ್ ಬಳಸಿ ಸ್ವಯಂಪ್ರೇರಿತವಾಗಿ ಬೆಳೆಯುವ ಮೆಂಬ್ರೇನ್ಸ್ ಅಥವಾ ಕೃತಕ ಜೀವ ಕೋಶ ಪೊರೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಒಮ್ಮೆ ಕ್ಯಾಟಲಿಸ್ಟ್ ನಿಸ್ಸಾರಗೊಂಡಾಗ ಪೊರೆಗಳ ಬೆಳವಣಿಗೆ ಸ್ಥಗಿತಗೊಳ್ಳುತ್ತದೆ.
ಇದಲ್ಲದೆ, ಈ ರೀತಿಯ ಕೃತಕ ಪೊರೆಗಳು ಯಾವತ್ತೂ ನೈಸರ್ಗಿಕವಾಗಿ ಬೆಳೆಯುವ ಪೊರೆಗೆ ಪರ್ಯಾಯವಾಗಿರಲಿಲ್ಲ. ಆದರೆ, ದೇವರಾಜ್ ಅವರ ತಂಡ ಅಭಿವೃದ್ಧಿ ಕೃತಕ ಪೊರೆಯು ಜೀವಂತ ಪೊರೆಯನ್ನೇ ಹೋಲುತ್ತದೆ. ಜತೆಗೆ, ಅದೇ ರೀತಿ ಪ್ರತಿಕ್ರಿಯೆ ತೋರುತ್ತದೆ. ಈ ಕೃತಕ ಪೊರೆ ವಿಶಿಷ್ಟವಾದುದು. ಇದೊಂದು ಸರಳ ಲಿಪಿಡ್- ಸಿಥೆಸೈಜಿಂಗ್ ಪೊರೆ. ಇಲ್ಲಿ ಬಳಸಲಾಗಿರುವ ಕ್ಯಾಟಲಿಸ್ಟ್ ಮರುಸೃಷ್ಟಿ ಸಾಮರ್ಥ್ಯ ಹೊಂದಿದೆ ಎಂದು ದೇವರಾಜ್ ಹೇಳುತ್ತಾರೆ.
ದೇವರಾಜ್ ಮೈಸೂರಿನವರು
ನೀಲ್ ದೇವರಾಜ್‍ರ ಮೂಲ ಕರ್ನಾಟಕ. ಮಾಧ್ಯಮಗಳೊಂದಿಗೆ ಮಾತನಾಡಿದ ವೇಳೆ ಅವರು ಪೋಷಕರು ಮೈಸೂರಿನವರು, ತಾವು ಅಮೆರಿಕದಲ್ಲಿ ಹುಟ್ಟಿದ್ದಾಗಿ ಹೇಳಿದ್ದಾರೆ. ಅಲ್ಲದೆ ತನಗೆ ಕನ್ನಡಿಗ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದಿದ್ದಾರೆ.