ನ್ಯೂಯಾರ್ಕ್: ವಿಷಯವನ್ನು ಆಧರಿಸಿ ಇಂಟರ್ನೆಟ್ ಸೇವೆ ಪಡೆಯಲು ವಿವಿಧ ವೆಬ್ ಸೈಟ್ ಗಳಿಗೆ ಬೇರೆ ಬೇರೆ ದರ ನಿಗದಿಪಡಿಸುವ ನಿರ್ವಾಹಕರ ಕ್ರಮವನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ತಡೆಹಿಡಿದ ನಂತರ ಫೇಸ್ ಬುಕ್ ಸಂಸ್ಥೆ ಭಾರತದಲ್ಲಿ ತನ್ನ ಫ್ರೀ ಬೇಸಿಕ್ಸ್ ಯೋಜನೆಯನ್ನು ಮುಚ್ಚಿದೆ.
ಫ್ರೀ ಬೇಸಿಕ್ಸ್ ಯೋಜನೆ ಇನ್ನು ಮುಂದೆ ಭಾರದಲ್ಲಿನ ಗ್ರಾಹಕರಿಗೆ ದೊರಕುವುದಿಲ್ಲ ಎಂದು ಕಂಪೆನಿಯ ವಕ್ತಾರ ಗ್ಯಾಜೆಟ್ಸ್ 360 ಮೂಲಕ ಇಮೇಲ್ ನಲ್ಲಿ ಹೇಳಿಕೆ ನೀಡಿದ್ದಾರೆ.
ನೆಟ್ ನ್ಯೂಟ್ರಾಲಿಟಿ ನಿಯಮದಿಂದಾಗಿ ಫೇಸ್ ಬುಕ್ ನ ಫ್ರೀ ಬೇಸಿಕ್ಸ್ ಯೋಜನೆಗೆ ಭಾರತದಲ್ಲಿ ಹಿನ್ನಡೆಯಾಗಿದೆ. ಫ್ರೀ ಬೇಸಿಕ್ಸ್ ನಿಂದ ಆಯ್ದ ವೆಬ್ ಸೈಟ್ ಗಳು ಮಾತ್ರ ಲಭ್ಯವಾಗುತ್ತಿದ್ದು, ಎಲ್ಲಾ ಇಂಟರ್ನೆಟ್ ಸಮಾನವಾಗಿ ಗ್ರಾಹಕರಿಗೆ ಸಿಗಬೇಕು ಎಂಬ ನಿಯಮಕ್ಕೆ ವಿರುದ್ಧವಾಗಿದೆ. ಫ್ರೀ ಬೇಸಿಕ್ಸ್ RCom ಮೂಲಕ ಭಾರತದಲ್ಲಿ ಡಿಸೆಂಬರ್ ವರೆಗೆ ಸಿಗುತ್ತಿತ್ತು. ಟ್ರಾಯ್ ನ ಆದೇಶ ಬಂದ ಬಳಿಕ ಸೇವೆಯನ್ನು ಮುಚ್ಚಲಾಯಿತು.
ಮೊಬೈಲ್ ಅಪ್ಲಿಕೇಶನ್, ವೆಬ್ ಸೈಟ್ ಅಥವಾ ಮೂಲದ ಆಧಾರದ ಮೇಲೆ ಯಾವುದೇ ಸೇವೆಯ ಪೂರೈಕೆದಾರರು ವಿವಿಧ ದರ ನಿಗದಿ ಮಾಡಬಾರದೆಂದು ಆದೇಶಿಸಿ ನಾವು ನಿಯಮ ಜಾರಿಗೆ ತಂದೆವು. ಇದರಿಂದ ವೆಬ್ ಸೈಟ್ ಸೇವೆ ಪೂರೈಕೆದಾರರಿಗೆ ತಾರತಮ್ಯ ತೋರಿದಂತಾಗುತ್ತದೆ ಎಂದು ಟ್ರಾಯ್ ಅಧ್ಯಕ್ಷ ರಾಮ್ ಸೇವಕ್ ಶರ್ಮ ತಿಳಿಸಿದ್ದಾರೆ.
ಟ್ರಾಯ್ ನ ಆದೇಶದ ಕುರಿತು ಪ್ರತಿಕ್ರಿಯೆ ನೀಡಿರುವ ಫೇಸ್ ಬುಕ್ ಸ್ಥಾಪಕ ಮಾರ್ಕ್ ಝೂಕರ್ ಬರ್ಗ್, ಭಾರತದೊಂದಿಗೆ ಸಂಪರ್ಕ ಬೆಳೆಸುವುದು ನಮ್ಮ ಗುರಿಯಾಗಿದ್ದು, ಅದನ್ನು ನಾವು ಬಿಡಲು ಸಾಧ್ಯವಿಲ್ಲ ಯಾಕೆಂದರೆ ಶತಕೋಟಿಗಿಂತಲೂ ಅಧಿಕ ಮಂದಿ ಭಾರತದಲ್ಲಿ ಇಂಟರ್ನೆಟ್ ಸಂಪರ್ಕವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಫೇಸ್ ಬುಕ್ ಫ್ರೀ ಬೇಸಿಕ್ಸ್ ಯೋಜನೆ ಉಳಿದ ಸುಮಾರು 30 ದೇಶಗಳಲ್ಲಿ ಮುಂದುವರಿಯಲಿದೆ.