ವಿಜ್ಞಾನ-ತಂತ್ರಜ್ಞಾನ

ಭೂಮಿಯಿಂದಲೇ ಬಾಹ್ಯಾಕಾಶ ನಿಲ್ದಾಣ ನೋಡಬೇಕೇ?

Srinivasamurthy VN

ಬೆಂಗಳೂರು: ಬಾಹ್ಯಾಕಾಶದ ಬಗ್ಗೆ ಓದಿದ ಕೇಳಿದ ಅದೆಷ್ಟೋ ಸುದ್ದಿಗಳು ರೋಚಕತೆ ಉಂಟುಮಾಡಿವೆ. ನಾಸಾ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳು ಜಂಟಿಯಾಗಿ ಕೆಲಸ ಮಾಡುತ್ತಿರುವ ಮಹತ್ವದ ವೈಜ್ಞಾನಿಕ ಸಂಶೋಧನೆಗಳಿಗೆ ಮೀಸಲಾಗಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ನಾವು ಭೂಮಿಯಿಂದಲೇ ವೀಕ್ಷಿಸಬಹುದಾಗಿದೆ.

ಇಂತಹ ರೋಚಕ ಸುದ್ದಿಯನ್ನು ನಾಸಾದ ವಿಜ್ಞಾನಿಗಳು ಹರಿಬಿಡುತ್ತಿದ್ದಂತೆಯೇ ತೀವ್ರ ರೋಚಕತೆ ಕೆರಳಿಸಿರುವ ಈ ಬಾಹ್ಯಾಕಾಶ ನಿಲ್ದಾಣವನ್ನು ನೋಡಲು ವಿಶ್ವಾದ್ಯಂತ ಆಸಕ್ತರ ದಂಡೇ ಸಜ್ಜಾಗಿದ್ದು, ಇದೇ ಮೇ 2ರಿಂದ ಮೇ 7ರವರೆಗೆ ಬಹು ನಿರೀಕ್ಷಿತ ಪ್ರದರ್ಶನ ಆರಂಭವಾಗಲಿದೆ. ನಾಸಾದ ಮೂಲಗಳ ಪ್ರಕಾರ ಈ ಬಾಹ್ಯಾಕಾಶ ವೀಕ್ಷಣೆಯನ್ನು ಸ್ಥಳೀಯ ಕಾಲಮಾನದ ಪ್ರಕಾರ ನೋಡಬಹುದಂತೆ.

ಅಂದರೆ ಸ್ಥಳೀಯ ಕಾಲಮಾನದ ಪ್ರಕಾರ ಸೂರ್ಯೋದಯ ಮತ್ತು ಸೂರ್ಯಾಸ್ತದ ಮುನ್ನ ಅಥವಾ ನಂತರದ ಕೆಲ ಗಂಟೆಗಳಲ್ಲಿ ಮಾತ್ರ ಬಾಹ್ಯಾಕಾಶ ನಿಲ್ದಾಣ ಭೂಮಿಯಲ್ಲಿರುವ ನಮ್ಮ ಕಣ್ಣಿಗೆ ಗೋಚರವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೂರ್ಯಾಸ್ತ ಅಥವಾ ಸೂರ್ಯೋದಯದ ವೇಳೆ ಸೂರ್ಯನ ಕಿರಣಗಳು ಬಾಹ್ಯಾಕಾಶ ನಿಲ್ದಾಣದ ಮೇಲೆ ಬಿದ್ದು ಪ್ರತಿಫಲಿಸುವ ಹಿನ್ನೆಲೆಯಲ್ಲಿ ಗಾಢ ಕಪ್ಪು ಆಗಸದಲ್ಲಿ ಈ ದೃಶ್ಯವು ಪ್ರಶಸ್ತವಾಗಿ ಗೋಚರಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.  

ಆಕಾಶದ ಅಂಚಿನಿಂದ ಬಾಹ್ಯಾಕಾಶ ನಿಲ್ದಾಣ ಅಡ್ಡವಾಗಿ ಮರೆಯಾಗುವವರೆಗೂ ಗೋಚರಿಸಲಿದ್ದು, ರಾತ್ರಿ ಆಗಸದಂಚಿನಿಂದ ಬಾಹ್ಯಾಕಾಶ ನಿಲ್ದಾಣಕ್ಕೆ ಇರುವ ಅಂತರ ಅಥವಾ ಎತ್ತರವನ್ನು ಡಿಗ್ರಿಯಲ್ಲಿ ಅಳೆಯಲಾಗುತ್ತದೆ. ಬಾಹ್ಯಾಕಾಶದ ಎತ್ತರವನ್ನು ಇದು ಪ್ರತಿನಿಧಿಸುತ್ತದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು 51.6 ಕೋನಕ್ಕೆ ಬಾಗಿದಂತೆ ಕಕ್ಷೆಯಲ್ಲಿ ಪರಿಭ್ರಮಣ ನಡೆಸುತ್ತಿದೆ. ಅಂದರೆ, ಸಮಭಾಜಕ ವೃತ್ತದ ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ಅತ್ಯಂತ ದೂರದಲ್ಲಿರುತ್ತದೆ. ಬಾಹ್ಯಾಕಾಶ ನಿಲ್ದಾಣವು ಭೂಮಿಯ ನೆತ್ತಿಯ ಮೇಲೆ ಅಂದರೆ ಲಂಬವಾಗಿ ಪ್ರವೇಶಿಸುವುದಿಲ್ಲ. ಹೀಗಾಗಿ ಅಲಾಸ್ಕದಂತಹ ಪ್ರದೇಶಗಳಲ್ಲಿ ಕಾಣಿಸುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಹೇಗೆ ನೋಡುವುದು?
ನಾವು ಒಮ್ಮೆ ನಾಸಾದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿದರೆ ಈ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಮೊದಲು ನಮ್ಮ ದೇಶ ಬಳಿಕ ರಾಜ್ಯ ಆ ಬಳಿಕ ಪಟ್ಟಿಯಲ್ಲಿ ನಮ್ಮ ಜಿಲ್ಲೆಯ ಹೆಸರನ್ನು ಕ್ಲಿಕ್ಕಿಸಿದರೆ ಸಾಕು. ಯಾವ ಹೊತ್ತಿನಲ್ಲಿ ಮತ್ತು ಎಷ್ಟು ಅವಧಿ ನೋಡಬಹುದು ಎಂಬ ಮಾಹಿತಿ ವೆಬ್ ಸೈಟಿನಲ್ಲಿ ಲಭ್ಯವಾಗುತ್ತದೆ. ಆ ಪ್ರಕಾರ, ಮೇ 2 ರಿಂದ 7ರವರೆಗೆ ನಾವು ಬಾಹ್ಯಾಕಾಶ ನಿಲ್ದಾಣವನ್ನು ನೋಡಬಹುದಾಗಿದೆ. ಬಾಹ್ಯಾಕಾಶ ನಿಲ್ದಾಣವು ವಿಮಾನದಂತೆ ಇಲ್ಲವೇ ಪ್ರಖರವಾದ ನಕ್ಷತವೊಂದು ಚಲಿಸುತ್ತಿರುವಂತೆ ಗೋಚರಿಸುತ್ತದೆ. ಇದು ಬೆಳಕನ್ನು ಸೂಸುವುದಿಲ್ಲ ಮತ್ತು ತನ್ನ  ಪಥವನ್ನೂ ಬದಲಿಸುವುದಿಲ್ಲ. ಇದು ವಿಮಾನಕ್ಕಿಂತ ವೇಗದಲ್ಲಿ ಚಲಿಸುತ್ತಿರುತ್ತದೆ. ವಿಮಾನ ಗಂಟೆಗೆ 600 ಮೈಲಿ ವೇಗದಲ್ಲಿ ಸಾಗಿದರೆ, ಬಾಹ್ಯಾಕಾಶ ನಿಲ್ದಾಣ ಗಂಟೆಗೆ 17,500 ಮೈಲಿ ವೇಗದಲ್ಲಿ ಸಾಗುತ್ತದೆ. ಹೀಗಾಗಿ ಕೇವಲ ಕೆಲವೇ ಕ್ಷಣಗಳ ಅವಧಿಯಲ್ಲಿ ನಾವು ಬರಿಗಣ್ಣಿನಲ್ಲಿ ಇದನ್ನು ನೋಡಲು ಸಾಧ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ.

SCROLL FOR NEXT