ಲಂಡನ್: ಜಗತ್ತಿನ ಅಗ್ರಮಾನ್ಯ ಸಾಮಾಜಿಕ ಜಾಲತಾಣಗಳಲ್ಲೊಂದಾದ ಟ್ವಿಟರ್‍ನ ನೇತೃತ್ವ ಭಾರತೀಯ ಮೂಲದ ಪದ್ಮಶ್ರೀ ವಾರಿಯರ್ ಗೆ ಲಭಿಸುವ ಸಾಧ್ಯತೆ ದಟ್ಟವಾಗಿದೆ.
ಮಹಿಳೆಯೊಬ್ಬರು ಈ ಸ್ಥಾನ ಅಲಂಕರಿಸುವ ಸೂಚನೆ ಸಿಕ್ಕಿರುವುದು ವಿಶೇಷ. ಹಾಗೊಮ್ಮೆ ವಾರಿಯರ್ ನೇಮಕವಾದಲ್ಲಿ ಟೆಕ್ ಜಗತ್ತಿನ ಮೂರು ಟಾಪ್ ಕಂಪನಿಗಳ ಸಾರಥ್ಯ ಭಾರತೀಯರದ್ದೇ ಎಂಬ ಹೆಮ್ಮೆಗೆ ಅದು ಕಾರಣವಾಗುತ್ತದೆ.
ಸದ್ಯದಲ್ಲಿ ಫೇಸ್‍ಬುಕ್ ಹೊರತುಪಡಿಸಿ, ಗೂಗಲ್ ಗೆ ಸುಂದರ್ ಪಿಚೈ ಮತ್ತು ಮೈಕ್ರೋ-ಸಾಫ್ಟ್ಗೆ ಸತ್ಯ ನಾಡೆಲ್ಲಾ ಸಿಇಒ ಆಗಿ ಕಾರ್ಯ- ನಿರ್ವಹಿಸುತ್ತಿದ್ದಾರೆ. ಸಿಸ್ಕೋ ಸಿಸ್ಟಮ್ಸ್ ಕಂಪನಿಯ ಮಾಜಿ ಎಕ್ಸಿಕ್ಯೂಟಿವ್ ಪದ್ಮಶ್ರೀ ವಾರಿಯರ್ ಟ್ವಿಟರ್‍ನ ಸಿಇಒ ಸ್ಥಾನದ ರೇಸ್ ನಲ್ಲಿ ಮುಂಚೂಣಿಯಲ್ಲಿರುವುದಾಗಿ ಬೂಮ್ ಬರ್ಗ್ ಪತ್ರಿಕೆ ವರದಿ ಮಾಡಿದೆ.
ಈಗಾಗಲೇ ಸಂಭವನೀಯರ ಪಟ್ಟಿ ಸಿದ್ಧಪಡಿಸಲಾಗಿದ್ದು ಬರುವ ಗುರುವಾರ ನಡೆಯಲಿರುವ ಮಂಡಳಿ ಸಭೆಯಲ್ಲಿ ಸಿಇಒ ಆಯ್ಕೆ ಬಹಿರಂಗವಾಗಲಿದೆ. ಈಗಾಗಲೇ ವಾರಿಯರ್ ಹೆಸರು ಎಲ್ಲ ಮೂಲಗಳಿಂದ ಕೇಳಿಬರುತ್ತಿವೆ.
ಕಳೆದ ಮೂರು ತಿಂಗಳಿನಿಂದ ಹೊಸ ಸಿಇಒ ಶೋಧ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ಕಂಪನಿಯ ಷೇರುಗಳು ಶೇ 22ರಷ್ಟು ಕುಸಿತ ಕಂಡುಬಂದಿದ್ದಲ್ಲದೆ ಹಲವು ಪ್ರಾಡೆಕ್ಟ್ ಎಕ್ಸಿಕ್ಯೂಟಿವ್‍ಗಳು ಉದ್ಯೋಗ ತೊರೆದು ಹೋಗಿದ್ದಾರೆ. ಆದರೆ ಟ್ವಿಟರ್ ಈ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳಿಗೆ ಗುಟ್ಟುಬಿಟ್ಟುಕೊಟ್ಟಿಲ್ಲ ಎಂದು ವರದಿಯಾಗಿದೆ.
ಪದ್ಮಶ್ರೀ ವಾರಿಯರ್
ಭಾರತೀಯ ಮೂಲದ ಪದ್ಮಶ್ರೀ ವಾರಿಯರ್(54) ಸಿಲಿಕಾನ್ ವ್ಯಾಲಿಯ ಉನ್ನತ ಹುದ್ದೆಯಲ್ಲಿದ್ದು ಕೆಲಕಾಲದ ಹಿಂದಷ್ಟೇ ಚೀಫ್ ಟೆಕ್ನಾಲಜಿ ಆಫೀಸರ್ ಹುದ್ದೆಯಿಂದ ಕೆಳಗಿಳಿದಿದ್ದರು. ಇದಕ್ಕೂ ಮುನ್ನ ಮೊಟೊರೊಲಾ ಕಂಪನಿಯಲ್ಲಿ 23 ವರ್ಷಗಳ ಕಾಲ ಹಲವು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದರು.
ದೆಹಲಿಯ ಐಐಟಿ ವಿದ್ಯಾರ್ಥಿಯಾಗಿದ್ದ ಅವರು ಕಾರ್ನೆಲ್ ವಿವಿಯಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದ್ದರು. ಆಂಧ್ರದ ವಿಜಯವಾಡದಲ್ಲಿ ಹುಟ್ಟಿಬೆಳೆದ ಪದ್ಮಶ್ರೀ ಯವರದು ಮಲಯಾಳಂ ಮಾತನಾಡುವ ಕುಟುಂಬವಾಗಿತ್ತು. ಫಾಚ್ರ್ಯೂನ್ ಮ್ಯಾಗಜಿನ್‍ನ ವಿಶ್ವದ ಟಾಪ್ ಟೆನ್ ಮಹಿಳೆಯರ ಪಟ್ಟಿಯಲ್ಲಿದ್ದರು.