ವಾಷಿಂಗ್ಟನ್: ವಿಶ್ವದ ಅತ್ಯಂತ ವೇಗದ ವಿಮಾನ ಯೋಜನೆ ಎಂದೇ ಖ್ಯಾತಿಗಳಿಸಿರುವ ಬಾಂಬಾರ್ಡಿಯರ್ ವಿಮಾನ ಸಂಸ್ಥೆಯ ಕಾಂಕರ್ಡ್ ವಿಮಾನ ಯೋಜನೆಯಲ್ಲಿ ಭಾರತೀಯ ಅಭಿಷೇಕ್ ರಾಯ್ ಕೈಜೋಡಿಸಲಿದ್ದಾರೆ.
ಕೆಲವೇ ನಿಮಿಷಗಳಲ್ಲಿ ಸಾವಿರಾರು ಕಿ.ಮೀ ದೂರವನ್ನು ಕ್ರಮಿಸಬಲ್ಲ ವಿಶ್ವದ ಅತ್ಯಂತ ವೇಗದ ವಿಮಾನ ತಯಾರಿಕೆಗೆ ಬಾಂಬಾರ್ಡಿಯರ್ ವಿಮಾನ ಸಂಸ್ಥೆ ಮುಂದಾಗಿದ್ದು, ವಿಶ್ವಪ್ರಸಿದ್ಧ ಬಾಂಬಾರ್ಡಿಯರ್ ವಿಮಾನಗಳ ತಯಾರಕ ಚಾರ್ಲ್ಸ್ ಬಾಂಬಾರ್ಡಿಯರ್ ವಿನೂತನ ಮಾದರಿ ಕಾಂಕರ್ಡ್ ವಿಮಾನಗಳನ್ನು ಪರಿಚಯಿಸಿದ್ದಾರೆ. ಇದಕ್ಕೆ ಭಾರತೀಯ ಅಭಿಷೇಕ್ ರಾಯ್ ನೇತೃತ್ವದ ಲುನಾಟಿಕ್ ಕಾನ್ಸೆಪ್ಟ್ಸ್ ಕೈಜೋಡಿಸಿದ್ದು, ವಿನೂತನ ಕಾಂಕರ್ಡ್ ವಿಮಾನವು ಗಾಳಿಯಲ್ಲಿ ಧ್ವನಿಯ ವೇಗಕ್ಕಿಂತ 24 ಪಟ್ಟು ಹೆಚ್ಚು ವೇಗದಲ್ಲಿ ಸಂಚರಿಸಲಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಪರಿಚಯಿಸಲಾಗಿದ್ದ ಸೂಪರ್‌ಸಾನಿಕ್ ವಿಮಾನಗಳಿಗಿಂತ ಇದು ಹೆಚ್ಚು ವೇಗವಾಗಿ ಹಾರಬಲ್ಲದು. ಅಷ್ಟೇ ಅಲ್ಲ, ಇದರಿಂದ ಹೊರಡುವ ಶಬ್ದ ಮತ್ತು ಉಷ್ಣತೆಯನ್ನು ನಿಯಂತ್ರಿಸಲು ವಿನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಸೂಪರ್‌ಸಾನಿಕ್ ವಿಮಾನಗಳು ಅತೀವ ಶಬ್ದ ಮಾಡುತ್ತಿದ್ದುದರಿಂದ ಇವುಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಈ ವಿಮಾನ ಹಾರಾಡುವಾಗ 980 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಉತ್ಪತ್ತಿ ಮಾಡಿದರೂ, ಏರೋಡೈನಾಮಿಕ್ ತಂತ್ರಜ್ಞಾನವನ್ನು ಇದರಲ್ಲಿ ಬಳಸಿರುವುದರಿಂದ ಉಷ್ಣತೆ ನಿಯಂತ್ರಿಸಬಹುದಾಗಿದೆ.
ಈ ವಿನೂತನ ಕಲ್ಪನೆಗೆ ಆಂಟಿಪೋಡ್ ಎಂದು ಹೆಸರಿಸಲಾಗಿದ್ದು, ಈ ವಿಮಾನ 10 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಒಂದು ಗಂಟೆಯಲ್ಲಿ 12 ಸಾವಿರ ಮೈಲುಗಳನ್ನು ಇದು ಕ್ರಮಿಸಲಿದ್ದು, ಲಂಡನ್‌ನಿಂದ ನ್ಯೂಯಾರ್ಕ್ ನಡುವಿನ ಸುಮಾರು 5 ಸಾವಿರ ಕಿ.ಮೀ ದೂರವನ್ನು ಕೇವಲ 11 ನಿಮಿಷಗಳಲ್ಲಿ ಕ್ರಮಿಸ ಬಲ್ಲದು ಎಂದು ಹೇಳಲಾಗುತ್ತಿದೆ. ಲುನಾಟಿಕ್ ಸಂಸ್ಥೆ ಈ ವಿಮಾನದ ವಿನ್ಯಾಸ ರೂಪಿಸಿದ್ದು, ಈ ವಿಮಾನದ ರೆಕ್ಕೆಗೆ ರಾಕೆಟ್‌ಗಳನ್ನು ಅಳವಡಿಸಲಾಗುತ್ತದೆ. ಈ ರಾಕೆಟ್‌ಗಳು 40 ಸಾವಿರ ಅಡಿ ಎತ್ತರಕ್ಕೆ ವಿಮಾನವನ್ನು ಕೊಂಡೊಯ್ಯಲು ನೆರವಾಗುತ್ತವೆ. ವಿಮಾನ 40 ಸಾವಿರ ಅಡಿ ತಲುಪುತ್ತಿದ್ದಂತೆ ರಾಕೆಟ್‌ಗಳು ವಾಪಸ್ ಭೂಮಿಗೆ ಬರುತ್ತವೆ. ನಂತರ ವಿಮಾನದಲ್ಲಿ ಅಳವಡಿಸಲಾಗಿರುವ ಸ್ಕ್ರಾಮ್‌ಜೆಟ್ ಇಂಜಿನ್ ವೇಗ ಹೆಚ್ಚಿಸಿಕೊಳ್ಳುತ್ತದೆ. ಈ ಇಂಜಿನ್‌ಗಳು ಇಂಧನ ಹೊತ್ತೊಯ್ಯುವುದರ ಬದಲಿಗೆ ವಾತಾವರಣದಲ್ಲಿರುವ ಆಮ್ಲಜನಕವನ್ನೇ ಉರಿಸುತ್ತವೆ.
ವಿಮಾನದ ವೆಚ್ಚ ಸುಮಾರು 1 ಸಾವಿರ ಕೋಟಿ ರೂ. ಆಗಲಿದೆ ಎಂದು ಹೇಳಲಾಗಿದೆ. ಅಲ್ಲದೆ ಇದರ ವಿನ್ಯಾಸದಿಂದಾಗಿ ಶಬ್ದವೂ ಕಡಿಮೆ ಇರಲಿದೆ. ಆದರೆ ಈ ತಂತ್ರಜ್ಞಾನಗಳು ಇನ್ನೂ ಶೈಶವಾವಸ್ಥೆಯಲ್ಲೇ ಇವೆ ಎಂದು ಹೇಳಲಾಗುತ್ತಿದೆ. ಏರೋಡೈನಾಮಿಕ್ ತಂತ್ರಜ್ಞಾನವನ್ನು ನಾಸಾ ಇನ್ನೂ ಅಭಿವೃದ್ಧಿಪಡಿಸುತ್ತಿದೆ.