ವಿಜ್ಞಾನ-ತಂತ್ರಜ್ಞಾನ

ಚಂದ್ರಯಾನ-2 ಚಂದ್ರನಲ್ಲಿಗೆ ಇನ್ನಷ್ಟು ಹತ್ತಿರ; 2ನೇ ಸುತ್ತಿನ ಡಿ-ಆರ್ಬಿಟಿಂಗ್ ಯಶಸ್ವಿ 

Sumana Upadhyaya

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿಯುವ ಪ್ರಕ್ರಿಯೆಯಲ್ಲಿ ಚಂದ್ರಯಾನ-2 ಗಗನನೌಕೆ ಮತ್ತಷ್ಟು ಯಶಸ್ವಿಯಾಗುತ್ತಿದ್ದು ಬುಧವಾರ ಬೆಳಗ್ಗೆ 3.42ರ ಹೊತ್ತಿಗೆ ತನ್ನ ಎರಡನೇ ಸುತ್ತಿನ ಡಿ-ಆರ್ಬಿಟ್ ಮೆನೋವರ್ ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.


ಮೊದಲ ಸುತ್ತಿನ ಡಿ-ಆರ್ಬಿಟಿಂಗ್ ಮೆನೋವರ್ ನಿನ್ನೆ ಬೆಳಗ್ಗೆ 8.50ಕ್ಕೆ ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಚಂದ್ರಯಾನ-2 ಗಗನನೌಕೆಯನ್ನು ಹೊತ್ತ ವಿಕ್ರಮ್ ಉಡ್ಡಯನ ವಾಹಕ ಆರು ಚಕ್ರಗಳ ರೋವರ್ ಪ್ರಗ್ಯಾನವನ್ನು ಸೆಪ್ಟೆಂಬರ್ 7ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲಿದೆ. 

ರೋವರ್  ಪ್ರಜ್ಞ್ಯಾನ ಎಂಜಿನ್ ನೊಂದಿಗೆ ಲ್ಯಾಂಡರ್ ವಿಕ್ರಮ್ 

ಇಂದು ನಸುಕಿನ 3.42ಕ್ಕೆ ಆರಂಭವಾಗಿ ಎರಡನೇ ಡಿ-ಆರ್ಬಿಟಿಂಗ್ ಪ್ರಕ್ರಿಯೆ 9 ಸೆಕೆಂಡ್ ಗಳ ಕಾಲ ನಡೆಯಿತು.  ಚಂದ್ರನ ದಕ್ಷಿಣ ಧ್ರುವದಲ್ಲಿ ಇದೇ ತಿಂಗಳ 7ರಂದು ಇಳಿಯಲಿರುವ ವಿಕ್ರಮ್ ಲ್ಯಾಂಡರ್ ಮೇಲೆಯೇ ಎಲ್ಲರ ಕಣ್ಣು ಕೇಂದ್ರೀಕರಿಸಿದೆ. ಅದು ಅಂದು ಮಧ್ಯಾಹ್ನ 12.45ರಿಂದ 1.45ರ ಮಧ್ಯೆ ಲ್ಯಾಂಡರ್ ವಿಕ್ರಮ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. 


ಉಡ್ಡಯನ ವಾಹಕ ಲ್ಯಾಂಡರ್ ವಿಕ್ರಮ್ ಈಗ ಚಂದ್ರನ ಸುತ್ತ 104*128 ಕಿಲೋ ಮೀಟರ್ ಕಕ್ಷೆ ಎತ್ತರದಲ್ಲಿ ಸುತ್ತುತ್ತಿದೆ. ಚಚಂದ್ರನಲ್ಲಿಗೆ ಮತ್ತಷ್ಟು ಹತ್ತಿರವಾಗಿದೆ. ಚಂದ್ರನ ಮೇಲ್ಮೈಯಿಂದ ವಿಕ್ರಮ್ ಈಗಿರುವ ದೂರ ಕೇವಲ 104 ಕಿಲೋ ಮೀಟರ್ ಗಳು. ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿಯಲು ಇರುವ ದೂರ 120 ಕಿಲೋ ಮೀಟರ್ ಗಳು.


ಚಂದ್ರಯಾನ-2 ಏನು ಮಾಡಲಿದೆ?: ಚಂದ್ರಯಾನ-2 ಕಾರ್ಯಾಚರಣೆ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಗಗನನೌಕೆಯನ್ನು ಇಳಿಸಿದ ಮೊದಲ ದೇಶ ಮತ್ತು ಚಂದ್ರನ ಮೇಲ್ಮೈ ಮೇಲೆ ರೋವರ್ ನ್ನು ಇಳಿಸಿದ ಜಗತ್ತಿನ ನಾಲ್ಕನೇ ದೇಶ ಎಂಬ ಕೀರ್ತಿಗೆ ಭಾರತ ಭಾಜನವಾಗಲಿದೆ. ಈ ಹಿಂದೆ ಚಂದ್ರನ ಮೇಲ್ಮೈ ಮೇಲೆ ರೋವರ್ ನ್ನು ಚೀನಾ, ಅಮೆರಿಕಾ, ಸೋವಿಯತ್ ಒಕ್ಕೂಟ ದೇಶಗಳು ಇಳಿಸಿದ್ದವು.


 ಪ್ರಜ್ಞ್ಯಾನ ಚಂದ್ರನ ಮೇಲ್ಮೈ ಮೇಲೆ ಇಳಿದ ಮೇಲೆ ದಕ್ಷಿಣ ಧ್ರುವದಲ್ಲಿ 14 ದಿನಗಳ ಕಾಲ ಸುತ್ತು ಹಾಕುತ್ತದೆ. ಚಂದ್ರನ ದಕ್ಷಿಣ ಧ್ರುವವನ್ನೇ ಪ್ರಗ್ಯಾನ ಮಿಷನ್ ಕೇಂದ್ರವಾಗಿ ಇಸ್ರೊ ಆಯ್ಕೆ ಮಾಡಲು ಕಾರಣ ಸೌರವ್ಯೂಹದಲ್ಲಿ ಇದು ಅತ್ಯಂತ ಶೀತ ಪ್ರದೇಶವಾಗಿದೆ. ಇಲ್ಲಿಗೆ ಕೋಟ್ಯಂತರ ವರ್ಷಗಳ ಕಾಲ ಸೂರ್ಯನ ಬೆಳಕೇ ಬಿದ್ದಿರಲಿಲ್ಲ.

ಭೂಮಿಯಿಂದ ತೆಗೆದ ಫೋಟೋದಲ್ಲಿ ಚಂದ್ರಯಾನ-2 ಕಂಡುಬಂದ ಬಗೆ 

ಚಂದ್ರಯಾನ-2 ಮೂಲಕ ಚಂದ್ರನ ಮೇಲ್ಮೈ ಮೇಲೆ ನೀರು ಇದೆ ಎಂಬುದನ್ನು ಪ್ರಗ್ಯಾನ ಮೂಲಕ ಇಸ್ರೊ ಮತ್ತಷ್ಟು ಖಚಿತಪಡಿಸಲಿದೆ. ಅಲ್ಲದೆ ಸೌರವ್ಯೂಹದ ಮೂಲಗಳ ಬಗ್ಗೆ ಕೂಡ ಅನೇಕ ಮಾಹಿತಿಗಳು ಸಿಗಲಿವೆ. ಜೀವಸಂಕುಲಗಳ ಹುಟ್ಟು, ಮೂಲಗಳ ಬಗ್ಗೆಯೂ ವಿಜ್ಞಾನಿಗಳಿಗೆ ಮಾಹಿತಿ ಸಿಗಲಿದೆ.


2008ರಲ್ಲಿ ನಡೆಸಿದ ಚಂದ್ರಯಾನ-1 ಯೋಜನೆಯಿಂದ ಚಂದ್ರನ ಮೇಲೆ ನೀರು ಇದೆ ಎಂಬುದು ಖಚಿತವಾಗಿತ್ತು. ಈ ಬಗ್ಗೆ ಇನ್ನಷ್ಟು ಖಚಿತತೆ ಮತ್ತು ಹೊಸ ಹೊಸ ವಿಷಯಗಳು ಈ ಬಾರಿ ಹೊರಬರಲಿವೆ. ಅಲ್ಲದೆ ಚಂದ್ರನ ಮೇಲ್ಮೈ ಮೇಲೆ ಇರುವ ಸ್ಥಳಾಕೃತಿ, ಭೂಕಂಪಶಾಸ್ತ್ರ, ಅನಿಲ, ಖನಿಜ ಗುರುತಿಸುವಿಕೆ, ಮೇಲ್ಮೈ ರಾಸಾಯನಿಕ ಸಂಯೋಜನೆ, ಭೌತಿಕ ಗುಣಲಕ್ಷಣಗಳು ಮತ್ತು ಚಂದ್ರನ ವಾತಾವರಣ ಸಂಯೋಜನೆಯ ವಿವರವಾದ ಅಧ್ಯಯನ ನಡೆಸಲು ಸಾಧ್ಯವಿದೆ.

SCROLL FOR NEXT