ವಿಕ್ರಮ್ ಎಸ್ ರಾಕೆಟ್ 
ವಿಜ್ಞಾನ-ತಂತ್ರಜ್ಞಾನ

ಭಾರತೀಯ ಖಾಸಗಿ ನಿರ್ಮಾಣದ ಪ್ರಥಮ ರಾಕೆಟ್ ವಿಕ್ರಮ್ ಎಸ್; ಇಸ್ರೋ ಲಾಂಚ್ ಪ್ಯಾಡ್ ನಿಂದ ಉಡಾವಣೆ

ವಿಕ್ರಮ್ ಎಂಬುದು ಸ್ಕೈರೂಟ್ ಸಂಸ್ಥೆಯ ಒಂದು ಸ್ಮಾಲ್ ಲಿಫ್ಟ್ ಲಾಂಚ್ ವೆಹಿಕಲ್ ಕುಟುಂಬಕ್ಕೆ ಇಟ್ಟಿರುವ ಹೆಸರಾಗಿದೆ. ಈ ಉಡಾವಣಾ ವಾಹನಗಳನ್ನು ವಿಶೇಷವಾಗಿ ಸಣ್ಣ ಉಪಗ್ರಹಗಳ ಮಾರುಕಟ್ಟೆಗಾಗಿ ನಿರ್ಮಿಸಲಾಗಿದೆ.

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತದ ಪ್ರಥಮ ಖಾಸಗಿ ನಿರ್ಮಾಣದ ಉಡಾವಣಾ ವಾಹನ, ವಿಕ್ರಮ್ ಎಸ್ ತನ್ನ ಮೊದಲ ಹಾರಾಟವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ), ಆಂಧ್ರಪ್ರದೇಶದ ಶ್ರೀಹರಿಕೋಟಾದ ಲಾಂಚ್ ಪ್ಯಾಡ್ ನಿಂದ ನವೆಂಬರ್ 18, ಬೆಳಗ್ಗೆ 11:30ಕ್ಕೆ ನಡೆಸಲಿದೆ.

ಹೈದರಾಬಾದ್ ಮೂಲದ ಸ್ಟಾರ್ಟಪ್ ಸಂಸ್ಥೆಯಾದ ಸ್ಕೈರೂಟ್‌ನ ಈ ಯೋಜನೆಗೆ ಪ್ರಾರಂಭ್ ಎಂದು ಹೆಸರಿಡಲಾಗಿದೆ.

ವಿಕ್ರಮ್ ರಾಕೆಟ್

ವಿಕ್ರಮ್ ಎಂಬುದು ಸ್ಕೈರೂಟ್ ಸಂಸ್ಥೆಯ ಒಂದು ಸ್ಮಾಲ್ ಲಿಫ್ಟ್ ಲಾಂಚ್ ವೆಹಿಕಲ್ ಕುಟುಂಬಕ್ಕೆ ಇಟ್ಟಿರುವ ಹೆಸರಾಗಿದೆ. ಈ ಉಡಾವಣಾ ವಾಹನಗಳನ್ನು ವಿಶೇಷವಾಗಿ ಸಣ್ಣ ಉಪಗ್ರಹಗಳ ಮಾರುಕಟ್ಟೆಗಾಗಿ ನಿರ್ಮಿಸಲಾಗಿದೆ.

ವಿಕ್ರಮ್ ರಾಕೆಟ್‌ಗಳು ಮೂರು ಹಂತದಲ್ಲಿ ಬರುತ್ತಿದ್ದು, ಕ್ರಮವಾಗಿ ವಿಕ್ರಮ್ 1, 2 ಹಾಗೂ 3 ಆಗಿವೆ. ಇವುಗಳನ್ನು ಕಾರ್ಬನ್ ಸಂಯುಕ್ತಗಳು ಹಾಗೂ ತ್ರೀಡಿ ಪ್ರಿಂಟೆಡ್ ಮೋಟರ್‌ಗಳನ್ನು ಬಳಸಿ ನಿರ್ಮಿಸಲಾಗಿದೆ.

ವಿಕ್ರಮ್ 1 ಈ ಸರಣಿಯ ಪ್ರಥಮ ರಾಕೆಟ್ ಆಗಿದ್ದು, ಇದರಲ್ಲಿ ಮೂರು ಘನ ಇಂಧನ ಹಂತಗಳಿವೆ. ಇದರ ಅಂತಿಮ ಹಂತ ರಾಮನ್ ಇಂಜಿನ್ ಆಗಿದ್ದು, ಇದರಲ್ಲಿ ನಾಲ್ಕು ಇಂಜಿನ್‌ಗಳ ಗುಂಪಿನಲ್ಲಿ ಎಂಎಂಎಚ್ ಹಾಗೂ ಎನ್‌ಟಿಓ ದ್ರವ ಇಂಧನಗಳು ಬಳಕೆಯಾಗುತ್ತವೆ.

ವಿಕ್ರಮ್ 1 ರಾಕೆಟ್‌ನ್ನು 290 ಕೆಜಿ ತೂಕದ ಉಪಗ್ರಹಗಳನ್ನು ಸನ್ ಸಿಂಕ್ರೊನಸ್ ಪೋಲಾರ್ ಆರ್ಬಿಟ್‌ಗೆ (ಎಸ್ಎಸ್‌ಪಿಓ) ಜೋಡಿಸಲು ಹಾಗೂ 480 ಕೆಜಿ ತೂಕವನ್ನು 500 ಕಿಲೋಮೀಟರ್ ದೂರದ ಲೋ ಅರ್ತ್ ಆರ್ಬಿಟ್ (ಎಲ್ಇಓ) ನಲ್ಲಿ 45 ಡಿಗ್ರಿ ಕೋನದಲ್ಲಿ ಜೋಡಿಸಲು ವಿನ್ಯಾಸಗೊಳಿಸಲಾಗಿದೆ.

ಈ ರಾಕೆಟ್‌ಗೆ ಭಾರತೀಯ ಬಾಹ್ಯಾಕಾಶ ಯೋಚನೆಗಳ ಸ್ಥಾಪಕರಾದ ವಿಕ್ರಮ್ ಸಾರಾಭಾಯಿ ಅವರ ಗೌರವಾರ್ಥವಾಗಿ ವಿಕ್ರಮ್ ಎಂದೇ ಹೆಸರಿಡಲಾಗಿದೆ.

ಮಿಷನ್ ಪ್ರಾರಂಭ್

ವಿಕ್ರಮ್ 1 ರಾಕೆಟ್‌ನ ಪೂರ್ಣ ಆರ್ಬಿಟಲ್ ಉಡಾವಣೆಗೆ ಪೂರ್ವಭಾವಿಯಾಗಿ ವಿಕ್ರಮ್ ಎಸ್ ರಾಕೆಟ್ ಅನ್ನು ನವೆಂಬರ್ 18 ರಂದು ಮಿಷನ್ ಪ್ರಾರಂಭ್ ಎಂಬ ಹೆಸರಿನಲ್ಲಿ ಉಡಾಯಿಸಲಾಗುತ್ತದೆ.

ವಿಕ್ರಮ್ ಎಸ್ ರಾಕೆಟ್ ಒಂದು ಏಕ ಹಂತದ ಸಬ್ ಆರ್ಬಿಟಲ್ ಉಡಾವಣಾ ವಾಹನವಾಗಿದೆ. ಸಬ್ ಆರ್ಬಿಟಲ್ ರಾಕೆಟ್‌ಗಳು ಆರ್ಬಿಟಲ್ ವೇಗಕ್ಕಿಂತ ನಿಧಾನವಾಗಿ ಚಲಿಸುತ್ತವೆ. ಆದರೆ ಅವು‌ಗಳ ವೇಗ ಅವುಗಳನ್ನು ಭೂಮಿಯ ಅಕ್ಷದಲ್ಲಿ ಸುತ್ತಲು ಸಾಕಷ್ಟಾಗುತ್ತದೆ.

ಈ ಏಕ ಹಂತದ, ಘನ ಇಂಧನ ರಾಕೆಟ್ ಅಲ್ಯೂಮಿನಿಯಂ ಹಾಗೂ ಅಮೋನಿಯಂ ಪರ್ಕ್ಲೋರೇಟ್‌ಗಳ ಮಿಶ್ರಣವನ್ನು ದಹಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಹೈಡ್ರಾಕ್ಸಿಲ್ ಟರ್ಮಿನೇಟೆಡ್ ಪಾಲಿಬ್ಯುಟಾಡೀನ್ ಬೈಂಡರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದೊಂದು ಪ್ರಯೋಗಿಸಿ ಪರೀಕ್ಷಿಸಿರುವ ಘನ ಇಂಧನವಾಗಿದ್ದು, ಇದನ್ನು ಭಾರತದ ಪಿಎಸ್ಎಲ್‌ವಿ ಹಾಗೂ ಪಿಎಸ್ಎಲ್‌ವಿ ರಾಕೆಟ್‌ಗಳ ಘನ ಇಂಧನ ಹಂತಗಳಲ್ಲಿ ಬಳಸಿಕೊಳ್ಳಲಾಗಿದೆ.

ಸಬ್ ಆರ್ಬಿಟಲ್ (ಸಮುದ್ರ ಮಟ್ಟದಿಂದ ಅಂದಾಜು 80 ಕಿಲೋಮೀಟರ್ ಎತ್ತರ) ಎಂದರೆ ಬಾಹ್ಯಾಕಾಶದ ಅಂಚಿಗೆ ಅಥವಾ ಕಾರ್ಮನ್ ಲೈನ್‌ಗೆ ಸಣ್ಣ ಸಮಯದ ಹಾರಾಟ ಎನ್ನಲಾಗಿದೆ.  ಸಾಮಾನ್ಯವಾಗಿ ಯಾವುದೇ ಹಾರಾಟ 'ಕಾರ್ಮನ್ ಲೈನ್' (ಸಮುದ್ರ ಮಟ್ಟದಿಂದ 100 ಕಿಲೋಮೀಟರ್ ಎತ್ತರ) ಮೀರಿ ಸಾಗಿದರೆ ಅದನ್ನು ಬಾಹ್ಯಾಕಾಶಕ್ಕೆ ಮುನ್ನುಗ್ಗುವಿಕೆ ಎಂದು ಕರೆಯಲಾಗುತ್ತದೆ. ಈ ಕಾರ್ಮನ್ ರೇಖೆಯ ಕೆಳಮಟ್ಟದ ಹಾರಾಟವನ್ನು ಮೇಲಿನ ವಾತಾವರಣದ ಪ್ರಯೋಗಗಳಿಗೆ ನಡೆಸುವ ಸಬ್ ಆರ್ಬಿಟಲ್ ಹಾರಾಟ ಎಂದು ಕರೆಯಲಾಗುತ್ತದೆ. ಸಬ್ ಆರ್ಬಿಟಲ್ ಉಡಾವಣೆಗಳು ಮೈಕ್ರೋ ಗ್ರ್ಯಾವಿಟಿ ಸಂಶೋಧನೆಗಳಿಗೆ ನೆರವಾಗುತ್ತವೆ. ಮೈಕ್ರೋ ಗ್ರ್ಯಾವಿಟಿ ಎಂದರೆ, ಮನುಷ್ಯರು ಅಥವಾ ವಸ್ತುಗಳು ತೂಕ ರಹಿತವಾಗಿ ಕಾಣಿಸಿಕೊಳ್ಳುವ ಸ್ಥಿತಿಯಾಗಿದೆ.

ಪೇಲೋಡ್

ವಿಕ್ರಮ್ ಎಸ್ ಮೂರು ಗ್ರಾಹಕರ ಉಪಗ್ರಹಗಳನ್ನು (ಎರಡು ಭಾರತೀಯ ಹಾಗೂ ಒಂದು ವಿದೇಶೀ) ಉಪಗ್ರಹಗಳನ್ನು ತನ್ನ ಸಬ್ ಆರ್ಬಿಟಲ್ ಉಡಾವಣೆಯಲ್ಲಿ ಕೊಂಡೊಯ್ಯಲಿದೆ.

ಚೆನ್ನೈ ಮೂಲದ ಸ್ಟಾರ್ಟಪ್ ಸಂಸ್ಥೆಯಾದ ಸ್ಪೇಸ್ ಕಿಡ್ಸ್ ಭಾರತ, ಅಮೆರಿಕಾ ಹಾಗೂ ಸಿಂಗಾಪುರದ ವಿದ್ಯಾರ್ಥಿಗಳು ನಿರ್ಮಿಸಿರುವ, 2.5 ಕೆಜಿ ತೂಕದ ಉಪಗ್ರಹವನ್ನು ವಿಕ್ರಮ್ ಎಸ್ ನಲ್ಲಿ ಕಳುಹಿಸಲಿದೆ.

ವಿಕ್ರಮ್ ಎಸ್ ಉಡಾವಣೆಯ ಮಹತ್ವ

ವಿಕ್ರಮ್ ಎಸ್ ರಾಕೆಟ್‌ನ ಯಶಸ್ವಿ ಉಡಾವಣೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಬೃಹತ್ ಹೆಜ್ಜೆಯಾಗಲಿದೆ. ಈ ಉಡಾವಣೆ ಯಶಸ್ವಿಯಾದರೆ, ಅದು ವಿಕ್ರಮ್ ಸರಣಿಯ ರಾಕೆಟ್‌ಗಳ ತಂತ್ರಜ್ಞಾನದ ಸಾಮರ್ಥ್ಯವನ್ನು ಸಾಬೀತುಪಡಿಸಲಿದೆ.

ಸ್ಕೈರೂಟ್ ಸಂಸ್ಥೆಯ ಹೇಳಿಕೆಯ ಪ್ರಕಾರ, ವಿಕ್ರಮ್ ರಾಕೆಟ್ ಅನ್ನು ಯಾವುದೇ ಉಡಾವಣಾ ಪ್ರದೇಶದಲ್ಲೂ 24 ಗಂಟೆಗೂ ಕಡಿಮೆ ಅವಧಿಯಲ್ಲಿ ಜೋಡಿಸಬಹುದು. ಅದರೊಡನೆ ಇದು ಪೇಲೋಡ್ ಮಾದರಿಯಲ್ಲಿ ಅತ್ಯಂತ ಕಡಿಮೆ ವೆಚ್ಚದಾಯಕ ರಾಕೆಟ್ ಆಗಿದೆ.

ವಿಕ್ರಮ್ ನಂತಹ ಸಣ್ಣ ಉಡಾವಣಾ ವಾಹನದ ಅಗತ್ಯವೇನು?

ಹಲವಾರು ವರ್ಷಗಳ ಕಾಲ 5ರಿಂದ 1,000 ಕೆಜಿಯ ತನಕ ತೂಕ ಹೊಂದಿದ್ದ ಸಣ್ಣ ಉಪಗ್ರಹಗಳನ್ನು 'ಎಕ್ಸ್‌ಟ್ರಾ ಉಪಗ್ರಹ' ಎಂದು ದೊಡ್ಡ ಉಪಗ್ರಹಗಳನ್ನು ಕೊಂಡೊಯ್ಯುವ ರಾಕೆಟ್‌ಗಳಲ್ಲಿ ಕಳುಹಿಸಲಾಗುತ್ತಿತ್ತು. ಆದ್ದರಿಂದ ಸಾಮಾನ್ಯವಾಗಿ ಈ ಸಣ್ಣ ಉಪಗ್ರಹಗಳ ಉಡಾವಣೆ ಯಾವಾಗ ಎನ್ನುವುದು ದೊಡ್ಡ ಉಪಗ್ರಹಗಳ ಉಡಾವಣೆಯ ಆಧಾರದ ಮೇಲೆ ನಿರ್ಧಾರವಾಗುತ್ತಿತ್ತು. ದೊಡ್ಡ ಉಪಗ್ರಹಗಳ ಉಡಾವಣೆಯೇ ಯಾವಾಗಲೂ ಪ್ರಥಮ ಆದ್ಯತೆಯಾಗಿತ್ತು.

ಆದರೆ ಕ್ರಮೇಣ ಸರ್ಕಾರಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಪ್ರಯೋಗಾಲಯಗಳು ಸಹ ಬಾಹ್ಯಾಕಾಶಕ್ಕೆ ಹೆಚ್ಚು ಹೆಚ್ಚು ಉಪಗ್ರಹಗಳನ್ನು ಕಳುಹಿಸಲು ಆರಂಭಿಸಿದವು. ಸಾಮಾನ್ಯವಾಗಿ ಅವೆಲ್ಲವೂ ಸಣ್ಣ ಉಪಗ್ರಹಗಳೇ ಆಗಿದ್ದವು. ಈ ಮೂಲಕ ಉಡಾವಣೆಗಳು ಹೆಚ್ಚಾದಂತೆ, ಸಣ್ಣ ಉಪಗ್ರಹಗಳನ್ನು ಕೊಂಡೊಯ್ಯಲು ಸಣ್ಣ ಉಪಗ್ರಹ ಉಡ್ಡಯನ ವಾಹನಗಳ ಅನಿವಾರ್ಯತೆ ಎದುರಾಗತೊಡಗಿತು.

ಕಳೆದ 8-10 ವರ್ಷಗಳ ಅವಧಿಯಲ್ಲಿ ಸಣ್ಣ ಉಪಗ್ರಹಗಳ ಉಡಾವಣಾ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಬಾಹ್ಯಾಕಾಶ ಆಧಾರಿತ ಮಾಹಿತಿ ಸಂವಹನ, ವಿಚಕ್ಷಣೆ ಹಾಗೂ ವಾಣಿಜ್ಯ ಅಗತ್ಯತೆಗಳು ಹೆಚ್ಚಾಗುತ್ತಿದ್ದರಿಂದ ಉಪಗ್ರಹಗಳ ಅಗತ್ಯತೆಯೂ ಹೆಚ್ಚುತ್ತಾ ಹೋಗಿತ್ತು.

ಖಾಸಗಿ ವಲಯ ಎಷ್ಟು ಅಗತ್ಯ?

ಭಾರತದಲ್ಲಿ ಇಸ್ರೋ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಾಮರ್ಥ್ಯ ಹೊಂದಿದೆ. ಆದರೆ ಉಪಗ್ರಹ ಉಡಾವಣೆಯ ಬೇಡಿಕೆ ಈಗ ಇಸ್ರೋದ ಸಾಮರ್ಥ್ಯವನ್ನು ಮೀರಿ ಹೆಚ್ಚಳ ಕಂಡಿದೆ. ಅದಲ್ಲದೆ ಒಂದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾಗಿ ಇಸ್ರೋ ಬೇರೆ ವಿಚಾರಗಳ ಕುರಿತೂ ಗಮನ ಹರಿಸಬೇಕಾಗಿದೆ.

ಆದ್ದರಿಂದ ಈ ವಲಯ ಖಾಸಗಿ ಸಂಸ್ಥೆಗಳಿಗೂ ತೆರೆದುಕೊಂಡಿದ್ದು, ಇಸ್ರೋ ಖಾಸಗಿ ಸಂಸ್ಥೆಗಳಿಗೆ ಮೂಲಭೂತ ಸೌಲಭ್ಯಗಳು ಹಾಗೂ ಜ್ಞಾನವನ್ನು ಒದಗಿಸುತ್ತಿದೆ. ಅದರೊಡನೆ ಇಸ್ರೋದ ಸೌಲಭ್ಯಗಳನ್ನು ಬಳಕೆ ಮಾಡುವುದಕ್ಕೆ ಖಾಸಗಿ ಸಂಸ್ಥೆಗಳು ಹಣ ಪಾವತಿ ಮಾಡಬೇಕಾಗುತ್ತದೆ. ಈ ಮೂಲಕ ಇಸ್ರೋದ ಆದಾಯವೂ ಹೆಚ್ಚಳವಾಗುತ್ತದೆ.

2020ರಲ್ಲಿ ಹಣಕಾಸು ಸಚಿವರು ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಪಾಲ್ಗೊಳ್ಳುವಿಕೆಯನ್ನು‌ ಅನುಮತಿಸಿದ ಬಳಿಕ ಖಾಸಗಿ ರಾಕೆಟ್ ಹಾಗೂ ಉಪಗ್ರಹಗಳ ನಿರ್ಮಾಣಕ್ಕೆ ವಿಶೇಷ ಉತ್ತೇಜನ ದೊರಕಿತು.

ಸ್ಕೈರೂಟ್ ಸಂಸ್ಥೆಯನ್ನು ಹೊರತುಪಡಿಸಿ, ಅಗ್ನಿಕುಲ್ ಕಾಸ್ಮೋಸ್ ಸಂಸ್ಥೆಯೂ ಸಹ ತನ್ನ ಸೆಮಿ ಕ್ರಯೋಜೆನಿಕ್ ಅಗ್ನಿಲೆಟ್ ಇಂಜಿನ್ನನ್ನು ಪರೀಕ್ಷಿಸಿದೆ.

ಸ್ಕೈರೂಟ್ ಏರೋಸ್ಪೇಸ್

ಸ್ಕೈರೂಟ್ ಏರೋಸ್ಪೇಸ್ ಒಂದು ಭಾರತೀಯ ಖಾಸಗಿ ಬಾಹ್ಯಾಕಾಶ ಉತ್ಪಾದನಾ ಸಂಸ್ಥೆಯಾಗಿದೆ. ಸ್ಕೈರೂಟ್ ತನ್ನದೇ ಆದ ಸರಣಿ ಉಡಾವಣಾ ವಾಹನಗಳನ್ನು, ಅದರಲ್ಲೂ ವಿಶೇಷವಾಗಿ ಸಣ್ಣ ಉಪಗ್ರಹ ಮಾರುಕಟ್ಟೆಗಾಗಿ ನಿರ್ಮಿಸುವ ಉದ್ದೇಶ ಹೊಂದಿದೆ.

ಹೈದರಾಬಾದ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸ್ಕೈರೂಟ್ ಸಂಸ್ಥೆಯನ್ನು 2018ರಲ್ಲಿ ಮಾಜಿ ಇಸ್ರೋ ವಿಜ್ಞಾನಿಗಳು ಆರಂಭಿಸಿದ್ದರು.

ಗಿರೀಶ್ ಲಿಂಗಣ್ಣ

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT