ಅರುಣಾ ಶಾನುಭಾಗ್ 
ವಿಶೇಷ

ಅರುಣಾ ಶಾನ್‌ಭಾಗ್ - 42 ವರ್ಷಗಳ ನೋವಿನ ಕಥೆ

ಅರುಣಾ ಶಾನುಭಾಗ್ - 42 ವರ್ಷಗಳ ಕಾಲ ಜೀವಚ್ಛವವಾಗಿ ಮಲಗಿದ್ದ ನೋವಿನ ಹೆಸರು. ಕಣ್ತುಂಬ ಕನಸುಗಳನ್ನೂ, ಮನ ತುಂಬ ಆಕಾಂಕ್ಷೆಗಳೂ...

ಅರುಣಾ ಶಾನುಭಾಗ್ - 42 ವರ್ಷಗಳ ಕಾಲ ಜೀವಚ್ಛವವಾಗಿ ಮಲಗಿದ್ದ ನೋವಿನ ಹೆಸರು. ಕಣ್ತುಂಬ ಕನಸುಗಳನ್ನೂ, ಮನ ತುಂಬ ಆಕಾಂಕ್ಷೆಗಳೂ ಹೊತ್ತಿದ್ದ ಜೀವಕ್ಕೆ 1973 ನವೆಂಬರ್ 27ರಂದು ವಿಧಿ ದೊಡ್ಡದೊಂದು ಆಘಾತವನ್ನೇ ನೀಡಿತ್ತು.  ಮದುವೆಯ ಮುನ್ನಾದಿನ ದಾದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅರುಣಾ ಮೇಲೆ ಆಸ್ಪತ್ರೆಯ ಅಂಗಳದಲ್ಲೇ ಅತ್ಯಾಚಾರ ನಡೆದಿತ್ತು. ಆ ಶಾಕ್‌ನಿಂದ ಆಕೆ ಎದ್ದೇಳಲೇ ಇಲ್ಲ. ಪರಿಣಾಮ ಕೋಮಾಕ್ಕೆ ಜಾರಿದ ಅರುಣಾ ಅಕ್ಷರಶಃ ಜೀವಚ್ಛವವಾಗಿ ಹಾಸಿಗೆಗೆ ಅಂಟಿಕೊಂಡಿದ್ದರು.

ಅತ್ಯಾಚಾರ ಅವರ ಮನಸ್ಸಿನ ಎಲ್ಲ ಬಣ್ಣಗಳನ್ನು ನುಂಗಿ ಹಾಕಿತ್ತು. ತುಂಟಾಟಿಕೆಯ ಬಾಲ್ಯ, ತನ್ನ ಸಹೋದ್ಯೋಗಿಯನ್ನು ಪ್ರೀತಿಸಿ ನಡೆದ ಯೌವನದ ದಿನಗಳು, ಮದುವೆಯ ಕನಸುಗಳು ಎಲ್ಲವೂ ಅವರ ನೆನಪಿನಿಂದ ಮಾಸಿಹೋಗಿತ್ತು. ಬಾಕಿ ಉಳಿದದ್ದು ಆ ದೇಹ ಮಾತ್ರ!

ಮುಂಬೈಯ ಕೆಇಎಂ ಆಸ್ಪತ್ರೆಯ ಕೊಠಡಿಯಲ್ಲಿ ಅರುಣಾ ಕಾರುಣ್ಯದ ಕೈಗಳಲ್ಲಿ ರಕ್ಷಣೆ ಪಡೆದುಕೊಂಡಿದ್ದ ದಿನಗಳವು.  ಮುಂಬೈಯ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯ ಅಂಗಳದಲ್ಲಿ ಅವರು ಪುಟಿದೇಳುವ ಚಿಲುಮೆಯಂತೆ ಓಡಾಡುತ್ತಿದ್ದ ದಿನಗಳವು. ಅರುಣಾ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಆದರೆ ವಾರ್ಡ್ ಕ್ಲೀನಿಂಗ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಸೋಹನ್ ಲಾಲ್ ಭಾರ್ತಾ ವಾಲ್ಮೀಕಿ, ಅರುಣಾ ಜೀವನವನ್ನೇ ಹೊಸಕಿ ಹಾಕಿದ. ವಾಲ್ಮೀಕಿಯಿಂದ ಅತ್ಯಾಚಾರಕ್ಕೊಳಗಾದ ಅರುಣಾ ಪ್ರಜ್ಞೆ ಕಳೆದುಕೊಂಡರು.
ನಾಯಿಯ ಸಂಕೋಲೆಯಿಂದ ಅರುಣಾಳ ಕೊರಳನ್ನು ಸುತ್ತಿ ಅತೀ ಮೃಗೀಯ ರೀತಿಯಲ್ಲಿ ವಾಲ್ಮೀಕಿ ಅತ್ಯಾಚಾರವೆಸಗಿದ್ದ.

ಆಘಾತಕ್ಕೊಳಗಾದ ಅರುಣಾಳನ್ನು ಮತ್ತೆ ಬದುಕಿಗೆ ಮರಳಿಸಲು ಯಾವುದೇ ವೈದ್ಯರಿಗೆ ಸಾಧ್ಯವಾಗಲಿಲ್ಲ. ಅರುಣಾ ಬದುಕಿಯೂ ಸತ್ತಂತೆ ಆಗಿಹೋದರು.. ಮುಂಬೈಯ ಆಸ್ಪತ್ರೆಯಲ್ಲಿ 32 ವರ್ಷಗಳ ಕಾಲ ಅರುಣಾಳನ್ನು ಮಗುವಿನಂತೆ ಆರೈಕೆ ಮಾಡಲಾಗಿತ್ತು. ಕೃಶ ಶರೀರಳಾದ ಅರುಣಾಳಲ್ಲಿ ಆಸ್ಪತ್ರೆಯ ವೈದ್ಯರೂ ದಾದಿಯರೂ ಕರುಣೆಯ ಬೆಳಕನ್ನು ಕಂಡಿದ್ದರು. ಮಾತು ಹೊರಡಿಸದೇ ಇರುವ ಆ ಜೀವ, ಅಲ್ಲೇನಾಗುತ್ತದೆ ಎಂಬ ಅರಿವೂ ಇಲ್ಲದೆ ಮಲಗಿತ್ತು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಳದೀಪುರ ಗ್ರಾಮದವರಾದ ಅರುಣಾ ಮುಂಬೈಗೆ ಹೋದಾಗ ಆಕೆಯ ವಯಸ್ಸು 18.  ಮನಸ್ಸಲ್ಲಿ ಹಲವಾರು ಕನಸುಗಳನ್ನು ಹೊತ್ತ ಆತ್ಮವಿಶ್ವಾಸದ ಮಾತುಗಳನ್ನಾಡುವ ಹುಡುಗಿ ಮುಂಬೈಯಲ್ಲಿ ನರ್ಸಿಂಗ್ ಕೋರ್ಸ್ ಮುಗಿಸಿ ಕೆಇಎಂ ಆಸ್ಪತ್ರೆಯಲ್ಲಿ ಜೂನಿಯರ್ ನರ್ಸ್ ಆಗಿ ಕೆಲಸಕ್ಕೆ ಸೇರಿದ್ದರು.  ಎಲ್ಲರಿಗೂ ಅಚ್ಚುಮೆಚ್ಚಾಗಿದ್ದ ದಾದಿ ಅರುಣಾ ಅದೇ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಸಂದೀಪ್ ಸರ್‌ದೇಸಾಯಿಯನ್ನು ಪ್ರೀತಿಸತೊಡಗಿದ್ದರು. ಪ್ರಣಯ ಸಾಫಲ್ಯವಾಗುವ ಹೊತ್ತು,  ಆದರೆ ವಿಧಿಯ ಬರಹ ಬೇರೆಯೇ ಆಗಿತ್ತು. ಮದುವೆಯ ಮುನ್ನಾ ದಿನ ಅರುಣಾ ಅತೀ ಕ್ರೂರವಾಗಿ ಅತ್ಯಾಚಾರಕ್ಕೊಳಪಟ್ಟರು.

ಆಸ್ಪತ್ರೆಯಲ್ಲಿ ದಿನಾ ತಡವಾಗಿಯೇ ಕೆಲಸಕ್ಕೆ ಹಾಜರಾಗುವ ವಾರ್ಡ್ ಕ್ಲೀನಿಂಗ್ ಬಾಯ್ ವಾಲ್ಮೀಕಿ.  ಕೆಲಸಕ್ಕೆ ತಡವಾಗಿ ಬರುತ್ತಿದ್ದುದಕ್ಕೆ ಅರುಣಾ ಹಲವಾರು ಬಾರಿ ವಾಲ್ಮೀಕಿಯನ್ನು ಬೈದಿದ್ದರು.. ಅದರ ಸಿಟ್ಟಿಗೆ ಆತ 1973 ನವೆಂಬರ್ 27ರಂದು ಅರುಣಾಳ ಮೇಲೆ ಅತ್ಯಾಚಾರವೆಸಗಿದ. ತನ್ನನ್ನು ಬೈಯುತ್ತಿದ್ದ ಅರುಣಾ ಮೇಲೆ ವಾಲ್ಮೀಕಿ ಸೇಡು ತೀರಿಸಿದ್ದು ಕೆಇಎಂ ಆಸ್ಪತ್ರೆಯ ಸರ್ಜರಿ ಲ್ಯಾಬ್ ನ ಬಳಿಯಿರುವ ದಾದಿಯರ ಡ್ಯೂಟಿ ರೂಂನಲ್ಲಿ.  ತನ್ನ ಕೆಲಸ ಮುಗಿಸಿ ಬಟ್ಟೆ ಬದಲಿಸಿ ನಾಳೆ ಮದುವೆಗೆ ಸಜ್ಜಾಗಲಿದ್ದ ಅರುಣಾ ಅಲ್ಲಿ ಮೃಗೀಯವಾಗಿ ಅತ್ಯಾಚಾರಕ್ಕೊಳಗಾಗಿದ್ದರು!

ಅರುಣಾಳನ್ನು ಪ್ರೀತಿಸಿ ಮದುವೆಯ ಕನಸು ಕಂಡಿದ್ದ ಡಾಕ್ಟರ್ ಸಂದೀಪ್ ಸರ್ದೇಸಾಯಿ ನಾಲ್ಕು ವರ್ಷಗಳ ಕಾಲ ಅರುಣಾಳ ಶುಶ್ರೂಷೆಯಲ್ಲಿ ತೊಡಗಿದ್ದರು. ಆಮೇಲೆ ಕುಟುಂಬದವರ ಒತ್ತಾಯಕ್ಕೆ ಮಣಿದು ಬೇರೆ ಮದುವೆಯಾದರು.

ಅರುಣಾ ಶಾನುಭಾಗ್‌ಳ ಈ ದುರಂತ ಕಥೆಯನ್ನು ಜಗತ್ತಿಗೆ ತೋರಿಸಿದ್ದು ಪಿಂಕಿ ವಿರಾನಿಯೆಂಬ ಪತ್ರಕರ್ತೆ. ಆವಾಗ ಟೈಮ್ಸ್ ಆಫ್ ಇಂಡಿಯಾದಲ್ಲಿ ಪತ್ರಕರ್ತೆಯಾಗಿದ್ದ ಪಿಂಕಿಗೆ ಅರುಣಾ ಬಗ್ಗೆ 'ಸ್ಟೋರಿ' ಮಾಡಲು ಸಂಪಾದಕರು ಆದೇಶಿಸಿದ್ದರು. ಪಿಂಕಿಯವರ ಲೇಖನ ಈ ಪ್ರಕರಣದ ತನಿಖೆಗೆ ಮತ್ತಷ್ಟು ಸಹಕಾರಿಯಾಯಿತು. ಪಿಂಕಿ ಅರುಣಾಳ ಜೀವನಕಥೆ ಬರೆದು ಅತ್ಯಾಚಾರದ ಭೀಕರತೆಯ ದರ್ಶನ ಮಾಡಿಸಿದರು.

 2009ರಲ್ಲಿ , ಅರುಣಾಳ ಶೋಚನೀಯ ಬದುಕನ್ನು ಹತ್ತಿರದಿಂದ ಕಂಡಿರುವ ಪಿಂಕಿ ವಿರಾನಿ ಅರುಣಾಗೆ ದಯಾಮರಣ ನೀಡಬೇಕೆಂದುಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಒತ್ತಾಯಪೂರ್ವಕ ಅರುಣಾಗೆ ಆಹಾರ ನೀಡುವುದನ್ನು ನಿಲ್ಲಿಸಬೇಕೆಂದು ಪಿಂಕಿ ಒತ್ತಾಯಿಸಿದ್ದರು. ಆದರೆ 2011ರಲ್ಲಿ ಸುಪ್ರೀಂ ಕೋರ್ಟ್ ಪಿಂಕಿ ಯವರ ಅರ್ಜಿಯನ್ನು ತಳ್ಳಿ ಹಾಕಿತ್ತು. 67ರ ಹರೆಯದ ಅರುಣಾ ಸಾವು-ಬದುಕಿನ ಮಧ್ಯೆ ನಿಸ್ತೇಜವಾಗಿ ಮಲಗಿದ್ದರು. ದಯಾಮರಣದ ಹೋರಾಟ ನಿಂತುಹೋಯಿತು. 42 ವರ್ಷಗಳ ಕಾಲ ಹಾಸಿಗೆಯಿಂದ ಮೇಲೇಳದ ಅರುಣಾ ಮೇ.18 ರಂದು ನ್ಯುಮೋನಿಯಾ ಬಾಧಿಸಿ ಇಹಲೋಕ ತ್ಯಜಿಸಿದರು. ಅತ್ಯಾಚಾರದ ಭೀಕರತೆಗೆ ಸಾಕ್ಷಿಯಾಗಿದ್ದ ಅರುಣಾ ಇನ್ನು ನೆನಪು ಮಾತ್ರ





Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT