ಲಾಸ್ ಏಂಜಲೀಸ್: ಭಾರತವನ್ನು ಅತ್ಯಾಧುನಿಕ ಕ್ಷಿಪಣಿ ಅಭಿವೃದ್ಧಿಪಡಿಸುವುದರಿಂದ ತಡೆಯಲು 1992 ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಜಾರ್ಜ್ ಬುಷ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಂತೆ ನಾಸಾಗೆ ನಿರ್ಬಂಧ ವಿಧಿಸಿದ್ದರು. ಅಷ್ಟೇ ಅಲ್ಲದೇ ರಷ್ಯಾ ಕ್ರಯೋಜನಿಕ್ ಇಂಜಿನ್ ತಂತ್ರಜ್ಞಾನವನ್ನು ಭಾರತದೊಂದಿಗೆ ಹಂಚಿಕೊಳ್ಳದಿರುವಂತೆ ಮಾಡುವುದರಲ್ಲಿಯೂ ಯಶಸ್ವಿಯಾಗಿದ್ದರು.
ಎರಡು ದಶಕಗಳ ನಂತರ ಪರಿಸ್ಥಿತಿ ಬದಲಾಗಿದ್ದು ಮಹತ್ವದ ಯೋಜನೆಯೊಂದಕ್ಕೆ ವಿಶ್ವದ ಎರಡು ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಾದ ನಾಸಾ ಹಾಗೂ ಇಸ್ರೋ ಕೈಜೋಡಿಸಿವೆ. ಭೂಮಿಯ ಮೇಲೆ ನಿಗಾ ವಹಿಸಲು ಹಿಂದೆಂದಿಗಿಂತಲೂ ಅತ್ಯಾಧುನಿಕ ಉಪಗ್ರಹವನ್ನು ನಿರ್ಮಿಸಲು ನಾಸಾ ಹಾಗೂ ಇಸ್ರೋ ಮುಂದಾಗಿದ್ದು, ಅಮೆರಿಕಾ-ಭಾರತದ ಸಹಭಾಗಿತ್ವದಲ್ಲಿ ಎನ್ಐಎಸ್ಎಆರ್ ಉಪಗ್ರಹ ತಯಾರಾಗಲಿದೆ.
ಎನ್ಐಎಸ್ಎಆರ್ ಅಥವಾ ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಗ್ರಹ ವಿಶ್ವದ ಅತ್ಯಂತ ದುಬಾರಿ ವೆಚ್ಚದ ಅರ್ತ್ ಇಮೇಜಿಂಗ್ ಉಪಗ್ರಹವಾಗಲಿದ್ದು ಸುಮಾರು 1.5 ಬಿಲಿಯನ್ ಡಾಲರ್ ವೆಚ್ಚದಲ್ಲಿ ತಯಾರಿಸಲಾಗುತ್ತಿದೆ.
ಎನ್ಐಎಸ್ಆರ್ ನಾಸಾ ಹಾಗೂ ಇಸ್ರೋದ ಸಹಭಾಗಿತ್ವದಲ್ಲಿ ತಯಾರಾಗುತ್ತಿರುವ ಮೊದಲ ಯೋಜನೆಯಾಗಿದ್ದು ಎರಡು ಫ್ರೀಕ್ವೆನ್ಸಿ ರಾಡಾರ್ ಹೊಂದಿದೆ ಎಂದು ಎನ್ಐಎಸ್ಆರ್ ಗಾಗಿ ಕೆಲಸ ಮಾಡುತ್ತಿರುವ ವಿಜ್ಞಾನಿ ಪೌಲ್ ಎ ರೋಸನ್ ಹೇಳಿದ್ದಾರೆ. ನಾಸಾ-ಇಸ್ರೋ ಸಹಭಾಗಿತ್ವದ ಉಪಗ್ರಹ 2021 ರಲ್ಲಿ ಭಾರತದಿಂದ ಉಡಾವಣೆಯಾಗಲಿದ್ದು, ಭಾರತ-ಅಮೆರಿಕಾ ಮೈತ್ರಿಯಲ್ಲಿ ಹೊಸ ಅಧ್ಯಾಯವೊಂದು ಪ್ರಾರಂಭವಾಗಲಿದೆ.