ವಿಜ್ಞಾನ-ತಂತ್ರಜ್ಞಾನ

ಬಾಹ್ಯಾಕಾಶದಿಂದ ಇಂಡೋ-ಪಾಕ್ ಗಡಿ ಹೇಗೆ ಕಾಣುತ್ತದೆ ಗೊತ್ತಾ..!

Srinivasamurthy VN

ಭಾರತ ಮತ್ತು ಪಾಕಿಸ್ತಾನದ ಗಡಿ ಪ್ರದೇಶ ನಿತ್ಯ ಒಂದಿಲ್ಲೊಂದು ಘರ್ಷಣೆಗಳಿಂದಾಗಿಯೇ ಸುದ್ದಿಯಲ್ಲಿರುತ್ತದೆ. ಆದರೆ ಸೋಮವಾರ ಬೇರೆಯದ್ದೇ ಕಾರಣದಿಂದಾಗಿ ಈ ಘರ್ಷಣಾ ನಿರತ ಪ್ರದೇಶ ಸುದ್ದಿಯಾಗಿದೆ. ಅದೂ ಕೂಡ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಮೂಲಕ.

ವಿಷಯವೇನೆಂದರೆ ಇತ್ತೀಚೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಯೊಬ್ಬರು ರಾತ್ರಿ ವೇಳೆ ಭೂಮಿಯ ಚಿತ್ರವನ್ನು ಸೆರೆ ಹಿಡಿದಿದ್ದು, ಇದರಲ್ಲಿ ಬೇರೆ ರಾಷ್ಟ್ರಗಳ ಗಡಿ ಪ್ರದೇಶಕ್ಕಿಂತಿ ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶ ಹೆಚ್ಚು ನಿಖರವಾಗಿ ಕಂಡಿದೆಯಂತೆ.



ಗುಜರಾತಿನಿಂದ ಹಿಡಿದು ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರ ಸೇರಿದಂತೆ ಚೀನಾದ ಗಡಿ ಪ್ರದೇಶವೆಲ್ಲಾ ಬಾಹ್ಯಾಕಾಶ ನಿಲ್ದಾಣದಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ. ಚಿತ್ರದಲ್ಲಿ ಗೋಚರಿಸುವ ಆರೆಂಜ್ ಬಣ್ಣದ ರೇಖೆ ಉಭಯ ದೇಶಗಳ ಭದ್ರತಾ ಪಡೆಗಳು ಹಾಕಿರುವ ಭದ್ರತಾ ದೀಪಗಳಾಗಿದ್ದು, ಗಡಿಯುದ್ದಕ್ಕೂ ಹಾಕಿರುವ ಈ ದೀಪಗಳು ಬಾಹ್ಯಾಕಾಶ ನಿಲ್ದಾಣದಿಂದ ಎರಡೂ ರಾಷ್ಟ್ರಗಳ ಭೌಗೋಳಿಕ ಇಬ್ಭಾಗವನ್ನು ತೋರುತ್ತದೆ.

ಬಾಹ್ಯಾಕಾಶ ನಿಲ್ದಾಣದಿಂದ ಗೋಚರಿಸಬಲ್ಲ ವಿಶ್ವದ ಕೆಲವೇ ಕೆಲ ಗಡಿ ಪ್ರದೇಶಗಳಲ್ಲಿ ಭಾರತ-ಪಾಕಿಸ್ತಾನ ಗಡಿ ಪ್ರದೇಶ ಕೂಡ ಒಂದಾಗಿದ್ದು, ಇತ್ತೀಚೆಗೆ ಇದನ್ನು ನಾಸಾ ಸಂಸ್ಥೆ ತನ್ನ ಫೇಸ್ ಬುಕ್ ಖಾತೆಯಲ್ಲಿ ಬಿಡುಗೆಡೆ ಮಾಡಿತ್ತು. ನಾಸಾದ ಈ ಚಿತ್ರಕ್ಕೆ 50 ಸಾವಿರ ಲೈಕ್ ಗಳು ಬಂದಿದ್ದು, 9000ಕ್ಕೂ ಅಧಿಕ ಬಾರಿ ಶೇರ್ ಆಗಿದೆ.

SCROLL FOR NEXT