ವಿಜ್ಞಾನ-ತಂತ್ರಜ್ಞಾನ

ಮತ್ತೊಂದು ದಾಖಲೆಗೆ ಸಜ್ಜಾದ ಇಸ್ರೋ; ಏಕಕಾಲಕ್ಕೆ 68 ವಿದೇಶಿ ಉಪಗ್ರಹಗಳ ಉಡಾವಣೆ

Srinivasamurthy VN

ನವದೆಹಲಿ: ತನ್ನ ಅತ್ಯಾಧುನಿಕ ತಂತ್ರಜ್ಞಾನದಿಂದ ವಿಶ್ವದ ಇತರೆ ಬಾಹ್ಯಾಕಾಶ ಸಂಸ್ಛೆಗಳಿಗೆ ಸಡ್ಡು ಹೊಡೆಯುತ್ತಿರುವ ಭಾರತದ ಹೆಮ್ಮೆ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇದೀಗ ಮತ್ತೊಂದು  ನೂತನ ದಾಖಲೆ ನಿರ್ಮಿಸಲು ಸಜ್ಜಾಗಿದೆ.

ಇತ್ತೀಚೆಗಷ್ಟೇ ಬರೊಬ್ಬರಿ 22 ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಿ ದಾಖಲೆ ನಿರ್ಮಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಗ ಅದಕ್ಕಿಂತಲೂ ಹೆಚ್ಚು ಅಂದರೆ  ಬರೊಬ್ಬರಿ 68 ವಿದೇಶಿ ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡಲು ಸಜ್ಜಾಗಿ ನಿಂತಿದೆ. ಮೂಲಗಳ ಪ್ರಕಾರ ಮುಂದಿನ ವರ್ಷ ನಭಕ್ಕೆ ಹಾರಲಿರುವ ಪಿಎಸ್ ಎಲ್ ವಿ ಉಡಾವಣಾ  ವಾಹಕ ನೌಕೆಯ ಮೂಲಕ 68 ವಾಣಿಜ್ಯ ಉಪಗ್ರಹಗಳನ್ನು ಉಡಾವಣೆ ಮಾಡಲು ಇಸ್ರೋ ಯೋಜಿಸಿದೆ.

ಈ ಸಂಬಂಧ ಈಗಾಗಲೇ ಇಸ್ರೋ ಅಧಿಕಾರಿಗಳು ವಿದೇಶಿ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಈ ಮಾತುಕತೆಗಳು ಪೂರ್ಣಗೊಂಡು ಒಪ್ಪಂದಗಳಿಗೆ ಸಹಿ ಹಾಕಿದ ಬಳಿಕ  ಯೋಜನೆಯ ಪೂರ್ಣ ಸ್ವರೂಪ ತಿಳಿಯಲಿದೆ. ಕಳೆದ ಜೂನ್ 22 ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ 22 ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ದಾಖಲೆ  ನಿರ್ಮಿಸಿತ್ತು. ಇದೀಗ ತನ್ನದೇ ದಾಖಲೆಯನ್ನು ಮುರಿಯಲು ಇಸ್ರೋ ಸಿದ್ಧತೆ ನಡೆಸಿದ್ದು, 68 ಉಪಗ್ರಹಗಳ ಉಡಾವಣೆಗೆ ಯೋಜನೆ ರೂಪಿಸಿದೆ. ಇದಕ್ಕಾಗಿ ನ್ಯಾನೋ ಉಪಗ್ರಹಗಳ ನಿರ್ಮಾಣ  ಕುರಿತು ಇಸ್ರೋ ಮಾತುಕತೆ ನಡೆಯುತ್ತಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT