ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರದ ಸಂಗ್ರಹ ಚಿತ್ರ 
ವಿಶೇಷ

ಇಂದು ಪತ್ರಿಕಾ ದಿನಾಚರಣೆ; ರಾಜ್ಯದೆಲ್ಲೆಡೆ ಆಚರಣೆ

ಪ್ರತಿ ವರ್ಷ ಜುಲೈ 1 ರಂದು ನಮ್ಮ ರಾಜ್ಯದಲ್ಲಿ `ಪತ್ರಿಕಾ ದಿನ' ಆಚರಿಸಲಾಗುತ್ತದೆ. ಕನ್ನಡ ಪತ್ರಿಕೋದ್ಯಮ, ಪತ್ರಿಕೆಗಳು ಮೊದಲಾದವಗಳ ಕುರಿತು...

ಬೆಂಗಳೂರು: ಪ್ರತಿ ವರ್ಷ ಜುಲೈ 1 ರಂದು ನಮ್ಮ ರಾಜ್ಯದಲ್ಲಿ `ಪತ್ರಿಕಾ ದಿನ' ಆಚರಿಸಲಾಗುತ್ತದೆ. ಕನ್ನಡ ಪತ್ರಿಕೋದ್ಯಮ, ಪತ್ರಿಕೆಗಳು ಮೊದಲಾದವಗಳ ಕುರಿತು ಚರ್ಚೆ, ಅವಲೋಕನ ನಡೆಯುತ್ತವೆ. ಪತ್ರಿಕೋದ್ಯಮದ ಪರಿಚಯ ಜನಸಾಮಾನ್ಯರಿಗೆ ಆಗಬೇಕು ಎಂಬ ಉದ್ದೇಶದಿಂದ ಈ ದಿನವನ್ನು ಪತ್ರಿಕಾ ದಿನವೆಂದು ಆಚರಿಸಲಾಗುತ್ತದೆ.

ಇಂದು ಪತ್ರಿಕೋದ್ಯಮವೆಂಬುದು ಕಾಲದ ಸ್ಥಿತ್ಯಂತರದಲ್ಲಿ ಹಲವು ಬದಲಾವಣೆಗಳನ್ನು ಕಂಡಿದೆ. ಪತ್ರಿಕೋದ್ಯಮದ ರೀತಿ, ಸ್ವರೂಪ ಬದಲಾಗಿದೆ. ಮುದ್ರಣ ಮಾಧ್ಯಮದ ಜಾಗವನ್ನು ಬಹುಪಾಲು ಆನ್ ಲೈನ್ ಪತ್ರಿಕೆಗಳು ಆಕ್ರಮಿಸಿಕೊಳ್ಳುತ್ತಿವೆ. ಸಾಮಾಜಿಕ ತಾಣಗಳು ಕೂಡ ಸುದ್ದಿಗಳನ್ನು ಸೆಕೆಂಡು, ಸೆಕೆಂಡಿಗೂ ಹೊತ್ತು ತರುತ್ತವೆ. ಎಲೆಕ್ಟ್ರಾನಿಕ್ ಮಾಧ್ಯಮಗಳು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ತಾಂತ್ರಿಕವಾಗಿ ಹೆಚ್ಚು ಸಮೃದ್ಧವಾಗುತ್ತಿವೆ. ಇಂದು ಸುದ್ದಿ ತಿಳಿಯಬೇಕೆಂದರೆ ಬಹುಪಾಲು ಮಂದಿ ಪತ್ರಿಕೆಯನ್ನು ಹಿಡಿದುಕೊಂಡು ಕೂರುವುದಿಲ್ಲ. ಕೈಯಲ್ಲಿ ಸ್ಮಾರ್ಟ್ ಫೋನ್, ಟ್ಯಾಬ್ ಇದ್ದರೆ ಸಾಕು, ಇಂಟರ್ನೆಟ್ ಸಂಪರ್ಕವಿದ್ದರೆ ಜಗತ್ತಿನ ಯಾವ ಭಾಗದ ವಿಷಯವನ್ನು ಕೂಡ ಅಂಗೈಯಲ್ಲಿ ಹಿಡಿದುಕೊಂಡು ನೋಡಬಹುದು ಎಂಬಂತಾಗಿದೆ. ತಂತ್ರಜ್ಞಾನದ ಬೆಳವಣಿಗೆ ಸುದ್ದಿ ಮಾಧ್ಯಮದ ಮೇಲೆ ಕೂಡ ಇಷ್ಟರ ಮಟ್ಟಿನ ಪರಿಣಾಮ ಬೀರಿದೆ.

ಆದರೂ ಕೂಡ ಪತ್ರಿಕೆಗಳನ್ನು ಹಿಡಿದುಕೊಂಡು ಅಕ್ಷರಗಳನ್ನು ಓದುವುದೆಂದರೆ ಅದರ ಮಜಾನೇ ಬೇರೆ, ಕಾಗದದ ಸ್ಪರ್ಶ ಹಿತಾನುಭವ ನೀಡುತ್ತದೆ, ಅದು ಆನ್ ಲೈನ್ ಮಾಧ್ಯಮದಲ್ಲಿ ಸಿಗಲಾರದು ಎಂದು ಹೇಳುವವರು ಈಗಲೂ ಇದ್ದಾರೆ.
ಪತ್ರಿಕೋದ್ಯಮ, ಪತ್ರಿಕಾ ಸಾಹಿತ್ಯಕ್ಕೆ ಭದ್ರ ತಳಪಾಯ ಪತ್ರಿಕೆಗಳು ಎಂದರೆ ಅತಿಶಯೋಕ್ತಿಯೆನಿಸಲಾರದು.

ಮಾನವನ ಸರ್ವತೋಮುಖ ಬೆಳವಣಿಗೆಯಲ್ಲಿ ಮುದ್ರಣ ಕಲೆ ಮಹತ್ತರ ಪಾತ್ರ ವಹಿಸಿದೆ. ಮುದ್ರಣ ಮಾಧ್ಯಮ ಜಗತ್ತಿನ ಎಲ್ಲ ದೇಶಗಳನ್ನು ಹತ್ತಿರಕ್ಕೆ ತಂದಿದೆ ಹಾಗೂ ಪರಿಚಯಿಸಿಕೊಟ್ಟಿದೆ. ಮೊದಲು ಪುಸ್ತಕಗಳು ನಂತರ ನಿಯತಕಾಲಿಕೆಗಳು ಹಾಗೂ ದಿನಪತ್ರಿಕೆಗಳು ಜ್ಞಾನದ ಪ್ರಸರಣ ಆರಂಭಿಸಿದವು.

ಜರ್ಮನಿಯ ಜಾನ್ ಗುಟೆನ್ ಬರ್ಗ್ 1440ರಲ್ಲಿ ಎರಕಹೊಯ್ದ ಅಚ್ಚುಮೊಳೆ ತಯಾರಿಸಿ, ಪವಿತ್ರ ಗ್ರಂಥ `ದಿ ಬೈಬಲ್' ಅನ್ನು ದಪ್ಪನೆಯ ಹಾಳೆಯ ಮೇಲೆ ಮುದ್ರಿಸಿದಾಗ, ಅದೊಂದು ಕ್ರಾಂತಿಕಾರಕ ಆವಿಷ್ಕಾರವಾಗಿತ್ತು. ಮುದ್ರಣ ಜ್ಞಾನದ ದಾಹ ತಣಿಸುವ ಪ್ರಮುಖ ಸೆಲೆಯಾಯಿತು. ನಾಗರಿಕತೆಯ ಬೆಳವಣಿಗೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರವಹಿಸಿದ ಹಲವೇ ಸಾಧನೆಗಳಲ್ಲಿ ಮುದ್ರಣಯಂತ್ರ ಸಹ ಒಂದು ಎಂದು ಆಧುನಿಕ ಇತಿಹಾಸಕಾರರು ಹೇಳುತ್ತಾರೆ.

ಜರ್ಮನ್ ನ ಮತಪ್ರಚಾರಕ ಹೆರ್ಮನ್ ಪ್ರೆಢರಿಕ್ ಮೊಗ್ಲಿಂಗ್ ಕನ್ನಡ ಪತ್ರಿಕೋದ್ಯಮದ ಮೂಲಪುರುಷ ಎಂದು ಕರೆಯಲಾಗುತ್ತದೆ. ಕನ್ನಡದ ಮೊದಲ ಪತ್ರಿಕೆ 'ಮಂಗಳೂರು ಸಮಾಚಾರ'ವಾಗಿದೆ. ಮೊಗ್ಲಿಂಗ್ ಹುಬ್ಬಳ್ಳಿ ಹಾಗೂ ಗದಗದಲ್ಲಿಯೂ ಕೆಲವು ಕಾಲ ಕಾರ್ಯನಿರ್ವಹಿಸಿದ್ದ. ಆಗ ಆ ಭಾಗವು ಧಾರವಾಡ ಜಿಲ್ಲೆಗೆ ಸೇರಿತ್ತು. ಮೊಗ್ಲಿಂಗ್ ಧಾರವಾಡ ಜಿಲ್ಲೆಯಿಂದ ಮಂಗಳೂರಿಗೆ ಬಂದು 1838ರಿಂದ 1852ರವರೆಗೆ ಸೇವೆಸಲ್ಲಿಸಿದ. ಈ ಅವಧಿಯಲ್ಲಿ ಆತ ಕೈಗೊಂಡ ಪ್ರಮುಖ ನಿರ್ಧಾರವೆಂದರೆ ಪತ್ರಿಕೆಯೊಂದನ್ನು ಪ್ರಕಟಿಸಿ, ಜನರಿಗೆ ಮಾಹಿತಿ ಒದಗಿಸುವುದು. 1843ರ ಜುಲೈ 1ರಂದು "ಮಂಗಳೂರು ಸಮಾಚಾರ" ಎಂಬ ಪತ್ರಿಕೆಯನ್ನು ಹೊರತಂದ. ಇದು ಕನ್ನಡಿಗರನ್ನು ಒಂದುಗೂಡಿಸುವಲ್ಲಿ ಸಹಕಾರಿಯಾಯಿತು.

ಇಂದು ಜುಲೈ 1ರಂದು ಕರ್ನಾಟಕದಲ್ಲಿ ಪತ್ರಿಕಾ ದಿನಾಚರಣೆಯಾಗಿ ಈ ಹಿನ್ನೆಲೆಯಲ್ಲಿ ಆಚರಿಸಲಾಗುತ್ತದೆ.  ಮಂಗಳೂರಿನಲ್ಲಿ ಕನ್ನಡ ಪತ್ರಿಕೋದ್ಯಮದ ಪ್ರಾರಂಭ ಬಾಸೆಲ್ ಮಿಶನ್ ಸಂಸ್ಥೆಯಿಂದ ನಡೆಯಿತು. ‘ಮಂಗಳೂರು ಸಮಾಚಾರ’ ವೆಂಬ ಹೆಸರಿನಲ್ಲಿ ಪ್ರಾರಂಭಗೊಂಡ ಕನ್ನಡ ವಾರ ಪತ್ರಿಕೆಯಿಂದ ಕನ್ನಡ ಪತ್ರಿಕೋದ್ಯಮ ಚರಿತ್ರೆ ಕರ್ನಾಟಕದಲ್ಲಿ ಆರಂಭವಾಗುತ್ತದೆ. ಪಾಶ್ಚಾತ್ಯ ಪ್ರಪಂಚದಲ್ಲಿ ಜನಜೀವನದ ಮೇಲೆ ಮುದ್ರಣದ ಪ್ರಬಾವವು ಮೂರು ನಾಲ್ಕು ಶತಮಾನಗಳಿಂದ ಉಂಟಾಗಿದ್ದರೂ ನಮ್ಮಲ್ಲಿ ಈ ವ್ಯವಸ್ಥೆ ಒಂದೂವರೆ ಶತಮಾನದ ಈಚಿನದು. ಈ ಸೌಲಭ್ಯವನ್ನು ಒದಗಿಸಿಕೊಟ್ಟವರು ಪಾಶ್ಚಾತ್ಯರು. ಕ್ರೈಸ್ತ ಮತ ಪ್ರಚಾರಕ್ಕಾಗಿ ಬಂದ ಇವರು ಮೊದಲು ಇಲ್ಲಿ ಕಲ್ಲಚ್ಚಿನ ಮುದ್ರಣವನ್ನು ಬೆಳಕಿಗೆ ತಂದರು. ತದನಂತರ ಅಚ್ಚುಮೊಳೆಗಳ ಮುದ್ರಣವೂ ಆರಂಭವಾಯಿತು.

(ಸಂಗ್ರಹ-ವಿವಿಧ ಮೂಲಗಳಿಂದ)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT