ನವದೆಹಲಿ: ದೇಶದಾದ್ಯಂತ ಸಂಚಲನ ಮೂಡಿಸಿದ್ದ ಅಗ್ಗದ ಸ್ಮಾರ್ಟ್ ಫೋನ್ ಫ್ರೀಡಂ 251 ನಾಪತ್ತೆಯಾಗಿದೆ. ನೋಯ್ಡಾ ಮೂಲದ ತಯಾರಕರು ಫ್ರೀಡಂ 251 ಸ್ಮಾರ್ಟ್ ಫೋನ್ ಗಳ ಬಗ್ಗೆ ಎಲ್ಲಿಯೂ ಸುಳಿವೇ ಇಲ್ಲದಂತಾಗಿದೆ.
ಸುಮಾರು 2,00,000 ಫೋನ್‍ಗಳನ್ನು ಗ್ರಾಹಕರಿಗೆ ಒದಗಿಸುವುದಾಗಿ ಭರವಸೆ ನೀಡಿದ್ದ ಈ ಕಂಪನಿ ಆಮೇಲೆ ಸುದ್ದಿಯಾಗಲೇ ಇಲ್ಲ. ಮುಂಗಡ ಕಾಯ್ದಿರಿಸಿದರೆ ಮಾತ್ರ ಸ್ಮಾರ್ಟ್ ಫೋನ್ ತಮ್ಮದಾಗಿಸಿಕೊಳ್ಳಬಹುದು ಎಂದು ಕಂಪನಿ ಜಾಹೀರಾತು ನೀಡಿದ್ದರಿಂದ ಜನ ಮುಗಿಬಿದ್ದು ಸ್ಮಾರ್ಟ್ ಫೋನ್‍ಗೆ ಆರ್ಡರ್ ನೀಡಿದ್ದರು.
ಜುಲೈ ತಿಂಗಳಲ್ಲಿ 5,000 ಫೋನ್‍ಗಳನ್ನು ನೀಡಿರುವುದಾಗಿ ಹೇಳಿದ್ದ ರಿಂಗಿಂಗ್ ಬೆಲ್ಸ್ ಪ್ರೈ. ಲಿಮಿಟೆಡ್ ಕಂಪನಿ, ಗ್ರಾಹಕರು ಕ್ಯಾಶ್ ಆನ್ ಡೆಲಿವರಿ ಮೂಲಕ ಹಣ ಪಾವತಿ ಮಾಡುವ ವಿಧಾನ ಆಯ್ಕೆ ಮಾಡಿದ್ದರೆ 65,000 ಕ್ಕಿಂತ ಹೆಚ್ಚು ಫೋನ್‍ಗಳನ್ನು ವಿತರಣೆ ಮಾಡುವುದಾಗಿ ಹೇಳಿತ್ತು. ಆದರೆ ಇದರ ನಂತರ ಪ್ರಸ್ತುತ ಕಂಪನಿ ಫೋನ್‌ಗಳ ಲೆಕ್ಕವನ್ನಾಗಲೀ, ಗ್ರಾಹಕರಿಗೆ ವಿತರಣೆ ಮಾಡಿರುವ ಫೋನ್‍ಗಳ ಬಗ್ಗೆಯಾಗಲೀ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.
2016ರಲ್ಲಿ ಅತೀ ಹೆಚ್ಚು ಸುದ್ದಿ ಮಾಡಿದ ಸ್ಮಾರ್ಟ್ ಫೋನ್ ಆಗಿತ್ತು ಫ್ರೀಡಂ 251. ಜನರಿಗೆ ಈ ಬಗ್ಗೆ ಹೆಚ್ಚಿನ ನಿರೀಕ್ಷೆ ಇತ್ತು. ತಂತ್ರಜ್ಞಾನದ ಮಾಹಿತಿ ಇರುವವರು ಇದನ್ನು ಪ್ರಶ್ನಿಸಿದ್ದರು. ಕೆಲವರು ಕುತೂಹಲಕ್ಕಾಗಿ ಫೋನ್ ಬುಕ್ಕಿಂಗ್ ಮಾಡಿದ್ದರೂ, ಆಮೇಲೆ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಸೈಬರ್ ಮೀಡಿಯಾ ರಿಸರ್ಚ್‍ನ ಪ್ರಧಾನ ವಿಶ್ಲೇಷಕ ಫೈಸಲ್ ಕವೂಸಾ ಹೇಳಿದ್ದಾರೆ.
ಜೂನ್ 30ರೊಳಗೆ 2.5 ಲಕ್ಷ ಹ್ಯಾಂಡ್‍ಸೆಟ್‍ಗಳನ್ನು ವಿತರಣೆ ಮಾಡಲು ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ರಿಂಗಿಂಗ್ ಬೆಲ್ಸ್ ಕಂಪನಿ ಫೆಬ್ರವರಿ ತಿಂಗಳಲ್ಲಿ ಹೇಳಿತ್ತು. ಅಷ್ಟರೊಳಗೆ 70 ಲಕ್ಷ ಜನರು ಫೋನ್ ಖರೀದಿಗಾಗಿ ಮುಂಗಡ ಬುಕ್ಕಿಂಗ್ ಮಾಡಲು ಮುಗಿಬಿದ್ದಿದ್ದರಿಂದ ಪೇಮೆಂಟ್ ಗೇಟ್‍ವೇ ಕೂಡಾ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿತ್ತು.
ಸುಳ್ಳು ಆಶ್ವಾಸನೆ ನೀಡಿ ಗ್ರಾಹಕರನ್ನು ವಂಚಿಸುವ ಕಂಪನಿಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು, ಗ್ರಾಹಕರ ಹಿತವನ್ನು ಕಾಪಾಡಲು ನಮ್ಮ ದೇಶದಲ್ಲಿ ಹಲವು ಕಾಯ್ದೆಗಳಿವೆ. ಯಾವುದೇ ಸ್ಮಾರ್ಟ್ ಫೋನ್ ತಯಾರು ಮಾಡು ಕನಿಷ್ಟ ಪಕ್ಷ 2 ಸಾವಿರ ರು ಖರ್ಚು ಬಂದೇ ಬರುತ್ತದೆ ಎಂದು ಹೇಳಿರುವ ತಜ್ಞರು ರಿಂಗಿಂಗ್ ಬೆಲ್ ಕಂಪನಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.