ಕೋಲ್ಕತ್ತ: ಪ್ರಖ್ಯಾತ ಕವಿ-ಗೀತರಚನಕಾರ ಗುಲ್ಜಾರ್ ಮತ್ತು ಜನಪ್ರಿಯ ವ್ಯಂಗ್ಯಚಿತ್ರ ರಚನಕಾರ ನಾರಾಯಣ ದೇವನಾಥ್ ಅವರಿಗೆ ರವೀಂದ್ರ ಭಾರತಿ ವಿಶ್ವವಿದ್ಯಾಲಯ ಮೇ ೮ ರಂದು ನಡೆಯಲಿರುವ ತನ್ನ ೪೦ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ (ಡಾಕ್ಟರ್ ಆಫ್ ಲೆಟರ್ಸ್) ನೀಡಿ ಗೌರವಿಸಲಿದೆ ಎಂದು ಗುರುವಾರ ಘೋಷಿಸಿದೆ.
ಸಮಾಜ ವಿಜ್ಞಾನಿ ದೀಪಂಕರ್ ಗುಪ್ತಾ ಮುಖ್ಯ ಅತಿಯಾಗಿ ಭಾಗವಹಿಸಲಿದ್ದು ಪಶ್ಚಿಮ ಬಂಗಾಳದ ರಾಜ್ಯಪಾಲ ಹಾಗು ವಿಶ್ವವಿದ್ಯಾಲಯದ ಕುಲಪತಿ ಕೆ ಎನ್ ತ್ರಿಪಾಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ರಿಜಿಸ್ಟಾರ್ ದೇವದತ್ತ ರಾಯ್ ತಿಳಿಸಿದ್ದಾರೆ. ಈ ಕಾರ್ಯಕ್ರಮ ಕೋಲ್ಕತ್ತಾದ ಜೋರಸಂಕೋದ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ರಾಜ್ಯ ಅಕಾಡೆಮಿ ಪ್ರಶಸ್ತಿಗಳನ್ನು ಚೇತನ ಜಲನ್(ನೃತ್ಯ), ಶೋಲಿ ಮಿತ್ರ(ರಂಗಭೂಮಿ) ಮತ್ತು ಧನೇಶ್ವರ್ ರಾಯ್ (ಸಂಗೀತ) ಇವರಿಗೆ ನೀಡಲಾಗುವುದು.
ಈ ಘಟಿಕೋತ್ಸವದಲ್ಲಿ ಅಂಗವಾಗಿ ಮೇ ೬ರಂದು ರಾಷ್ಟ್ರಮಟ್ಟದ ಕವಿಘೋಷ್ಠಿಯನ್ನು ಆಯೋಜಿಸಲಾಗಿದ್ದು ವಿವಿಧ ರಾಜ್ಯಗಳ ಕವಿಗಳು ಭಾಗವಹಿಸಲಿದ್ದಾರೆ.
ರವೀಂದ್ರ ಭಾರತಿ ವಿಶ್ವವಿದ್ಯಾಲಯ ಮೇ ೮ ೧೯೬೪ರಲ್ಲಿ ರವೀಂದ್ರ ಭಾರತಿ ಕಾಯ್ದೆಯಡಿ, ರವೀಂದ್ರನಾಥ್ ಟ್ಯಾಗೋರ್ ಅವರ ಜನ್ಮ ದಿನದ ನೆನಪಿಗೆ ಅವರ ಮನೆಯ ಆವರಣದಲ್ಲೇ ಸಂಸ್ಥಾಪಿಸಲಾಗಿತ್ತು. ಸಾಂಸ್ಕೃತಿಕ ಕ್ಷೇತ್ರದ ಉನ್ನತ ಅಧ್ಯಯನ ಅದರಲ್ಲೂ ಸಂಗೀತ, ನ್ರತ್ಯ ಹಾಗು ರಂಗಭೂಮಿ ಕ್ಷೇತ್ರಗಳ ಅಧ್ಯಯನಕ್ಕಾಗಿ ಈ ವಿಶ್ವವಿದ್ಯಾಲಯದ ಸ್ಥಾಪನೆ ಮಾಡಲಾಗಿತ್ತು.