ವಿಜ್ಞಾನ-ತಂತ್ರಜ್ಞಾನ

ಸೂರ್ಯ ಶಿಕಾರಿಗೆ ಹೊರಟ 'ನಾಸಾ'ದ ಪಾರ್ಕರ್ ಸೋಲಾರ್ ಪ್ರೋಬ್ ನೌಕೆ ಯಶಸ್ವಿ ಉಡಾವಣೆ!

Vishwanath S
ವಾಷಿಂಗ್ಟನ್: ಇಡೀ ಸೌರಮಂಡಲದ ಉಗಮಕ್ಕೆ ಕಾರಣವಾಗಿರುವ ಸೂರ್ಯನನ್ನೇ ಅಧ್ಯಯನ ಮಾಡಲು ಉತ್ಸುಕವಾಗಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ನಾಸಾ) ಇದಕ್ಕಾಗಿ ಇಂದು ಪಾರ್ಕರ್ ಸೋಲಾರ್ ಪ್ರೋಬ್ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
 
ಸೌರಮಂಡಲ ಮತ್ತು ಭೂಮಿ ಸೇರಿದಂತೆ ಇತರೆ ಗ್ರಹಗಳ ಉಗಮಕ್ಕೆ ಕಾರಣವಾಗಿರುವ ಮತ್ತು ಅಸಂಖ್ಯಾತ ರಹಸ್ಯಗಳನ್ನು ತನ್ನ ಉರಿಯೊಡಲಲ್ಲಿ ಬಚ್ಚಿಟ್ಟುಕೊಂಡಿರುವ ಸೌರಮಂಡಲದ ಕೇಂದ್ರ ಬಿಂದು 'ಸೂರ್ಯ'ನ ನಿಕಟ ಅಧ್ಯಯನಕ್ಕೆ ಮಾನವ ಇತಿಹಾಸದಲ್ಲೇ ಮೊದಲ ಸಾಹಸವೊಂದಕ್ಕೆ ನಾಸಾ ಕೈ ಹಾಕಿದೆ.
ನಾಸಾದ ಈ ಸೂರ್ಯ ಶಿಕಾರಿಗಿ ಶನಿವಾರ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದ್ದು, ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ನಿರ್ಮಿಸಿರುವ ಅತ್ಯಾಧುನಿಕ ಮತ್ತು ಪ್ರಬಲ ಪಾರ್ಕರ್‌ ಸೋಲಾರ್‌ ಪ್ರೋಬ್‌ ಎಂಬ ಗಗನನೌಕೆ ಉಡಾವಣೆಯಾಗಿದೆ. ಈ ನೌಕೆ ಸೂರ್ಯನ ಅತ್ಯಂತ ದೊಡ್ಡ ಪ್ರಮಾಣದ ಶಾಖವನ್ನು ತಡೆದುಕೊಂಡು ಸೂರ್ಯನ ಅತ್ಯಂತ ಸಮೀಪಕ್ಕೆ ತನ್ನ ಪ್ರಯಾಣ ಆರಂಭಿಸಲಿದೆ.
ಕೇಪ್‌ ಕೆನವೆರಲ್‌ನಿಂದ ಅಮೆರಿಕ ಕಾಲಮಾನದ ಪ್ರಕಾರ ಭಾನುವಾರ ಮುಂಜಾನೆ 3.31ಕ್ಕೆ ಪಾರ್ಕರ್‌ ಸೋಲಾರ್‌ ಪ್ರೋಬ್‌ ಅನ್ನು ಹೊತ್ತ ಡೆಲ್ಟಾ-4 ಬೃಹತ್‌ ರಾಕೆಟ್‌ ನಭಕ್ಕೆ ಜಿಗಿದಿದೆ. 
ಪಾರ್ಕರ್‌ ಸೋಲಾರ್‌ ಪ್ರೋಬ್‌ ವೈಶಿಷ್ಟ್ಯತೆಗಳು:
ಪಾರ್ಕರ್‌ ಸೋಲಾರ್‌ ಪ್ರೋಬ್‌ ನೌಕೆಯು ನಾಸಾ ನಿರ್ಮಿತ ಅತ್ಯಂತ ಪ್ರಬಲ ನೌಕೆಯಾಗಿದ್ದು, ಸೂರ್ಯ ನಾಭಿಯಿಂದ 61 ಲಕ್ಷ ಕಿ.ಮೀ.ನಷ್ಟು ಸಮೀಪ ಸಾಗಲಿದೆ. ಈ ನೌಕೆ ಸೂರ್ಯನ ಬಳಿ ತಲುಪಿದ ಬಳಿಕ 7 ವರ್ಷದಲ್ಲಿ 24 ಬಾರಿ ಅದರ ವಾತಾವರಣವನ್ನು ಸುತ್ತಲಿದೆ. ಈ ಸೌರಾಧ್ಯಯನ ಯೋಜನೆಗೆ ಅಮೆರಿಕ ಸರ್ಕಾರ ಅಂದಾಜು 10 ಸಾವಿರ ಕೋಟಿ ಹಣ ಖರ್ಚು ಮಾಡುತ್ತಿದೆ.  ಸೂರ್ಯ ಸಮೀಪಿಸುತ್ತಿದ್ದಂತೆ ನೌಕೆ  ಗಂಟೆಗೆ 7 ಲಕ್ಷ ಕಿ.ಮೀ ವೇಗದಲ್ಲಿ ಚಲಿಸಲಿದೆ. ಆ ಮೂಲಕ ಇಡೀ ವಿಶ್ವದಲ್ಲಿಯೇ ಅತ್ಯಂತ ವೇಗದ ಮಾನವ ನಿರ್ಮಿತ ನೌಕೆ ಎಂಬ ಕೀರ್ತಿಗೂ ಪಾರ್ಕರ್‌ ಸೋಲಾರ್‌ ಪ್ರೋಬ್‌ ಪಾತ್ರವಾಗಲಿದೆ. 
ಈ ನೌಕೆಯ ಮತ್ತೊಂದು ವಿಶೇಷವೆಂದರೆ ಅದು ಇದರ ತಾಪಮಾನ ತಡೆಯು ಸಾಮರ್ಥ್ಯ. ಒಂದು ಮೂಲದ ಪ್ರಕಾರ ಈ ಪಾರ್ಕರ್‌ ಸೋಲಾರ್‌ ಪ್ರೋಬ್‌ ನಷ್ಟು ತಾಪಮಾನವನ್ನು ತಡೆಯುವ ಮತ್ತೊಂದು ನೌಕೆ ಇಡೀ ವಿಶ್ವದಲ್ಲೇ ಇಲ್ಲ ಎನ್ನಲಾಗಿದೆ. ಏಕೆಂದರೆ ಸೂರ್ಯ ಅಗಾಧ ಪ್ರಮಾಣದ ತಾಪಮಾನ ತಡೆದುಕೊಂಡು ಅಲ್ಲಿ ಅಧ್ಯಯನ ನಡೆಸಬೇಕಾದರೆ ಇಂತಹ ಸಾಮರ್ಥ್ಯದ ಅವಶ್ಯಕತೆ ಇದ್ದೇ ಇರುತ್ತದೆ. ಸೂರ್ಯನ ಹೊರವಲಯದಲ್ಲಿ (ಕೊರೋನಾ) 1 ಕೋಟಿ ಡಿಗ್ರಿ ವರೆಗಿನ ಶಾಖವಿದ್ದು, ನೌಕೆ ಈ ಉಷ್ಣ ತಡೆಯಬೇಕಿದೆ. ಇದೇ ಕಾರಣಕ್ಕೆ ಈ ವಿಶೇಷವಾಗಿ ಈ ನೌಕೆಯನ್ನು ತಯಾರು ಮಾಡಲಾಗಿದೆ.
SCROLL FOR NEXT