ವಿಶೇಷ

ಎಣಿಸಲಾರದಷ್ಟು ಸಂಪತ್ತುಳ್ಳ ಹಡಗು ಪತ್ತೆ!

Mainashree
ಬಗೋಟಾ: ಇದು ಅಂತಿಂಥ ಹುಡುಕಾಟವಲ್ಲ. ಬರೋಬ್ಬರಿ 300ಕ್ಕೂ ಹೆಚ್ಚು ವರ್ಷಗಳ ಕಾಲ ಮುಳುಗಿದ್ದ ಹಡಗೊಂದರಲ್ಲಿ ಕಡಲತಳ ಸೇರಿದ್ದ ಲಕ್ಷ ಕೋಟಿ ಮೌಲ್ಯದ ಸಂಪತ್ತಿಗಾಗಿ ನಡೆದಿದ್ದ ಹುಡುಕಾಟ. ಹಲವಾರು ದೇಶಗಳ ಹಲವಾರು ತಜ್ಞರು ಇನ್ನಿಲ್ಲದಂತೆ ಕಡಲತಳವನ್ನು ಇದಕ್ಕಾಗಿ ಜಾಲಾಡಿದ್ದರು.
1708ರಲ್ಲಿ ಚಿನ್ನ, ಬೆಳ್ಳಿ ಮತ್ತು ವೈಢೂರ್ಯದ ಅಪಾರ ಸಂಪತ್ತು ತುಂಬಿಕೊಂಡು ಹೊರಟಿದ್ದ 'ಸ್ಯಾನ್ ಝೆ' ಹೆಸರಿನ ಬಹುಮಹಡಿ ಹಡಗು, ಕೊಲಂಬಿಯಾದ ಕೆರಿಬಿಯನ್ ಸಮುದ್ರದ ಬಂದರು ಕೋಟೆ ನಗರ ಕಾರ್ಟೆಜೆನಾಕ್ಕೆ ಹತ್ತಿರದ ಐಲಾಸ್ ಡೆಲ್ ರೊಸಾರಿಯೋ ಪ್ರದೇಶದಲ್ಲಿ ಮುಳುಗಿತ್ತು. 
ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಸ್ಪೇನ್ ದೊರೆ ಪಂಚಮ ಫಿಲಿಪ್ ಗೆ ಸೇರಿದ್ದ ದೊರೆ ಪಂಚಮ ಫಿಲಿಪ್ ಗೆ ಸೇರಿದ್ದ ಈ ಹಡುಗು ಅಂದಿನಿಂದ ಕಳೆದ ವಾರದ ನವೆಂಬರ್ 27ರವರೆಗೆ ಇಡೀ ಜಗತ್ತಿನ ನಿಧಿ ಶೋಧಕರ ನಿತ್ಯದ ಕನಸಾಗಿ ಕಾಡಿತ್ತು. 
ಇಸಿಹಾಸದ ಪುಟಗಳಲ್ಲಿ ಸ್ಪೇನ್ ಉತ್ತರಾಧಿಕಾರಿ ಯುದ್ಧ ಮರೆಯಾದರೂ, ಆ ಸಂದರ್ಭದಲ್ಲಿ ಕಡಲತಳ ಸೇರಿದ್ದ ಸಂಪದ್ಭರಿತ ಒಡಲಿನ ಹಡಗು ಸ್ಯಾನ್ ಝೆಯನ್ನು ಯಾರೂ ಮರೆತಿರಲಿಲ್ಲ. ತಂತ್ರಜ್ಞಾನ ಬೆಳೆದಂತೆ ಹುಡುಕಾಟವೂ ತೀವ್ರಗೊಂಡಿತ್ತು. 
ಐತಿಹಾಸಿಕ ದಾಖಲೆ ಹಾಗೂ ಉಲ್ಲೇಖಗಳ ಆಧಾರದ ಮೇಲೆ ಬಹುತೇಕ ಹುಡುಕಾಟ ನಡೆದಿದ್ದು ಕಾರ್ಟೆಜೆನಾ ಪ್ರದೇಶದ ಸುತ್ತಮುತ್ತ ಹಲವಾರು ಹಡಗುಗಳ ಅಶೇಷಗಳು ಸಿಕ್ಕವಾದರೂ, ಗ್ಯಾಲನ್ ಎಂದು ಕರೆಯಲ್ಪಡುವ ಸಂಪತ್ತು ಅಡಗಿಸಿಟಿದ್ದ ಅಲಂಕಾರಿಕ ಫಿರಂಗಿಗಳನ್ನು ಹೊಂದಿದ್ದ ಸ್ಯಾನ ಝೆ ಮಾತ್ರ ಪತ್ತೆಯಾಗಿರಲಿಲ್ಲ. 
ಕೊನೆಗೆ ಕೊಲಂಬಿಯಾ ಹಾಗೂ ವಿದೇಶಿ ಸಂಶೋಧಕರು 1985ರಲ್ಲಿ ಟೈಟಾನಿಕ್ ನೌಕೆಯನ್ನು ಪತ್ತೆ ಹಚ್ಚಿದ್ದ ಪರಿಣಿತನನ್ನು ಸೇರಿಸಿಕೊಂಡು ಸ್ಯಾನ್ ಝೆ ಹುಡುಕಲು ಮುಂದಾದರು.
ಹುಡುಕಾಟ ನಡೆದಿದ್ದ ಸ್ಥಳ ಕೈಬಿಟ್ಟು, 307 ವರ್ಷಗಳ ಹಿಂದೆ ಗಾಳಿ ಬೀಸಿರಬಹುದಾದ ದಿಕ್ಕು, ಕಡಲ ಪ್ರವಾಹದ ವಿವರಗಳನ್ನು ಅಭ್ಯಸಿಸಿ, ಹುಡುಕಾಟದ ಸ್ಥಳವನ್ನು ನಿಖರ ಗೊಳಿಸಿದರು. ಸುಮಾರು 6 ಹಡಗುಗಳ ಅವಶೇಷ ಪತ್ತೆಯಾದವು. ಅವುಗಳ ಪೈಕಿ ಪಕ್ಕಕ್ಕೆ ವಾಲಿಕೊಂಡು ಮಲಗಿತ್ತು ಸ್ಯಾನ ಝೆ.
ಡಾಲ್ಫಿನ್ ಚಿತ್ರಗಳಿದ್ದ ಫಿರಂಗಿಗಳನ್ನು ನೋಡುತ್ತಿದ್ದಂತೆ, ಇಡೀ ಜಗತ್ತು ಹುಡುಕುತ್ತಿದ್ದ ಪ್ರಖ್ಯಾತ ಹಡಗು ಸ್ಯಾನ್ ಝೆ ಇದೇ ಎಂಬುದು ಸ್ಪಷ್ಟವಾಯಿತು. ಶತಮಾನದ ಸಂಶೋಧನೆ ಎಂದು ಕರೆಸಿಕೊಂಡಿರುವ ಸ್ಯಾನ್ ಝೆ ಪತ್ತೆಯನ್ನು ಕೊಲಂಬಿಯಾದ ಅಧ್ಯಕ್ಷ ಜುಆನ್ ಮ್ಯಾನ್ಯುಯಲ್ ಸ್ಯಾಂಟೊಸ್ ಖುದ್ದಾಗಿ ಪ್ರಕಟಿಸಿದರು. ಏನಿಲ್ಲವೆಂದರೂ, ರು.1,716 ಲಕ್ಷ ಕೋಟಿ ಮೌಲ್ಯದಷ್ಟು ಸಂಪತ್ತು ಇದರಲ್ಲಿರಬಹುದೆಂದು ಅಂದಾಜಿಸಲಾಗಿದೆ. ಆದರೆ, ಇದರಲ್ಲಿರುವ ಚಿನ್ನ, ಬೆಳ್ಳಿ, ವೈಢೂರ್ಯಗಳ ಪ್ರಾಚೀನ ಮೌಲ್ಯವನ್ನು ಬೆಲೆ ಕಟ್ಟುವುದು ಸದ್ಯಕ್ಕಂತೂ ಸಾಧ್ಯವಿಲ್ಲ.
SCROLL FOR NEXT