ಅತ್ಯಾಚಾರ ವಿರುದ್ಧ ಪ್ರತಿಭಟನೆ (ಸಂಗ್ರಹ ಚಿತ್ರ) 
ವಿಶೇಷ

ಅತ್ಯಾಚಾರ ಪ್ರಕರಣ, ತೀರ್ಪು ಮತ್ತು ಮುಗಿಯದ ಪ್ರಶ್ನೆಗಳು...

ದೌರ್ಜನ್ಯಕ್ಕೊಳಗಾದ, ಅತ್ಯಾಚಾರಕ್ಕೊಳಗಾದ ಹೆಣ್ಣಿನ ಸ್ಥಿತಿಯೇನು? ಮನಸ್ಸಿಗೆ, ದೇಹಕ್ಕೆ ಆದ ಆ ನೋವು ಆಕೆಯ ಮನಸ್ಸಿನಿಂದ ಮರೆಯಾಗುತ್ತದೆಯೆ?

ಅತ್ಯಾಚಾರ ಎಂಬುದು ಸರ್ವೇ ಸಾಮಾನ್ಯ ಎಂಬಂತಾಗುತ್ತಿದೆ. ಒಂದೆಡೆ ಈ ಬಗ್ಗೆ ಚರ್ಚೆಗಳು, ಪ್ರತಿಭಟನೆಗಳು ನಡೆಯುತ್ತಿವೆ. ಅತ್ಯಾಚಾರಗಳನ್ನು ನಿಯಂತ್ರಿಸುವುದಕ್ಕಾಗಿ ವಿಧ ವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ ಅತ್ಯಾಚಾರಗಳು ನಡೆಯುತ್ತಲೇ ಇರುತ್ತವೆ.
ಕಳೆದ ವರ್ಷ ಭಾರತದಲ್ಲಿ ದಿನವೊಂದಕ್ಕೆ  100 ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು  ನ್ಯಾಷನಲ್ ಕ್ರೈಂ ಬ್ಯೂರೋ ವರದಿ ಹೇಳುತ್ತಿದೆ. ಅಂದರೆ ಸುಲಿಗೆ, ದರೋಡೆಯಂತೆಯೇ ಅತ್ಯಾಚಾರ ಕೂಡಾ ಒಂದು ಸಾಧಾರಣ ಅಪರಾಧವೆಂಬಂತೆ ನಡೆಯುತ್ತಿದೆ!
2014 ರಲ್ಲಿ 36, 735 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ ಎಂದರೆ ವರದಿಯಾಗದೇ ಇರುವ ಅತ್ಯಾಚಾರಗಳ ಸಂಖ್ಯೆ ಎಷ್ಟು?
ಅದೇ ವೇಳೆ ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳನ್ನು ಗಮನಿಸಿದರೆ,  ಅಪ್ಪ ಅಮ್ಮ ಬಳಿಯಲ್ಲಿ ಇಲ್ಲದೇ ಇದ್ದರೆ ಮಕ್ಕಳು ಸುರಕ್ಷಿತರಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತಿದೆ. ಒಂದು ವರುಷದಲ್ಲಿ 13, 833 ಮಕ್ಕಳು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ. ಈ ಕೃತ್ಯಗಳನ್ನು ಮಾಡಿದವರು ಮಕ್ಕಳ ಸಂಬಂಧಿಕರೇ ಆಗಿದ್ದಾರೆ. ಕಳೆದ ವರುಷದ ಅಂಕಿ ಅಂಶಗಳನ್ನು ನೋಡುವುದಾದರೆ ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಶೇ. 86 ಪ್ರಕರಣಗಳಲ್ಲಿ ಸಂಬಂಧಿಕರೇ ಮಕ್ಕಳ ಮೇಲೆ ಈ ರೀತಿ ಕೃತ್ಯಗಳನ್ನು ಮಾಡಿದ್ದಾರೆ. ಆದಾಗ್ಯೂ , ಲೈಂಗಿಕ ದೌರ್ಜನ್ಯಕ್ಕೊಳಗಾದವರಲ್ಲಿ  ಶೇ. 50 ರಷ್ಟು ಮಂದಿ 11 ಮತ್ತು 18ರ ನಡುವೆ ವಯಸ್ಸುಳ್ಳವರಾಗಿದ್ದಾರೆ. ಇವರಲ್ಲಿ ಶೇ. 91ರಷ್ಟು ಮಂದಿ ಸಂಬಂಧಿಕರಿಂದಲೇ ದೌರ್ಜನ್ಯಕ್ಕೊಳಪಟ್ಟವರಾಗಿದ್ದಾರೆ.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಬಾಲಕಿಯ ಮೇಲೆ ಅತ್ಯಾಚಾರ ಎಂಬ ಸುದ್ದಿಗಳನ್ನು ಪದೇ ಪದೇ ನೋಡುತ್ತಲೇ ಇದ್ದೇವೆ. ಅತ್ಯಾಚಾರವೆಸಗಿದವ ಒಂದಷ್ಟು ಕಾಲ ಕಂಬಿಯೆಣಿಸಿ ಆಮೇಲೆ ಶಿಕ್ಷೆ ಮುಗಿಸಿ ಹೊರಬರಬಹುದು. ಆದರೆ ದೌರ್ಜನ್ಯಕ್ಕೊಳಗಾದ, ಅತ್ಯಾಚಾರಕ್ಕೊಳಗಾದ ಹೆಣ್ಣಿನ ಸ್ಥಿತಿಯೇನು? ಮನಸ್ಸಿಗೆ, ದೇಹಕ್ಕೆ ಆದ ಆ ನೋವು ಆಕೆಯ ಮನಸ್ಸಿನಿಂದ ಮರೆಯಾಗುತ್ತದೆಯೆ?
ಇದೀಗ ಅತ್ಯಾಚಾರಕ್ಕೊಳಗಾದ ಮಹಿಳೆಗೆ ಹುಟ್ಟಿದ ಮಗುವಿಗೂ ಆಸ್ತಿಯಲ್ಲಿ ಪಾಲು ಕೊಡಬೇಕೆಂದು ಅಲಹಾಬಾದ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ಸ್ವಾಗತರ್ಹವೇ ಆಗಿದ್ದರೂ ಆ ಹೆಣ್ಣು ಅತ್ಯಾಚಾರದಿಂದ ಹುಟ್ಟಿದ ಆ ಮಗುವನ್ನು ಹೊತ್ತು ಸಲಹುವುದಿದೆಯಲ್ಲಾ ಆ ಯಾತನೆಯ ಲೆಕ್ಕ ಹೇಳುವವರಾರು? 
ಹೆಣ್ಣೊಬ್ಬಳ ಮೇಲಾದ ದೊಡ್ಡ ಗಾಯದ ಗುರುತು ಆ ಮಗು. ಅತ್ಯಾಚಾರದ ಆ ನೋವನ್ನು ಪದೇ ಪದೇ ನೆನಪಿಸುವಂತೆ ಮಾಡುವುದೇ ಆ ಮಗು. ಕೆಲವೊಂದು ಪ್ರಕರಣಗಳಲ್ಲಿ ಅತ್ಯಾಚಾರಿಯೊಬ್ಬನಿಂದ ಹುಟ್ಟಿದ ಮಗು ಬೀದಿ ಪಾಲಾಗುತ್ತದೆ. ಹಾಗೆ ಬೀದಿ ಪಾಲಾದ ಮಕ್ಕಳಿಗೆ ಅಮ್ಮನ ಲಾಲನೆಯೋ, ಅಪ್ಪನ ಎದೆಯ ತಾಪವೋ ಸಿಗುವುದಿಲ್ಲ. ಹಾಗೆ ಅದೆಷ್ಟೋ ಮಕ್ಕಳಿದ್ದಾರೆ. ಅವರಿಗೆ ಅಪ್ಪ ಯಾರು? ಅಮ್ಮ ಯಾರು? ಎಂದು ಗೊತ್ತೇ ಇರುವುದಿಲ್ಲ! ಅತ್ಯಾಚಾರದಿಂದ ಗರ್ಭ ಕಟ್ಟಿದ ಎಷ್ಟು ಭ್ರೂಣಗಳು ಶಿಶುಗಳಾಗಿ ಹೊರ ಬಂದಿವೆ?
ಇಲ್ಲಿ ಅಲಹಾಬಾದ್ ಹೈಕೋರ್ಟ್ ಹೇಳಿದ ಮಾತು ಹೆಚ್ಚು ಪ್ರಾಶಸ್ತ್ಯ ಪಡೆದುಕೊಳ್ಳುತ್ತದೆ. ಅದೇನಂದರೆ ಅತ್ಯಾಚಾರಕ್ಕೀಡಾಗಿದ್ದಾರೆ ಎಂದು ಹೇಳಬೇಕಾಗಿರುವುದು ಒಬ್ಬರನಲ್ಲ, ಇಬ್ಬರನ್ನು. ನ್ಯಾಯಾಲಯ ಹೇಳಿದ್ದೇನೆಂದರೆ, ಒಬ್ಬ ಮಹಿಳೆ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದರೆ ಅವಳಿಗೆ ಹುಟ್ಟುವ ಮಗು ಕೂಡಾ ಪೀಡನೆಗೊಳಗಾಗಿದೆ ಎಂದೇ ಪರಿಗಣಿಸತಕ್ಕದ್ದು. ಇಲ್ಲಿ ಇಬ್ಬರೂ ಪೀಡಿತರೇ. ತನ್ನದಲ್ಲದ ತಪ್ಪಿಗೆ ಅವಮಾನವನ್ನೂ ಅನುಭವಿಸಿಕೊಂಡು, ಆ ಅವಮಾನದ ಭಾರವನ್ನು ಹೊತ್ತು ಆಕೆ ಬದುಕುತ್ತಿರಬೇಕು. ಚಿಕ್ಕ ವಯಸ್ಸಿನಲ್ಲಿ ಅತ್ಯಾಚಾರ್ಕಕೊಳಗಾದ ಬಾಲಕಿಯ ಬಾಲ್ಯವನ್ನು ಯಾರಿಗಾದಾಗರೂ ಮರಳಿ ಕೊಡಲು ಸಾಧ್ಯವೆ?
ಅತ್ಯಾಚಾರಕ್ಕೊಳಗಾದ ಮಹಿಳೆ ಮಗುವಿಗೆ ಜನ್ಮ ನೀಡಿದರೆ ಮಗುವಿಗೂ ಆಸ್ತಿಯಲ್ಲಿ ಪಾಲು ನೀಡಬೇಕೆಂದು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುವ ಹೊತ್ತಿನಲ್ಲೇ ಅಪ್ರಾಪ್ತರನ್ನು ಅತ್ಯಾಚಾರಗೈದವರನ್ನು ಷಂಡರನ್ನಾಗಿ ಮಾಡಬೇಕು ಎಂದು ಮದ್ರಾಸ್ ಹೈಕೋರ್ಟ್ ಹೇಳಿದ್ದು ಕೂಡಾ ಅನುಷ್ಠಾನಕ್ಕೆ ಬರಬೇಕು. ಹಾಗಾದರೆ ಮಾತ್ರ ಅತ್ಯಾಚಾರಿಗಳ ಪೌರುಷಕ್ಕೆ ಏಟು ಬೀಳಬಹುದು. 
-ಅನ್ವಿತಾ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

SCROLL FOR NEXT