ಸುನಂದಾ ಪುಷ್ಕರ್ 
ವಿಶೇಷ

ಸುನಂದಾ ಕೊಂದಿದ್ದು ಮಾಧ್ಯಮವೇ?

ಸಾವಿನ ಹಿಂದಿನ ದಿನದವರೆಗೂ ಸುನಂದಾ ಬದುಕಿನ ಕತೆ ಮಾಧ್ಯಮಗಳಲ್ಲಿ ಒಂಥರಾ...

ನಿನಗೆ ಗೊತ್ತಾ, ಪಾತರಗಿತ್ತಿಗಳು ಬರೀ ಒಂದು ತಿಂಗಳು ಮಾತ್ರ ಬದುಕುತ್ತವೆ.
ಅಷ್ಟೇ ಸಮಯದಲ್ಲಿ ಹುಟ್ಟುತ್ತವೆ, ಪ್ರೀತಿಗೆ ಬೀಳುತ್ತವೆ, ಮರಿ ಮಾಡುತ್ತವೆ.
ಇನ್ನೇನನ್ನೂ ಯೋಚನೆ ಮಾಡದೆ ಸ್ವಚ್ಛಂದವಾಗಿ ಜೀವಿಸುತ್ತವೆ.
ಹೂವಿನಿಂದ ಹೂವಿಗೆ ಹಾರುತ್ತವೆ, ಮುತ್ತು ಕೊಡುತ್ತವೆ, ಖುಷಿಯಾಗಿರುತ್ತವೆ.
ಪಾತರಗಿತ್ತಿಗಳ ಅಷ್ಟು ಸಣ್ಣ ಬದುಕು ನಮ್ಮ ಇಡೀ ಜೀವಮಾನಕ್ಕಿಂತ ಶ್ರೀಮಂತವಾಗಿರುತ್ತದೆ.
ಈ ನಲವತ್ತು ವರ್ಷಗಳಲ್ಲಿ ಒಂದು-ಪಾತರಗಿತ್ತಿಯ ದಿನವನ್ನೂ ನಾನು ಬದುಕಿಲ್ಲ.
ನೀನು?
'ಸೆಕ್ಸ್ ಅಂಡ್ ಫಿಲಾಸಫಿ' ಎಂಬ ಪರ್ಷಿಯನ್ ಸಿನಿಮಾದಲ್ಲಿ ಹೀರೋ ತನ್ನ ಗೆಳತಿಗೆ ಹೀಗೆ ಕೇಳಿ ಮೌನವಾಗುತ್ತಾನೆ. ಸುತ್ತಲೂ ಹಳದಿ ಎಲೆಗಳು ಉದುರಿ ಬಂಗಾರವಾದ ಕಾಡು. ಅಲ್ಲಲ್ಲಿ ಚಿಟ್ಟೆಗಳು ಹಾರುತ್ತಿವೆ. ಹೀರೋಕಡುನೀಲಿ ಬಣ್ಣದ ಬಟ್ಟೆ ತೊಟ್ಟಿದ್ದಾನೆ. ಅವಳುಕಡುಗೆಂಪು. ಅವನ ಪ್ರಶ್ನೆಗೆ ಅವಳ ಉತ್ತರವೇನು?
ಮೌನ.
ಬಹುಶಃ ಸಾವಿಗೆ ಮುನ್ನ ಸುನಂದಾ ಪುಷ್ಕರ್ ತರೂರ್ ಮನಸ್ಸಿನಲ್ಲೂ ಇಂತಹ ಪ್ರಶ್ನೆ ಎದ್ದಿರಬಹುದು. ನಾನೆಷ್ಟು ಪಾತರಗಿತ್ತಿ ದಿನಗಳನ್ನು ಬದುಕಿದೆ?
ಉತ್ತರ ಹೇಳದೆ ಆಕೆಯೂ ಮೌನವಾಗಿದ್ದಾಳೆ.
ಅವಳ ಕತೆಯಲ್ಲಿ ಮೂರು ಚಿಟ್ಟೆಗಳಿವೆ: ಶಶಿ ತರೂರ್, ಸುನಂದಾ ಪುಷ್ಕರ್ ಮತ್ತು ಮೆಹರ್ ತರಾರ್. ಒಂದೇ ಹೂವಿದೆ. ಅದು ಪ್ರೀತಿ. ಅದನ್ನು ಗೆಲ್ಲುವ ಆಟದಲ್ಲಿ ಮೂವರೂ ಸೋತಿದ್ದಾರೆ. ಒಬ್ಬರು ಸತ್ತಿದ್ದಾರೆ.

ಹೊಳೆಯುವ ಆಭರಣ ಧರಿಸಿ ಪಾರ್ಟಿಗಳಲ್ಲಿ ಮಿಂಚುತ್ತಿದ್ದ, ಟೈಟ್ ಟೀಶರ್ಟ್ ತೊಟ್ಟು ಐಪಿಎಲ್ ಸ್ಟೇಡಿಯಂನಲ್ಲಿ ಶಿಳ್ಳೆ ಹಾಕುತ್ತಿದ್ದ, ವಯಸ್ಸು ಐವತ್ತು ದಾಟಿದರೂ ಇಂಗ್ಲಿಷ್ ಪತ್ರಿಕೆಗಳ ಪೇಜ್ ತ್ರೀನಲ್ಲಿ ಬಾಲಿವುಡ್ ಹೀರೋಯಿನ್‌ಗಳ ಅಕ್ಕಪಕ್ಕದಲ್ಲೇ ಕಾಣಿಸಿಕೊಳ್ಳುತ್ತಿದ್ದ, ತರೂರ್ ಎಂಬ ಶೋಕಿಲಾಲ ಮಂತ್ರಿಯ ಹೆಂಡತಿಯಾಗಿ ಆತ ಹೋದಲ್ಲೆಲ್ಲ ಜೊತೆಗಿರುತ್ತಿದ್ದ ಬಣ್ಣದ ಚಿಟ್ಟೆಯಂತಹ ಸುನಂದಾ ಹೀಗೊಂದು ದಾರುಣ ಸಾವು ಸಾಯುತ್ತಾಳೆಂದರೆ ಅರಗಿಸಿಕೊಳ್ಳುವುದು ಕಷ್ಟ.
ಸೆಲೆಬ್ರಿಟಿ ಬದುಕೇ ಹಾಗೆ. ಅಲ್ಲಿ ಆಕರ್ಷಣೆಯೂ ಹೆಚ್ಚು ಅನಿರೀಕ್ಷಿತವೂ ಹೆಚ್ಚು. ಈ ಕ್ಷಣದವರೆಗೂ ಸರ್ವಾಂಗ ಸುಂದರವಾಗಿ ಕಾಣುತ್ತಿದ್ದುದು ಏಕ್‌ದಂ ಭೀಕರವಾಗಿ ಬದಲಾಗಿಬಿಡುತ್ತದೆ. ಜಿಯಾ ಖಾನ್ ಸತ್ತಳು ಎಂಬ ಸುದ್ದಿ ಬಂದಾಗ ಯಾರಾದರೂ ಅದನ್ನು ನಿರೀಕ್ಷೆ  ಮಾಡಿದ್ದರಾ? ಆಕೆ ಕಷ್ಟದಲ್ಲಿದ್ದಾಳೆಎಂಬುದಾದರೂ ನಮಗೆ ಗೊತ್ತಿತ್ತಾ? ಎಲ್ಲರ ಕಣ್ಣಲ್ಲಿ ಅವಳೊಬ್ಬಳು ಸೆಕ್ಸಿ ನಟಿ. ಧುತ್ತನೆ ಒಂದಿನ ಶಾಕ್ ನೀಡಿಬಿಟ್ಟಳು. ಒಳಗಿನ ಹುಣ್ಣು ಬಹಳ ದಿನ ಮುಚ್ಚಿಟ್ಟುಕೊಳ್ಳುವುದು ಕಷ್ಟ. ಕೆಲವರು ತಡೆದುಕೊಳ್ಳಲಾಗದೆಬಹಿರಂಗವಾಗಿ ಕೆರೆದುಕೊಳ್ಳುತ್ತಾರೆ, ಇನ್ನು ಕೆಲವರು ಮುಚ್ಚಿಟ್ಟುಕೊಂಡೇಮರೆಯಾಗುತ್ತಾರೆ.
ವಿಚಿತ್ರವೆಂದರೆ ಸುನಂದಾ ಇವೆರಡನ್ನೂ ಮಾಡಿದಳು. ಗಂಡನ ಪ್ರಣಯ ಪ್ರಸಂಗದ ಕೊಳೆ ಬಟ್ಟೆಯನ್ನು ಟ್ವಿಟ್ಟರ್ ಸರೋವರದಲ್ಲಿ ಉಜ್ಜಿ ಉಜ್ಜಿ ತೊಳೆದಳು. ನಂತರ ಅದನ್ನು ಒಣಗಿಸಲೂ ಪುರುಸೊತ್ತಿಲ್ಲದಂತೆ ಹೋಗಿಬಿಟ್ಟಳು.

ಮೊದಲು ಜೋಕ್, ಆಮೇಲೆ ಸೀರಿಯಸ್
ಸಾವಿನ ಹಿಂದಿನ ದಿನದವರೆಗೂ ಸುನಂದಾ ಬದುಕಿನ ಕತೆ ಮಾಧ್ಯಮಗಳಲ್ಲಿ ಒಂಥರಾ ಜೋಕ್ ಆಗಿತ್ತು. ಆಕೆಯ ಗಂಡನಿಗೊಬ್ಬಳು ಪಾಕಿಸ್ತಾನದ ಪ್ರೇಯಸಿಯಿದ್ದಾಳಂತೆ. ಅವಳಿಗೆ ಇವಳು ಹಿಗ್ಗಾಮುಗ್ಗಾಬೈದಳಂತೆ. ಅದಕ್ಕವಳು ಇವಳ ಮೇಲೆ ಮಾನನಷ್ಟ ಕೇಸ್ ಹಾಕುತ್ತೇನೆ ಅಂದಳಂತೆ. ಅವಳ ಜೊತೆ ತನ್ನ ಗಂಡನಿಗಿರುವ ಅಫೇರ್ ಬಹಿರಂಗಪಡಿಸಲು ಇವಳು ಕೇಂದ್ರ ಮಂತ್ರಿಯಾಗಿರುವ ಪವರ್‌ಫುಲ್ ಪತಿ ಶಶಿ ತರೂರ್‌ರ ಟ್ವಿಟ್ಟರ್ ಅಕೌಂಟನ್ನೇ ಹ್ಯಾಕ್ ಮಾಡಿದಳಂತೆ. ಇದೆಲ್ಲ ಶಶಿಗೆ ಗೊತ್ತಾಗಿ ದೊಡ್ಡ ಪ್ರಾಬ್ಲಂ ಆಯಿತಂತೆ. ಇವೆಲ್ಲದರ ನಡುವೆ ಮನೆಯಲ್ಲಿ ತಿಗಣೆ ಕಾಟ ಹೆಚ್ಚಾಗಿ ಅದನ್ನು ಕೊಲ್ಲಲು ಔಷಧಿ ಹಾಕಿದ್ದರಿಂದ ಇಬ್ಬರೂ ಸ್ಟಾರ್ ಹೋಟೆಲ್ಲಿಗೆ ಹೋಗಿ ಉಳಿದುಕೊಂಡರಂತೆ...

ಕೇಂದ್ರ ಸರ್ಕಾರದ ಮಂತ್ರಿಯೊಬ್ಬರ ಮನೆಯಲ್ಲಿ ಅಕ್ರಮ ಸಂಬಂಧದ ಸುದ್ದಿ ಸಿಕ್ಕರೆ ಮಾಧ್ಯಮಗಳು ಬಿಟ್ಟಾವೆಯೇ? ರಸ್ತೆಗೆ ಟಾರು ಹಾಕಲು ಬಂದವರೊಳಗೆ ಲವ್ವಾಗಿ ಏನಾದರೂ ಎಡವಟ್ಟಾದರೂ ಇಡೀ ದಿನ ಸ್ಟುಡಿಯೋದಲ್ಲಿ ಕೂರಿಸಿಕೊಂಡು ಅದೊಂದು ರಾಷ್ಟ್ರೀಯ ಹಿತಾಸಕ್ತಿಯ ಸುದ್ದಿಯೆಂಬಂತೆ ಚರ್ಚೆ ಮಾಡುವ ಟೀವಿ ಚಾನಲ್ಲುಗಳು, ಗಂಡ-ಹೆಂಡತಿ ಇಬ್ಬರೂಸೆಲೆಬ್ರಿಟಿಗಳಾಗಿರುವಾಗ ಅವರ ಮಧ್ಯೆ ಇನ್ನೊಂದು ಹೆಣ್ಣಿನ ಪ್ರವೇಶದ ಸುದ್ದಿ ಸಿಕ್ಕರೆ ಸುಮ್ಮನಿರುವ ಪ್ರಶ್ನೆಯೇ ಇಲ್ಲ. ಶಶಿ-ಸುನಂದಾ ಸುದ್ದಿ ಎರಡು ದಿನ ಮಾಧ್ಯಮಗಳಲ್ಲಿ ವರ್ಣರಂಜಿತವಾಗಿ ಬಿತ್ತರವಾಯಿತು. ಮೂರನೇ ದಿನ ಬಂದಿದ್ದು ಭಯಂಕರ ಸೀರಿಯಸ್ ಸುದ್ದಿ: ಹೋಟೆಲ್ ಕೋಣೆಯಲ್ಲಿ ಸುನಂದಾ ಪುಷ್ಕರ್‌ಅನುಮಾನಾಸ್ಪದ ಸಾವು.
ಈ ಎರಡು ಮತ್ತು ಮೂರನೇ ದಿನದ ನಡುವೆ ಮಾಧ್ಯಮಗಳು ಆಡಿದ ಆಟ ಆಕೆಯ ಜೀವಕ್ಕೆ ಮುಳುವಾಯಿತಾ? ಸತ್ಯ ಯಾವತ್ತೂ ತಿಳಿಯುವುದಿಲ್ಲ. ಆಕೆ ಹೋಟೆಲ್ ರೂಮಿನಲ್ಲಿದ್ದುಕೊಂಡು ರೂಮ್ ಸರ್ವೀಸ್‌ನವರಿಗೆ ಏನೇನು ಆರ್ಡರ್ ಮಾಡಿದ್ದಳು ಎಂಬುದರಿಂದ ಹಿಡಿದು ಮೊಬೈಲ್ ಫೋನಿನಿಂದ ಏನೇನು ಮೆಸೇಜು ಕಳಿಸಿದ್ದಳು ಎಂಬಲ್ಲಿಯವರೆಗೆ ಮಾಧ್ಯಮಗಳು ಸಂಶೋಧನೆ ನಡೆಸಿ ಪ್ರಕಟಿಸಿವೆ. ಸತ್ತವರಿಗೆ ಗೌರವ ತೋರಿಸಬೇಕು ಎಂದು ಬಾಯಲ್ಲಿ ಹೇಳುತ್ತಲೇ ಎಲ್ಲರೂ ಆಕೆಯ ಸುದ್ದಿಯನ್ನು ಚಪ್ಪರಿಸಿದ್ದಾರೆ. ತರೂರ್ ಒಬ್ಬ ರಾಜಕಾರಣಿ ಮತ್ತು ಅವರ ಹೆಂಡತಿ ಸುನಂದಾ ಒಬ್ಬ ಸೆಲೆಬ್ರಿಟಿ ಎಂಬ ಕಾರಣಕ್ಕೆ ಅವರ ಖಾಸಗಿ ವಿಷಯ ಮಾಧ್ಯಮಗಳಲ್ಲಿ ಆ ಪರಿ ಸುದ್ದಿಯಾಗಬೇಕಿರಲಿಲ್ಲ. ಸೆಲೆಬ್ರಿಟಿಗಳ ವಿಷಯದಲ್ಲಿ ನಾವು ನೈತಿಕತೆ ಮರೆತು ವರ್ತಿಸುತ್ತೇವೆ ಎಂಬುದಕ್ಕೆ ಸುನಂದಾಪ್ರಕರಣ ಒಳ್ಳೆಯ ಉದಾಹರಣೆ.

ಸೆಲೆಬ್ರಿಟಿಗಳೂ ಮನುಷ್ಯರೇ ಕಣ್ರೀ
ಸುನಂದಾ ಸಾವು ನಮಗೆಲ್ಲ ಗೊತ್ತಿದ್ದ ಆದರೆ ಯಾರೂ ಬಹಿರಂಗವಾಗಿ ಹೇಳದ ಒಂದು ವಿಷಯವನ್ನು ಕನ್‌ಫರ್ಮ್ ಮಾಡಿತು. ಅದು: ಆಕೆ ಮಾನಸಿಕವಾಗಿಯೂ ದೈಹಿಕವಾಗಿಯೂ ಬಹಳ ನೋವಿನಲ್ಲಿದ್ದಳು. ಐದಾರು ತಿಂಗಳಿನಿಂದ ಆಕೆಗೆ ಗಂಡನ ಅಫೇರ್ ಬೆಂಬಿಡದೆ ಕಾಡುತ್ತಿತ್ತು. ಜೊತೆಗೆ ದೇಹವನ್ನು ಕ್ಷಯರೋಗ ಹಿಂಡುತ್ತಿತ್ತು. ಅದಕ್ಕವಳು ತಿರುವನಂತಪುರಂ ಆಸ್ಪತ್ರೆಗೆ ಅಡ್ಮಿಟ್ ಆಗಿ ಚಿಕಿತ್ಸೆ ಪಡೆದಿದ್ದಳು. ಸ್ವಲ್ಪ ಎಚ್ಚರ ತಪ್ಪಿದರೂ ಅದು ಕರುಳಿನ ಕ್ಯಾನ್ಸರ್‌ಗೆ ತಿರುಗಬಹುದು ಎಂಬ ಆತಂಕ ಅವಳನ್ನು ಕಂಗೆಡಿಸಿತ್ತು. ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿಹೋದ ವ್ಯಕ್ತಿಯೊಬ್ಬರಿಗೆ ಸಾವಿನಲ್ಲಿ ಆಸಕ್ತಿ ಹುಟ್ಟಲು ಹೆಚ್ಚು ಸಮಯ ಬೇಡ.

ಎಲ್ಲರೆದುರು ಕಾಣುವ ದಿಟ್ಟ ಮುಖದ ಹಿಂದೆಯೂ ರಕ್ತ-ಮಾಂಸದ ಸಾಮಾನ್ಯ ಮನುಷ್ಯ ಜೀವವೊಂದಿರುತ್ತದೆ ಎಂಬುದನ್ನು ಸುನಂದಾ ಸಾವು ಇನ್ನೊಮ್ಮೆ ಹೇಳಿದೆ. ಪಬ್ಲಿಕ್ ಫಿಗರ್‌ಗಳನ್ನು ಅತಿಲೋಕಮಾನವರು ಎಂಬಂತೆ ನೋಡುವ ಅಥವಾ ಅವರ ಕಷ್ಟಗಳು ನಿಜವಾಗಿಯೂ ಕಷ್ಟಗಳಲ್ಲ ಎಂದು ಭಾವಿಸಿ ಮನರಂಜನೆಯ ರೂಪದಲ್ಲಿ ನೋಡುವ ನಮ್ಮ ಮನಸ್ಥಿತಿಯನ್ನೂ ಅದು ಪ್ರಶ್ನಿಸುವಂತಿದೆ.

ಇಷ್ಟಕ್ಕೂ ಸುನಂದಾ ಯಾರು? ಆಹೆಸರನ್ನು ಜನರು ಕೇಳಿದ್ದೇ ಶಶಿ ತರೂರ್ ಆಕೆಯ ಬೆನ್ನು ಬಿದ್ದಿದ್ದಾರೆಂಬ ಸುದ್ದಿ ನಾಲ್ಕು ವರ್ಷಗಳ ಹಿಂದೆ ಬಂದಾಗ. ನಂತರ ಆಕೆಯ ಜೊತೆ ಸೇರಿ ತರೂರ್ ಐಪಿಎಲ್ ಟೀಮ್ ಖರೀದಿಸಿದರು. ಆಮೇಲೆ ಮದುವೆಯಾದರು. ಆಗ ಅದು ಅವರಿಗೂ ಮೂರನೇ ಮದುವೆ, ಆಕೆಗೂ ಮೂರನೇ ಮದುವೆ. ನಂತರ ಸುನಂದಾ ಸೆಲೆಬ್ರಿಟಿಯಾದಳು. ಮತ್ತೊಮ್ಮೆ ಆಕೆ ದೊಡ್ಡ ಸುದ್ದಿ ಮಾಡಿದ್ದು 'ಕೇಂದ್ರ ಮಂತ್ರಿಯ 50 ಕೋಟಿ ರೂ. ಗರ್ಲ್‌ಫ್ರೆಂಡ್‌' ಎಂದು ನರೇಂದ್ರ ಮೋದಿಯಿಂದ ಹೀಯಾಳಿಸಿಕೊಂಡಾಗ. ಐಪಿಎಲ್ ಟೀಮ್ ಖರೀದಿ ದೊಡ್ಡ ಹಗರಣವಾಗಿ, ಅದರಿಂದ ತರೂರ್‌ರ ಮಂತ್ರಿಗಿರಿ ಹೋಗಿ, ನಂತರ ಆ ತಂಡವನ್ನೇ ಬಿಸಿಸಿಐ ರದ್ದುಪಡಿಸಿದಾಗ ಸುನಂದಾ ಕುಗ್ಗಿಹೋಗಿದ್ದಳು. ಆದರೆ, ಇದೆಲ್ಲವನ್ನೂ ಮೆಟ್ಟಿ ನಿಂತು ಬೆಳೆಯುತ್ತೇನೆ ನೋಡಿ ಎಂದು ಸವಾಲು ಹಾಕಿದ್ದಳು. ನಿಜಕ್ಕೂ ಬೆಳೆದಳಾ? ಬದುಕು ಬಹಳ ಚೂಸಿ. ಯಾರನ್ನು ಬೆಳೆಸಬೇಕು, ಯಾರನ್ನು ಅಳಿಸಬೇಕು ಎಂದು ಅದೇ ನಿರ್ಧಾರ ಮಾಡುತ್ತದೆ.

ಆಕೆ ಸತ್ತಿದ್ದಾ? ಮಾಧ್ಯಮಗಳು ಕೊಂದಿದ್ದಾ?
ಸುನಂದಾ ಪುಷ್ಕರ್ ಲೈಮ್‌ಲೈಟಿಗೆ ಬಂದ ಈ ನಾಲ್ಕೈದು ವರ್ಷಗಳಿಂದಲೂ ಆಕೆ ಮಾಧ್ಯಮಗಳ ಕಣ್ಮಣಿ. ಟೀವಿ ಚಾನಲ್ಲು, ಪೇಜ್ ತ್ರೀಹಾಗೂ ಟ್ವಿಟ್ಟರ್‌ನಲ್ಲಿ ಆಕೆ ಸದಾ ಸುದ್ದಿಯಲ್ಲಿದ್ದವಳು. ಗಂಡ ಶಶಿ ತರೂರ್ ಕೂಡ ಡಿಟ್ಟೋ. ಇನ್ನು, ಇವರಿಬ್ಬರ ಸಂಸಾರದಲ್ಲಿ ಪ್ರವೇಶಿಸಿದ ಪಾಕಿಸ್ತಾನದ ಪತ್ರಕರ್ತೆ ಮೆಹರ್ ತರಾರ್ ಕೂಡ ಅಪ್ರತಿಮ ಸುಂದರಿ ಮತ್ತು ಇವರಿಬ್ಬರಂತೆಯೇ ಸೆಲೆಬ್ರಿಟಿ. ಆಕೆ ಸ್ವತಃ ಮಾಧ್ಯಮದಲ್ಲೇ ಇರುವವಳು ಕೂಡ.
ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಹಾಗೂ ಫೇಸ್‌ಬುಕ್‌ಗಳು ವೈಯಕ್ತಿಕ ಸಂಬಂಧಗಳಲ್ಲಿ ಬಿರುಗಾಳಿ ಎಬ್ಬಿಸುತ್ತವೆ ಎಂಬುದಕ್ಕೆ ಈಗಾಗಲೇ ಸಾಕಷ್ಟು ಪುರಾವೆಗಳು ಸಿಕ್ಕಿವೆ. ಅವುಗಳನ್ನು ಎಷ್ಟಕ್ಕೆ ಬಳಸಿಕೊಳ್ಳಬೇಕೋ ಅಷ್ಟಕ್ಕೆ ಮಾತ್ರ ಬಳಸಿಕೊಂಡುಸುಮ್ಮನಾಗದೆ ಅತಿಯಾಗಿ ಬದುಕಿನೊಳಗೆ ಬಿಟ್ಟುಕೊಂಡರೆ ಏನೇನು ಅವಾಂತರಗಳಾಗುತ್ತವೆ ಎಂಬುದು ಇತ್ತೀಚೆಗೆ ಸಾಕಷ್ಟು ಚರ್ಚೆಯಾಗಿದೆ. ಅದರಿಂದ ಸುನಂದಾ, ತರೂರ್ ಹಾಗೂ ಮೆಹೆರ್ ಪಾಠ ಕಲಿಯಲಿಲ್ಲ ಎಂಬುದು ನಿಜಕ್ಕೂ ಅವರ ಬದುಕಿನ ದುರಂತ.

ತರೂರ್ ಹಾಗೂ ಮೆಹೆರ್ ನಡುವೆ ಸಂಬಂಧ ಶುರುವಾಗಿದ್ದು ಕೂಡ ಟ್ವಿಟ್ಟರ್ ಹಾಗೂ ಪೇಜ್ ತ್ರೀ ಪಾರ್ಟಿಗಳ ಮೂಲಕ. ನಂತರ ಅವರಿಬ್ಬರ ನಡುವೆ ಟ್ವಿಟ್ಟರ್‌ನಲ್ಲಿ ನಿರಂತರವಾಗಿ ಮಾಹಿತಿ ವಿನಿಮಯವಾಗುತ್ತಿತ್ತು. ಅದು ಸುನಂದಾಗೆ ತಿಳಿದು ಆಕೆ ಶಶಿಯ ಟ್ವಿಟ್ಟರ್ ಅಕೌಂಟ್ ಹ್ಯಾಕ್‌ಮಾಡಿದಳು. ನಾಲ್ಕು ಗೋಡೆಯ ನಡುವೆ ಇತ್ಯರ್ಥ ಮಾಡಿಕೊಳ್ಳಬೇಕಾದ ಸಂಸಾರದ ವಿಷಯವನ್ನು ಮೊದಲಿಗೆ ಟ್ವಿಟ್ಟರ್‌ನಲ್ಲಿ ಬಟಾಬಯಲು ಮಾಡಿದ್ದೇ ಆಕೆ. ಜಗತ್ತಿನ ಅಷ್ಟೂ ಸಮಸ್ತ ಟ್ವಿಟ್ಟರ್ ಬಳಕೆದಾರರಿಗೆ ತಿಳಿಯುವಂತೆ ಆಕೆ ಮೆಹೆರ್ ಜೊತೆಗೆ ಕಿತ್ತಾಡಿದಳು. ನಂತರ ಅದನ್ನು ಅರಗಿಸಿಕೊಳ್ಳಲಾರದೆ ಹೋದಳು. ಟ್ವಿಟ್ಟರ್‌ನಲ್ಲೇ ಮೆಹೆರ್ ನಡೆಸಿದ ಪ್ರತಿದಾಳಿಯನ್ನು ತಡೆದುಕೊಳ್ಳುವ ಮಾನಸಿಕ ಹಾಗೂ ದೈಹಿಕ ಧಾಡಸಿತನ ಸುನಂದಾಗಿರಲಿಲ್ಲ. ಅದು ಅವಳನ್ನು ಜರ್ಝರಿತವಾಗಿಸಿತು.
ಬಹುಶಃ ಟ್ವಿಟ್ಟರ್ ಎಂಬ ಮಾಧ್ಯಮ ಇಲ್ಲದೆ ಹೋಗಿದ್ದರೆ ಅಥವಾ ಟ್ವಿಟ್ಟರ್‌ನಲ್ಲಿ ಶಶಿ, ಸುನಂದಾ ಹಾಗೂ ಮೆಹೆರ್ ಈ ಮೂವರಲ್ಲಿ ಒಬ್ಬರು ಇಲ್ಲದೆ ಹೋಗಿದ್ದರೂ ಈ ಪ್ರಕರಣ ಇಷ್ಟು ದುರಂತಮಯವಾಗುತ್ತಿರಲಿಲ್ಲ.

ಟ್ವಿಟ್ಟರ್‌ನಲ್ಲಿ ಇವರೇ ಎರಚಿಕೊಂಡಕೆಸರನ್ನು ಟೀವಿ ಚಾನಲ್ಲುಗಳು ಇನ್ನಷ್ಟು ಬಣ್ಣ ಸೇರಿಸಿ ಮುಖ್ಯವಾಹಿನಿಗೆ ತಂದುಚೆಲ್ಲಿದವು, ಎಂಬಲ್ಲಿಗೆ ಅವರ ಸಂಸಾರದ ವಿಷಯ ಎಲ್ಲರೂ ಆಡಿಕೊಂಡು ನಗುವ ಸಾರ್ವಜನಿಕ ಸರಕಾಯಿತು. ಇದನ್ನು ಜೀರ್ಣ ಮಾಡಿಕೊಳ್ಳುವುದು ಯಾರಿಗಾದರೂ ಕಷ್ಟವೇ.

ಮೆಹೆರ್ ಜೊತೆ ತರೂರ್‌ಗೆ ನಿಜಕ್ಕೂ ಅಫೇರ್ ಇತ್ತೇ ಎಂಬುದು ಕೂಡ ಅವರಿಬ್ಬರನ್ನು ಬಿಟ್ಟರೆ ಯಾರಿಗೂ ಗೊತ್ತಿಲ್ಲ ಮತ್ತು ಅದು ದೃಢಪಟ್ಟಿಲ್ಲ ಕೂಡ. ಅವರು ಟ್ವಿಟ್ಟರ್ ಹಾಗೂ ಫೋನ್‌ನಲ್ಲಿ ನಡೆಸಿದ ಗೆಳೆಯ-ಗೆಳತಿಯರ ಸಹಜ ಸಂಭಾಷಣೆಗೆ ಸುನಂದಾ ಓವರ್ ರಿಯಾಕ್ಟ್ ಮಾಡಿರುವ ಸಾಧ್ಯತೆಯೂ ಇದೆ. ಮೇಲಾಗಿ, ಟ್ವಿಟ್ಟರ್‌ನಲ್ಲಿ ಇಂತಹದ್ದೊಂದು ಸುದ್ದಿ ಹೊರಬಿದ್ದರೆ ಅದಕ್ಕೆ ಲಕ್ಷಾಂತರ ಜನರು ಮನಸ್ಸಿಗೆ ತೋಚಿದಂತೆ ಕಮೆಂಟ್ ಮಾಡುತ್ತಾರೆ. ಅದನ್ನೆಲ್ಲ ಓದುತ್ತ ಕುಳಿತರೆ ಹೆಂಡತಿಯಾದವಳ ಮನಸ್ಸು ಕೆಡುವುದಕ್ಕೆ ಹೆಚ್ಚು ಹೊತ್ತು ಬೇಡ.
ಹೇಳಿ ಕೇಳಿ ಶಶಿ ತರೂರ್ ಜಗತ್ತು ಸುತ್ತುವ ರಾಜಕಾರಣಿ. ಮಂತ್ರಿಯಾಗುವುದಕ್ಕೂ ಮುನ್ನ ಹತ್ತಾರು ದೇಶದಲ್ಲಿದ್ದು ಬಂದವರು. ಅವರು ಎಲ್ಲಿಗೆ ಹೋಗುತ್ತಾರೋ, ಏನು ಮಾಡುತ್ತಾರೋ ಎಂದು ಹೆಂಡತಿಯ ಮನದೊಳಗೆ ಅನುಮಾನದ ಪಿಶಾಚಿ ಹೊಕ್ಕರೆ, ಅದಕ್ಕೆ ಸರಿಯಾಗಿ ಸೋಷಿಯಲ್ ನೆಟ್‌ವರ್ಕ್ ತಾಣಗಳು ಹತ್ತಾರು ಕತೆ ಕಟ್ಟಿದರೆ ಯಾರು ತಾನೇ ಕಾಪಾಡಲು ಸಾಧ್ಯ.

ಅತಿಯಾದ ಪೊಸೆಸಿವ್‌ನೆಸ್‌ಗೆ ಸುನಂದಾ ಬಲಿಯಾಗಿರುವ ಸಾಧ್ಯತೆಯೂ ಇಲ್ಲದಿಲ್ಲ. ಮೆಹೆರ್‌ಗೆ ಶಶಿ ತರೂರ್ ಕಳಿಸಿದ ಒಂದು ಇ-ಮೇಲ್‌ನಲ್ಲಿ ಇದರ ಸುಳಿವಿದೆ. 'ನನ್ನ ಹೆಂಡತಿಯನ್ನು ನಾನೆಷ್ಟು ಪ್ರೀತಿಸಿದರೂ ಅವಳಿಗದು ಅರ್ಥವಾಗುತ್ತಿಲ್ಲ. ಸುಮ್ಮನೆ ನಮ್ಮಿಬ್ಬರ ಬಗ್ಗೆ ಅನುಮಾನ ಪಡುತ್ತಾಳೆ. ನಾವಿನ್ನು ಟ್ವಿಟ್ಟರ್, ಇ-ಮೇಲ್, ಫೋನಿನಿಂದ ದೂರವಿರೋಣ' ಎಂದು ತರೂರ್ ಬರೆದಿದ್ದರು.

ಐವತ್ತು ದಾಟಿದ ಇಬ್ಬರು ಪ್ರಬುದ್ಧರಿಗೇ ಸೋಷಿಯಲ್ ನೆಟ್‌ವರ್ಕ್ ತಾಣಗಳನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ ಎಂದಾದರೆ ಜಗತ್ತಿನಾದ್ಯಂತ ಅದನ್ನು ಬಳಸುವ ಕೋಟ್ಯಾಂತರ ಹದಿಹರೆಯದವರ ಕತೆಯೇನು? ಅವರ ಬದುಕಿನಲ್ಲಿ ಈ ಜಾಲತಾಣಗಳು ಎಷ್ಟೆಲ್ಲ ಅನಾಹುತ ಉಂಟುಮಾಡಬಹುದು.
ಫೇಸ್‌ಬುಕ್, ಟ್ವಿಟ್ಟರ್‌ಗಳ ಮೋಜಿನ ಜೊತೆ ಉಚಿತವಾಗಿ ಬರುವ ಅಪಾಯಗಳ ಬಗ್ಗೆ ನಾವಿನ್ನೂ ಎಚ್ಚೆತ್ತುಕೊಂಡಿಲ್ಲ.

ಕಾಶ್ಮೀರದ ಕೆಂಪು ಆ್ಯಪಲ್ಲು!
ಹಿಮಾಚ್ಛಾದಿತ ಕಾಶ್ಮೀರದ ಚಳಿ ಕಣಿವೆಯ ಹಳ್ಳಿಯಲ್ಲಿ ಹುಟ್ಟಿ ಮಂತ್ರಿಯ ಹೆಂಡತಿಯಾಗುವವರೆಗೆ ಸುನಂದಾ ಸವೆಸಿದ ಹಾದಿ ತುಂಬಾ ಉದ್ದವಿದೆ. ನೋಡಲು ಎಷ್ಟು ಚೆಲುವೆಯೋ ಅಷ್ಟೇ ದಿಟ್ಟಹೆಣ್ಣುಮಗಳು ಆಕೆ. ಆದರೆ, ನೆಮ್ಮದಿಯ ಸಾಂಸಾರಿಕ ಬದುಕು ಮೂರು ಮದುವೆಯಲ್ಲೂ ಆಕೆಗೆ ಗಿಟ್ಟಲಿಲ್ಲ.

ಚಿಕ್ಕವಳಿದ್ದಾಗಲೇ ಕಾಶ್ಮೀರಿ ಪಂಡಿತರ ಮಡಿವಂತಿಕೆಗಳಿಂದ ಹೊರಬಂದ ಸುನಂದಾ, ತನ್ನ ಹೆಸರಿನ ಮುಂದಿದ್ದ 'ದಾಸ್‌' ಎಂಬ ಸರ್‌ನೇಮನ್ನು ಪುಷ್ಕರ್ ಎಂದು ಬದಲಾಯಿಸಿಕೊಂಡಳು. 'ಪೋಷ್ಕರ್‌' ಎಂಬುದು ಅವಳ ಅಪ್ಪನ ಹೆಸರು. 'ಪುಷ್ಕರ್‌' ಎಂದು ಕರೆದರೆ ಚೆನ್ನಾಗಿರುತ್ತದೆ ಎಂದು ಅದನ್ನೇ ಬದಲಾಯಿಸಿಕೊಂಡಿದ್ದಳು. ಮನಸ್ಸಿಗೆ ತೋಚಿದ್ದನ್ನು ಧೈರ್ಯವಾಗಿ ಹೇಳುವ, ತನಗೇನನ್ನಿಸುತ್ತದೆಯೋ ಅದನ್ನೇ ಮಾಡುವ ದಿಟ್ಟೆ ಎಂದು ಆಕೆಯ ಸ್ನೇಹಿತೆಯರು ನೆನಪಿಸಿಕೊಳ್ಳುತ್ತಾರೆ.

'ಸೋಪೋರ್‌' ಜಿಲ್ಲೆಯ ಸೇಬು ಬೆಳೆಯುವ ಹಳ್ಳಿಯಾದ 'ಬೋಮೈ' ಎಂಬಲ್ಲಿ ಹುಟ್ಟಿದವಳು ಸುನಂದಾ. ಆಕೆಯ ಪೂರ್ವಜರು ಜಮ್ಮುವಿನಲ್ಲಿ ದಂಗೆಯಾದಾಗ ಅಲ್ಲಿದ್ದ ದೊಡ್ಡ ಮನೆ, ಬೃಹತ್ ತೋಟಗಳನ್ನು ಬಿಟ್ಟು ಕಾಶ್ಮೀರದ ಹಳ್ಳಿಗೆ ಹೋಗಿ ನೆಲೆಸಿದವರು. ಅವಳ ತಂದೆ ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಕರ್ನಲ್. ಆಕೆಯ ಒಬ್ಬ ಅಣ್ಣ ಈಗಲೂ ಸೇನೆಯಲ್ಲಿದ್ದಾನೆ. ಉತ್ತರ ಕಾಶ್ಮೀರದ ಸೇಬು ಕಣಿವೆಯ 'ಬೋಮೈ' ಹಳ್ಳಿಯಲ್ಲಿ ಸುನಂದಾಳ ಅಪ್ಪನ 'ದಾಸ್‌' ಮನೆತನ ಇವತ್ತೂ ಶ್ರೀಮಂತಿಕೆಗೆ ಹೆಸರುವಾಸಿ.
ಸುನಂದಾ ಅಲ್ಲೇ ಡಿಗ್ರಿ ಓದಿ ಕೆಲ ಕಾಲ ಸ್ಟಾರ್ ಹೋಟೆಲ್ಲೊಂದರಲ್ಲಿ ರಿಸೆಪ್ಷನಿಸ್ಟ್ ಆಗಿದ್ದಳು. ಅದಕ್ಕೂ ಮುನ್ನ ಕಾಲೇಜಿನಲ್ಲಿದ್ದಾಗಲೇ ಅವಳಿಗೆ ಶ್ರೀನಗರದ ಕಾಶ್ಮೀರಿ ಪಂಡಿತ ಮನೆತನದ ಸಂಜಯ್ ರೈನಾ ಎಂಬ ಸಂಗೀತಗಾರನ ಜೊತೆ ಪ್ರೀತಿ ಬೆಳೆದಿತ್ತು. ನಂತರ ಅವನನ್ನೇ ಮದುವೆಯಾದಳು. ಆತ ಪಾಪ್ ಸಿಂಗರ್ ಆಗಿ ಪ್ರಸಿದ್ಧಿ ಪಡೆದ. ತನ್ನದೇ ಎಂಟರ್‌ಟೈನ್‌ಮೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಆರಂಭಿಸಿದ. ಆ ಮದುವೆ, ವಿಚ್ಛೇದನದಲ್ಲಿ ಅಂತ್ಯವಾಯಿತು.

ನಂತರ ಸುನಂದಾ ಮದುವೆಯಾಗಿದ್ದು ಕೇರಳದ ಉದ್ಯಮಿ ಸುಜೀತ್ ಮೆನನ್ ಎಂಬುವರನ್ನು. ಆತ ಅಗ್ನಿಶಾಮಕ ಉಪಕರಣಗಳ ಡೀಲರ್ ಆಗಿದ್ದರು. ಅವರಿಬ್ಬರಿಗೆ ಒಬ್ಬ ಮಗನಿದ್ದಾನೆ.

1990ರ ದಶಕದಲ್ಲಿ ಮೂವರೂ ದುಬೈಗೆ ಶಿಫ್ಟ್ ಆದರು. ಅಲ್ಲಿ ಸುನಂದಾ ಒಂದು ಜಾಹೀರಾತು ಏಜೆನ್ಸಿಯಲ್ಲಿ ಕೆಲಸಕ್ಕೆ ಸೇರಿದಳು. ಕ್ರಮೇಣ ಅಲ್ಲಿನ ಸೆಲೆಬ್ರಿಟಿಗಳ ಜೊತೆ ನಂಟು ಬೆಳೆಸಿಕೊಂಡು ಪ್ರಸಿದ್ಧಿಗೆ ಬಂದಳು. ಕೊನೆಗೆ ತನ್ನದೇ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಆರಂಭಿಸಿದಳು. ಏಳು ವರ್ಷದ ನಂತರ ಭಾರತಕ್ಕೆ ಬಂದಾಗ ಸುಜೀತ್ ರಸ್ತೆ ಅಪಘಾತದಲ್ಲಿ ತೀರಿಹೋದರು.

ಸುನಂದಾ ದುಬೈನಲ್ಲೇ ಉಳಿದು ಮಗನನ್ನು ಸಾಕಿದಳು. ಕೆಲ ಕಾಲ ಕೆನಡಾಕ್ಕೂ ಹೋಗಿ ಬಂದಳು. ನಂತರ ದುಬೈನಲ್ಲೇ ರಿಯಲ್ ಎಸ್ಟೇಟ್ ಕಂಪನಿ ಜೊತೆ ಪಾಲುದಾರಿಕೆ ಆರಂಭಿಸಿದಳು. ಆಕೆಗೆ ಶಶಿ ತರೂರ್ ಸಿಕ್ಕಿದ್ದು 2009ರಲ್ಲಿ, ದುಬೈನ ಪಾರ್ಟಿಯೊಂದರಲ್ಲಿ. ಇಬ್ಬರೂ ಒಬ್ಬಂಟಿ ಮಧ್ಯವಯಸ್ಕರು. ಪ್ರೇಮಾಂಕುರವಾಯಿತು. ಆಗ ತರೂರ್ ಕೇಂದ್ರ ಸರ್ಕಾರದಲ್ಲಿ ಮಂತ್ರಿ.

ಸುನಂದಾಳನ್ನು ಭಾರತಕ್ಕೆ ಕರೆದುಕೊಂಡು ಬಂದ ತರೂರ್, ಅವಳ ಜೊತೆ ಸೇರಿ ಐಪಿಎಲ್ ಕ್ರಿಕೆಟ್ ತಂಡ ಖರೀದಿಸಿದರು. ಅದರಲ್ಲಿ ಆಕೆಗೆ 50 ಕೋಟಿ ರೂ. ಉಚಿತ ಷೇರು ನೀಡಿದರು ಎಂದು ಸುದ್ದಿಯಾಯಿತು. ಅದು ದೊಡ್ಡ ವಿವಾದವಾಗಿಅವರ ಮಂತ್ರಿಗಿರಿ ಹೋಯಿತು. ಹೋದರೆ ಹೋಗಲಿ ಎಂದು ಕೇರಳಕ್ಕೆ ಕರೆದುಕೊಂಡು ಹೋಗಿ ಅದ್ಧೂರಿಯಾಗಿ ಮದುವೆಯಾದರು. ಕೊನೆಗೆ ಮತ್ತೆ ಮಂತ್ರಿಯಾದರು.
ಅಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು.ಅವರ ಬದುಕಿನಲ್ಲಿ ಪಾಕಿಸ್ತಾನದಸುಂದರಿಯ ಪ್ರವೇಶವಾಗಿದ್ದು ಮೂರು ವರ್ಷದ ನಂತರ. ಆಮೇಲೆ ನಡೆದಿದ್ದು ದುರಂತ ಕತೆ.

-ರೇಖಾ ಭಟ್

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!