ವಿಜ್ಞಾನ-ತಂತ್ರಜ್ಞಾನ

ಸೆಲ್ಫಿಯಿಂದ ಹೃದಯ ಸಮಸ್ಯೆಗಳನ್ನು ಪತ್ತೆ ಮಾಡಬಹುದು! 

Srinivas Rao BV

ಬೀಜಿಂಗ್: ಸೆಲ್ಫಿ ಕ್ಲಿಕ್ಕಿಸುವುದರಿಂದ ಸಾವು ಬಂದಿರುವ ಅನೇಕ ಪ್ರಕರಣಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಸೆಲ್ಫಿಯಿಂದ ಯಾವುದಾದರೂ ಆರೋಗ್ಯ ಸಮಸ್ಯೆಯನ್ನು ಪತ್ತೆ ಮಾಡಬಹುದೆಂಬ ಅತ್ಯಾಶ್ಚರ್ಯದ ಮಾಹಿತಿ ಬಹಿರಂಗವಾಗಿದೆ. 

ಮುಖದ ಚಿತ್ರಗಳನ್ನು ನೋಡಿ ಕಂಪ್ಯೂಟರ್ ಆಲ್ಗರಿದಮ್ ಪರಿಧಮನಿಯ ಕಾಯಿಲೆಗಳನ್ನು ಪತ್ತೆ ಮಾಡಲಿದೆ ಎನ್ನುತ್ತಾರೆ ಸಂಶೋಧಕರು. 

ಯುರೋಪಿಯನ್ ಹಾರ್ಟ್ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ. 

ಆಲ್ಗರಿದಮ್ ನ್ನು ಸಮರ್ಥವಾದ ಸ್ಕ್ರೀನಿಂಗ್ ಟೂಲ್ ಆಗಿ ಬಳಕೆ ಮಾಡಿಕೊಂಡು ಈ ಮೂಲಕವಾಗಿ ಹೃದಯ ಸಂಬಂಧಿ ಸಮಸ್ಯೆಗಳನ್ನು ಪತ್ತೆ ಮಾಡಬಹುದಾಗಿದೆ. ನಮ್ಮ ಅಧ್ಯಯನದ ಪ್ರಕಾರ ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಿಕೊಂಡು ಹೃದಯ  ಸಂಬಂಧಿ ಸಮಸ್ಯೆಗಳನ್ನು ಪತ್ತೆ ಮಾಡಲು ಮುಖದ ಭಾವ ಚಿತ್ರಗಳನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಚೀನಾದಲ್ಲಿರುವ ಪೆಕಿಂಗ್ ಯೂನಿಯನ್ ಮೆಡಿಕಲ್ ಕಾಲೇಜಿನ ಝೆ ಝೆಂಗ್ ಹೇಳಿದ್ದಾರೆ. 

ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಪರೀಕ್ಷೆಯನ್ನು ನಡೆಸಬಹುದಾಗಿದ್ದು, ಪರಿಣಾಮಕಾರಿಯಾಗಿ ಸಮಸ್ಯೆಗಳನ್ನು ಪತ್ತೆ ಮಾಡಬಹುದಾಗಿದೆ. ಈ ಅಧ್ಯಯನ ವರದಿಗಾಗಿ ಚೀನಾದಲ್ಲಿ 2017 ರ ಜುಲೈ-2019 ರ ಮಾರ್ಚ್ ವರೆಗೆ 5,796 ರೋಗಿಗಳನ್ನು ನೋಂದಣಿ ಮಾಡಿಕೊಳ್ಳಲಾಗಿತ್ತು.

ಕೃತಕ ಬುದ್ಧಿಮತ್ತೆಯ ಮೂಲಕ ಹೃದಯ ಸಂಬಂಧಿ ಸಮಸ್ಯೆಗಳನ್ನು ಪತ್ತೆ ಮಾಡುವ ವಿಧಾನವನ್ನು ಮತ್ತಷ್ಟು ನಿಖರಗೊಳಿಸಬೇಕಿದೆ, ಏಕೆಂದರೆ ಶೇ.46 ರಷ್ಟು ತಪ್ಪು ಮಾಹಿತಿ ಇದರ ಮೂಲಕ ಲಭ್ಯವಾಗುವ ಸಾಧ್ಯತೆಗಳಿದ್ದು, ಕಾರಣವಿಲ್ಲದೇ ರೋಗಿಗಳು ಆತಂಕಪಡುವಂತಾಗಲಿದೆ ಎಂದೂ ಸಂಶೋಧಕರು ತಿಳಿಸಿದ್ದಾರೆ.

SCROLL FOR NEXT