ವಿಜ್ಞಾನ-ತಂತ್ರಜ್ಞಾನ

'ಕೋವಿಡ್-19 ಕೊಬ್ಬು' ಇಳಿಸುವುದಕ್ಕೆ ಫೆನೋಫೈಫ್ರೇಟ್ ಸೂಕ್ತ ಔಷಧ ಎನ್ನುತ್ತಿದ್ದಾರೆ ವಿಜ್ಞಾನಿಗಳು! 

Srinivas Rao BV

ಜೆರುಸಲೇಮ್: ಕೋವಿಡ್-19 ಗಾಗಿಯೇ ಔಷಧ ತಯಾರಾಗದೇ ಇದ್ದರೂ ಸಹ ಅದಕ್ಕೆ ಪರ್ಯಾಯವಾಗಿ ಕೊರೋನಾ ವೈರಾಣುವಿನಿಂದ ಉಂಟಾಗುವ ಅನಾರೋಗ್ಯದ ತೀವ್ರತೆ ಕಡಿಮೆ ಮಾಡಬಲ್ಲ ಹಲವು ಔಷಧಗಳನ್ನು ವಿಜ್ಞಾನಿಗಳು ಕಂಡುಕೊಳ್ಳುತ್ತಿದ್ದಾರೆ. ಈಗ ಈ ಸಾಲಿಗೆ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಫೆನೋಫೈಫ್ರೇಟ್ ಔಷಧವೂ ಸೇರುವ ಸಾಧ್ಯತೆ ಇದೆ.

ಹೀಬ್ರೂ ವಿಶ್ವವಿದ್ಯಾನಿಲಯದ ಪ್ರೊಫೆಸರ್ ನೀಡಿರುವ ಮಾಹಿತಿಯ ಪ್ರಕಾರ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಲು ನೀಡಲಾಗುವ ಫೆನೋಫೈಫ್ರೇಟ್ ಔಷಧದಿಂದ ಕೊರೋನಾದಿಂದ ಉಂಟಾಗುವ ಸಮಸ್ಯೆಯನ್ನು ಸಾಮಾನ್ಯ ಶೀತದ ಮಟ್ಟಿಗೆ ಇಳಿಸಬಹುದಾಗಿದೆ.

ಕೊರೋನಾ ಸೋಂಕಿತ ಮನುಷ್ಯನ ಅಂಗಾಂಶ (ಟಿಶ್ಯೂ)ವಿನ ಮೇಲೆ ಪ್ರಯೋಗ ಮಾಡಲಾಗಿದ್ದು, ಇದರಿಂದ ಬಂದ ಫಲಿತಾಂಶದ ಆಧಾರದಲ್ಲಿ ಫೆನೋಫೈಫ್ರೇಟ್ ಕೊರೋನಾವನ್ನು ಸಾಮಾನ್ಯ ಶೀತಕ್ಕೆ ಇಳಿಕೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಹೀಬ್ರೂ ವಿಶ್ವವಿದ್ಯಾನಿಲಯದ ಪ್ರೊಫೆಸರ್, ಗ್ರಾಸ್ ಸೆಂಟರ್ ಫಾರ್ ಬಯೋ ಇಂಜಿನಿಯರಿಂಗ್ ವಿಭಾಗದ ನಿರ್ದೇಶಕರಾಗಿರುವ ಯಾಕೋವ್ ನಹ್ಮಿಯಾಸ್ ಹೇಳಿದ್ದಾರೆ.

ನ್ಯೂಯಾರ್ಕ್ ನ ಮೌಂಟ್ ಸಿನಾಯ್ ವೈದ್ಯಕೀಯ ಕೇಂದ್ರದ ಬೆಂಜಮಿನ್ ಟೆನ್ಓವರ್ ನ ಸಹಯೋಗದಲ್ಲಿ ಈ ಸಂಶೋಧನೆ ನಡೆದಿದ್ದು ಕೊರೋನಾ ಶ್ವಾಸಕೋಶದಲ್ಲಿ ಕೊಬ್ಬಿನಾಮ್ಲಗಳಾದ ಲಿಪಿಡ್ ಗಳ ಶೇಖರಣೆಗೆ ಕಾರಣವಾಗಿ ಶ್ವಾಸಕೋಶಕ್ಕೆ ಹಾನಿಯುಂಟುಮಾಡುತ್ತದೆ. ಇದೇ ಕಾರಣದಿಂದ ಕೊರೋನಾ ಮಾರಕವಾಗಿದೆ. ಆದರೆ ಫೆನೋಫೈಫ್ರೇಟ್ ಔಷಧ ಇದನ್ನು ಗುಣಪಡಿಸಬಲ್ಲದು ಎಂದು ಸಂಶೋಧನೆಯ ಮೂಲಕ ತಿಳಿದುಬಂದಿದೆ.

ನಾವು ಕಂಡುಕೊಂಡಿರುವುದು ಕ್ಲಿನಿಕಲ್ ಸ್ಟಡಿಗಳಿಂದಲೂ ಸಿದ್ಧವಾದರೆ ಈ ಚಿಕಿತ್ಸಾ ವಿಧಾನ ಕೋವಿಡ್-19 ನ ತೀವ್ರತೆಯನ್ನು ಸಾಮಾನ್ಯ ಶೀತಕ್ಕಿಂತ ಹೆಚ್ಚಾಗದಂತೆ ಇಳಿಕೆ ಮಾಡಬಹುದಾಗಿದೆ ಎಂದು ಯಾಕೋವ್ ನಹ್ಮಿಯಾಸ್ ಹೇಳಿದ್ದಾರೆ. ಇಬ್ಬರೂ ಸಂಶೋಧಕರು SARS-CoV-2 ವೈರಾಣು ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳುವುದಕ್ಕೆ ಸೋಂಕಿತ ರೋಗಿಯ ಶ್ವಾಸಕೋಶವನ್ನು ಯಾವ ರೀತಿಯಲ್ಲಿ ಬದಲಾವಣೆ ಮಾಡುತ್ತದೆ ಎಂಬ ವಿಧಾನವನ್ನು ಅರಿಯುವುದರಲ್ಲಿ ಗಮನ ಕೇಂದ್ರೀಕರಿಸಿದ್ದಾರೆ.

ಇವರ ಸಂಶೋಧನೆಯ ಪ್ರಕಾರ, ಕ್ರಮಬದ್ಧವಾಗಿ ನಡೆಯುವ ಕಾರ್ಬೊಹೈಡ್ರೇಟ್ಸ್ ನ್ನು ಕಡಿಮೆ ಮಾಡುವ (burning of carbohydrates) ಪ್ರಕ್ರಿಯೆಗೆ ಈ ವೈರಾಣು ಅಡ್ಡಿಯಾಗಲಿದೆ. ಇದರ ಪರಿಣಾಮವಾಗಿ ಶ್ವಾಸಕೋಶ ಕೋಶಗಳಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನ ಅಂಶ ಸಂಗ್ರಹಣೆಯಾಗುತ್ತದೆ, ಇದು ವೈರಾಣು ದ್ವಿಗುಣಗೊಳ್ಳುವ ವಾತಾವರಣ ಉಂಟುಮಾಡುತ್ತದೆ.

SCROLL FOR NEXT