ನ್ಯೂಯಾರ್ಕ್: ಎನ್ ಕ್ರಿಪ್ಟ್(ಗೂಢಲಿಪೀಕರಣ) ಸಂದೇಶಗಳನ್ನು ಓದಲು ಸಾಧ್ಯ ಎಂದು ಗಾರ್ಡಿಯನ್ ಪತ್ರಿಕೆ ಪ್ರಕಟಿಸಿದ್ದ ವರದಿಯನ್ನು ವಾಟ್ಸ್ ಆಪ್ ನಿರಾಕರಿಸಿದೆ.
ಸಂದೇಶಗಳ ರವಾನೆಗೆ ವಾಟ್ಸ್ ಆಪ್ ನಲ್ಲಿ ಪ್ರತ್ಯೇಕ ವಿನ್ಯಾಸವಿದ್ದು, ಆಫ್ ಲೈನ್ ಬಳಕೆದಾರರ ಸಂದೇಶಗಳು ಕಳೆದುಹೋಗದಂತೆ ಎಚ್ಚರ ವಹಿಸಲು ಹೊಸ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ವಾಟ್ಸ್ ಆಪ್ ಸ್ಪಷ್ಟಪಡಿಸಿದೆ. ಫೇಸ್ ಬುಕ್ ಹಾಗೂ ಇನ್ನಿತರ ಸಂಸ್ಥೆಗಳಿಗೆ ವಾಟ್ಸ್ ನ ಎನ್ ಕ್ರಿಪ್ಟೆಡ್ ಮೆಸೇಜ್ (ಗೂಢಲಿಪೀಕರಣ) ಸಂದೇಶಗಳನ್ನು ಓದಲು ಅವಕಾಶ ನೀಡಲಾಗಿದೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಪ್ರಕಟಿಸಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ವಾಟ್ಸ್ ಆಪ್, ಜನರು ಸಂದೇಶಗಳನ್ನು ಕಳೆದುಕೊಳ್ಳುವುದನ್ನು ತಪ್ಪಿಸಲು ಉದ್ದೇಶಪೂರ್ವಕವಾಗಿ ರಚಿಸಲಾಗಿರುವ ವಿನ್ಯಾಸದ ಮೂಲಕ, ಗೂಢಲಿಪೀಕರಣ ಸಂದೇಶಗಳನ್ನು ಓದಲು ಸರ್ಕಾರದ ಸಂಸ್ಥೆಗಳು ಅಥವಾ ಇನ್ನಿತರ ಸಂಸ್ಥೆಗಳಿಗೆ ಹಿಂಬಾಗಿಲಿನ ಮೂಲಕ ಅವಕಾಶ ಮಾಡಿಕೊಡುತ್ತಿದೆ ಎಂಬ ಗಾರ್ಡಿಯನ್ ಪತ್ರಿಕೆ ವರದಿಗಳು ಸುಳ್ಳು, ಸರ್ಕಾರಿ ಅಥವಾ ಸರ್ಕಾರೇತರ ಸಂಸ್ಥೆಗಳಿಗೆ ಗೂಡಲಿಪೀಕರಣಗೊಂಡಿರುವ ಸಂದೇಶಗಳನ್ನು ಓದಲು ಅವಕಾಶ ನೀಡಲಾಗುತ್ತಿಲ್ಲ. ಎನ್ ಕ್ರಿಪ್ಷನ್ ಕುರಿತು ಈಗಾಗಲೇ ವಾಟ್ಸ್ ಆಪ್ ಶ್ವೇತ ಪತ್ರ ಹೊರಡಿಸಿದೆ. ಒಂದು ವೇಳೆ ಸರ್ಕಾರದಿಂದ ಒತ್ತಡ ಬಂದರೂ ನಾವು ಅದರ ವಿರುದ್ಧ ಹೋರಾಟ ನಡೆಸಲಿದ್ದೇವೆ ಎಂದು ವಾಟ್ಸ್ ಅಪ್ ಹೇಳಿದೆ.