In America you can criticize God, but you can't criticize Israel" ಎಂಬ ಜನಜನಿತ ಮಾತೊಂದಿದೆ. ಇದೊಂದೇ ಮಾತು ಅಮೆರಿಕಾದಲ್ಲಿ ಇಸ್ರೇಲ್ ನ ಮೂಲದವರಾದ ಜ್ಯೂಗಳು (Jews) ಅದೆಷ್ಟು ಪ್ರಭಾವಶಾಲಿಗಳೆಂಬುದನ್ನು ತಿಳಿಸುತ್ತದೆ. ಅಮೆರಿಕದ ಉದ್ಯಮ, ರಾಜಕಾರಣ, ಆರ್ಥಿಕತೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಜ್ಯೂಗಳು ಅತ್ಯಂತ ಪ್ರಭಾವಶಾಲಿಗಳು. ವಿಶ್ವದ ದೊಡ್ಡಣ್ಣನೆಂದೇ ಕರೆಯಲಾಗುವ ಅಮೆರಿಕಾದಲ್ಲಿ ಜ್ಯೂಗಳು ಅಷ್ಟೋಂದು ಪ್ರಭಾವಶಾಲಿಗಳಾಗಿದ್ದರೂ, ದಶಕಗಳ ಕಾಲ ಬಗೆಹರಿಯದೇ ಉಳಿದಿದ್ದ ಜೆರುಸಲೇಮ್ ನ ವಿವಾದದಲ್ಲಿ ಅಮೆರಿಕ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಅಥವಾ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿರಲಿಲ್ಲ.
ಆದರೆ ಡಿ.6 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೆರುಸಲೇಮ್ ನ್ನು ಇಸ್ರೇಲ್ ನ ರಾಜಧಾನಿಯನ್ನಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಅಮೆರಿಕದ ರಾಯಭಾರ ಕಚೇರಿಯನ್ನು ಟೆಲ್ ಅವಿವ್ ನಿಂದ ಜೆರುಸಲೇಮ್ ಗೆ ವರ್ಗಾವಣೆ ಮಾಡುವಂತೆ ಆದೇಶಿಸಿದ್ದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ನಡೆ ಇಸ್ರೇಲ್ ಗೆ ಸಂಬಂಧಿಸಿದಂತೆ ಅಮೆರಿಕಾದ ಮಹತ್ವದ Policy Shift ಎಂದೇ ಬಿಂಬಿತವಾಗಿತ್ತು. ವಿಶ್ವ ಸಮುದಾಯದಿಂದ ಅಮೆರಿಕ ನಡೆಗೆ ಖಂಡನೆಯೂ ವ್ಯಕ್ತವಾಗಿತ್ತು. ದಶಕಗಳಷ್ಟು ಹಿಂದಿನ ಇಸ್ರೇಲ್-ಪ್ಯಾಲೆಸ್ತೇನ್ ನಡುವಿನ ತಿಕ್ಕಾಟವನ್ನು ಕೊನೆಗೊಳಿಸುವ ಬದಲು ಮತ್ತಷ್ಟು ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ಎಂದೂ ವಿಶ್ವದ ಬಹುತೇಕ ನಾಯಕರು ಟ್ರಂಪ್ ಮೇಲೆ ಉರಿದುಬಿದ್ದಿದ್ದರು. ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ, "ಜೆರುಸಲೇಮ್ ನ್ನು ಇಸ್ರೇಲ್ ನ ರಾಜಧಾನಿ ಎಂದು ಘೋಷಿಸುವುದಕ್ಕೆ ಇದು ಸೂಕ್ತ ಸಮಯ, US would support a two-state solution if agreed to by both sides ಎಂದಿದ್ದರು ಅಷ್ಟೇ. Nothing more.
ಅವಿಭಜಿತ ಜೆರುಸಲೇಮ್ ನ್ನು ಅಂದರೆ ಸಂಪೂರ್ಣ ಜೆರುಸಲೇಮ್ ನ್ನು ಇಸ್ರೇಲ್ ನ ರಾಜಧಾನಿಯೆಂದು ಘೋಷಿಸುವುದಾಗಿ ಟ್ರಂಪ್ ತಮ್ಮ ಭಾಷಣದಲ್ಲಿ ಸ್ಪಷ್ಟವಾಗಿ ಹೇಳಿರಲಿಲ್ಲ ಎಂಬುದು ಗಮನಾರ್ಹ ಅಂಶ. ಬದಲಾಗಿ ಜೆರುಸಲೇಮ್ ನ ಅಂತಿಮ ಸ್ಥಿತಿ ಅಥವಾ (Final Status) ನ್ನು ನಿರ್ಣಯಿಸುವ ನಿಟ್ಟಿನಲ್ಲಿ ಉಭಯ ಪಕ್ಷಗಳೂ ಒಪ್ಪಿದರೆ two-state solution ಗೆ ಬೆಂಬಲಿಸುವುದಾಗಿ ಹೇಳಿದ್ದರಷ್ಟೇ. ಟ್ರಂಪ್ ಹೇಳಿಕೆಗೂ ಮುನ್ನ ಈ ಬಗ್ಗೆ ಮಾತನಾಡಿದ್ದ
ಶ್ವೇತ ಭವನದ ಅಧಿಕಾರಿಗಳೂ ಸಹ ಟ್ರಂಪ್ ಘೋಷಣೆ ಜೆರುಸಲೇಮ್ ನ ಭವಿಷ್ಯದ ಗಡಿಗಳಿಗೆ ಸಂಬಂಧಿಸಿದಂತೆ ಯಾವುದೇ ಮಹತ್ತರವಾದ ಬದಲಾವಣೆಗಳನ್ನೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿದ್ದರು. ಒಂದು ವೇಳೆ ಡೊನಾಲ್ಡ್ ಟ್ರಂಪ್ ಅವಿಭಜಿತ ಜೆರುಸಲೇಮ್ ನ್ನು ಇಡಿಯಾಗಿ ಇಸ್ರೇಲ್ ನ ರಾಜಧಾನಿಯೆಂದು ಘೋಷಿಸಿದ್ದರೆ ಈ ವೇಳೆಗೆ ಈಗ ನಡೆಯುತ್ತಿರುವುದಕ್ಕಿಂತ ಘೋರವಾದ ಪ್ರತಿಭಟನೆ ನಡೆಯಬೇಕಿತ್ತು. ಈ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಘೋಷಣೆ/ ಹೇಳಿಕೆ ಮಹತ್ವ ಪಡೆಯುತ್ತದೆ.
ಜೆರುಸಲೇಮ್ ನ್ನು ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ಎರಡೂ ರಾಷ್ಟ್ರಗಳು ತಮ್ಮ ರಾಧಾನಿಯೆಂದು ಹಕ್ಕು ಪ್ರತಿಪಾದನೆ ಮಾಡುತ್ತಿದ್ದು, ಜ್ಯೂಗಳು ಹಾಗೂ ಮುಸ್ಲಿಮರಿಗೆ ಪವಿತ್ರ ಕ್ಷೇತ್ರವಾಗಿದೆ.
ಇಸ್ರೇಲ್ ನ ಹುಟ್ಟಿದ್ದು 1948 ರಲ್ಲಿ ಇಸ್ರೇಲ್ ಆವಿರ್ಭಾವವಾದ ಒಂದೇ ವರ್ಷದಲ್ಲಿ ಅಂದರೆ 1949 ರಿಂದ ವೆಸ್ಟ್ ಜೆರುಸಲೇಮ್ ನ್ನು ತನ್ನ ನಿಯಂತ್ರಣದಲ್ಲಿರಿಸಿಕೊಂಡಿದ್ದು ಅಲ್ಲಿಯೇ ಇಸ್ರೇಲ್ ನ ಸಂಸತ್ ಹಾಗೂ ಪ್ರಧಾನಿಗಳ ನಿವಾಸವೂ ಇದೆ. ವೆಸ್ಟ್ ಜೆರುಸಲೇಮ್ ನ್ನು ನಿಯಂತ್ರಣದಲ್ಲಿರಿಸಿಕೊಂಡಿದ್ದ ಇಸ್ರೇಲ್ 1967 ರಲ್ಲಿ ಈಸ್ಟ್ ಜೆರುಸಲೇಮ್ ನ್ನೂ ಸಹ ವಶಪಡಿಸಿಕೊಂಡಿತ್ತು. ಹಾಗಾಗಿಯೇ ಅಂತಾರಾಷ್ಟ್ರೀಯ ಸಮುದಾಯ ಈಸ್ಟ್ ಜೆರುಸಲೇಮ್ ನ್ನು ಆಕ್ರಮಿತ ಪ್ರದೇಶ ಎಂದು ಪರಿಗಣಿಸಿದೆ.
ಇದೇಈಸ್ಟ್ ಜೆರುಸಲೇಮ್ ನಲ್ಲಿಯೇ ಜ್ಯೂಗಳು ಬಹಿರಂಗವಾಗಿ ಪ್ರಾರ್ಥನೆ ಸಲ್ಲಿಸುವ ವೆಸ್ಟ್ರನ್ ವಾಲ್, ಕ್ರೈಸ್ತರ ಪವಿತ್ರ ಭೂಮಿ ಹಾಗೂ ಇಸ್ರೇಲಿಗಳು ಟೆಂಪಲ್ ಮೌಂಟ್ ಎಂದು ಹೇಳುವ ಮುಸಲ್ಮಾನರು ಪವಿತ್ರ ಕ್ಷೇತ್ರವೆಂದು ಭಾವಿಸಿರುವ ಹರಮ್ ಅಲ್-ಷರೀಫ್ (ಪವಿತ್ರ ಸ್ಥಳ ಎಂಬ ಅರ್ಥ) ಇದೆ. ಇಸ್ರೇಲ್ ಪ್ಯಾಲೆಸ್ತೇನ್ ನಿಂದ ತನ್ನ ವಶಕ್ಕೆ ತೆಗೆದುಕೊಂಡಿರುವ ಈಸ್ಟ್ ಜೆರುಸಲೇಮ್ ನ್ನು ಪ್ಯಾಲೆಸ್ತೇನ್ ರಾಜಧಾನಿಯನ್ನಾಗಿ ಮಾಡಿಕೊಳ್ಳಬೇಕೆಂಬ ಇಚ್ಛೆ ಹೊಂದಿದೆ, ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೇತನ್ಯಾಹು ನೇತೃತ್ವದ ರಾಷ್ಟ್ರೀಯವಾದಿ ಸರ್ಕಾರ ಮಾತ್ರ ಯಾವುದೇ ಕಾರಣಕ್ಕೂ ಜೆರುಸಲೇಮ್ ವಿಷಯದಲ್ಲಿ ರಿಯಾಯಿತಿ ತೋರುವುದಿಲ್ಲ ಎನ್ನುತ್ತಿದೆ. ಇಡಿಯ ಜೆರುಸಲೇಮ್ ಇಸ್ರೇಲ್ ನ ರಾಜಧಾನಿ ಎನ್ನುತ್ತಿದೆ.
ಡೊನಾಲ್ಡ್ ಟ್ರಂಪ್ ಅವರ ನಡೆ ಇಸ್ರೇಲ್, ಜೆರುಸಲೇಮ್, ಪ್ಯಾಲೆಸ್ತೇನ್ ಗೆ ಸಂಬಂಧಿಸಿದಂತೆ ಯಾಕೆ ಅಷ್ಟೆಲ್ಲಾ ಸುದ್ದಿ ಮಾಡುತ್ತಿದೆ, ಟ್ರಂಪ್ ನಡೆ ಅಪಾಯಕಾರಿ ಎಂದೇಕೆ ಬಿಂಬಿತವಾಗುತ್ತಿದೆ?
ಮೇಲೆ ಹೇಳಿದಂತೆ ಅಮೆರಿಕಾದಲ್ಲಿ ಜ್ಯೂಗಳು ಬಹುತೇಕ ವಿಷಯಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅಂತೆಯೇ ಚುನಾವಣೆ ಸಂದರ್ಭದಲ್ಲಿ ಜ್ಯೂಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಟ್ರಂಪ್ ಗೆ ಅನಿವಾರ್ಯವಾಗಿ ಮಾರ್ಪಟ್ಟು ಜೆರುಸಲೇಮ್ ನ್ನು ಇಸ್ರೇಲ್ ನ ರಾಜಧಾನಿಯನ್ನಾಗಿ ಘೋಷಿಸುವುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಭರವಸೆಗಳಲ್ಲಿ ಪ್ರಮುಖ ಭರವಸೆಯಾಗಿತ್ತು. ಅಧ್ಯಕ್ಷರಾದ ನಂತರ ಆಡಳಿತ, ರಾಜಕೀಯ ವಲಯದಲ್ಲಿ ಟ್ರಂಪ್ ಗೆ ಎಡತಾಕುತ್ತಿದ್ದ ಜ್ಯೂಗಳಿಂದ ಜೆರುಸಲೇಮ್ ಕುರಿತ ನಿರ್ಣಯಕ್ಕೆ ಒತ್ತಡವೂ ಹೆಚ್ಚಿತ್ತು ಎಂದಿಟ್ಟುಕೊಳ್ಳಿ. ಈ ಹಿನ್ನೆಲೆಯಲ್ಲಿಯೇ ಅತ್ತ ಡೊನಾಲ್ಡ್ ಟ್ರಂಪ್ ಜೆರುಸಲೇಮ್ ನ್ನು ಇಸ್ರೇಲ್ ನ ರಾಜಧಾನಿ ಎಂದು ಘೋಷಣೆ ಮಾಡುವುದರ ಬಗ್ಗೆ ಮಾತನ್ನಾಡುತ್ತಿದ್ದಂತೆಯೇ ಫ್ರಾನ್ಸ್, ಸೌದಿ ಅರೇಬಿಯಾ, ಚೀನಾ ಆದಿಯಾಗಿ ಅಂತಾರಾಷ್ಟ್ರೀ ಸಮುದಾಯ ಎಚ್ಚರಿಕೆ ನೀಡಿತ್ತು. ಟ್ರಂಪ್ ಘೋಷಣೆಯಿಂದ ಎದುರಾಗಬಹುದಾಗಿದ್ದ ಉದ್ವಿಗ್ನತೆಯ ಮುನ್ಸೂಚನೆ ಅರಿತು ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ "ಬುದ್ಧಿವಂತಿಕೆ ಮತ್ತು ವಿವೇಕ ಮೇಲುಗೈ ಸಾಧಿಸಲಿ" ಎಂದು ವಿಶ್ವ ನಾಯಕರಿಗೆ ಕರೆ ನೀಡಿದ್ದರು. ಅಷ್ಟೇ ಅಲ್ಲದೇ ಜೆರುಸಲೇಮ್ ನಲ್ಲಿದ್ದ ಅಮೆರಿಕದ ದೂತವಾಸ ಕಚೇರಿ ಸಹ ಅಮೆರಿಕದ ಸರ್ಕಾರಿ ಅಧಿಕಾರಿಗಳು ಹಾಗೂ ಅವರ ಕುಟುಂಬದವರು ಜೆರುಸಲೇಮ್ ನ ಹಳೆಯ ನಗರ ಅಥವಾ ವೆಸ್ಟ್ ಬ್ಯಾಂಕ್ ಗೆ ತೆರಳದಂತೆ ನಿರ್ಬಂಧ ವಿಧಿಸಿ ಭದ್ರತೆ ಹೆಚ್ಚಿಸಿದ್ದರು. ಆದರೆ ಡೊನಾಲ್ಡ್ ಟ್ರಂಪ್ ಅವರ ಘೋಷಣೆಯಿಂದ ನಿರೀಕ್ಷಿತ ಮಟ್ಟದ ಪ್ರತಿಭಟನೆಗಳು, ಕೋಲಾಹಲವೇನೂ ಸಂಭವಿಸಲಿಲ್ಲ. ಜೆರುಸಲೇಮ್ ನ ಘೋಷಣೆಗೂ ಮುನ್ನವೇ ಹಲವು ಬಾರಿ ಟ್ರಂಪ್ ತಮ್ಮ ಆಡಳಿತ ನಿಸ್ಸಂದಿಗ್ಧವಾಗಿ ತಾನು ಇಸ್ರೇಲ್ ನೊಂದಿಗೆ ಇದ್ದೇನೆ ಎಂಬ ದೃಷ್ಟಿಕೋನವನ್ನು ಅದಾಗಲೇ ಜಗತ್ತಿಗೆ ರವಾನೆ ಮಾಡಿಯಾಗಿತ್ತು, ಪ್ರತಿಭಟನೆ, ಅಂತಾರಾಷ್ಟ್ರೀಯ ಸಮುದಾಯದಕೆಂಗಣ್ಣಿಗೆ ಗುರಿಯಾಗಲು ಇಷ್ಟು ಸಾಕಾಗಿತ್ತು.
ಜೆರುಸಲೇಮ್ ಗಾಗಿ ಕಾದಾಡುತ್ತಿರುವ ಇಸ್ರೇಲ್-ಪ್ಯಾಲೆಸ್ತೇನ್ ನಡುವೆ ಮಧ್ಯಸ್ಥಿಕೆ ವಹಿಸಲು ಈಗಾಗಲೇ ವಿಶ್ವಸಮುದಾಯ ಅನೇಕ ಪ್ರಯತ್ನಗಳನ್ನು ಮಾಡಿದೆ. ಮಾತುಕತೆಯನ್ನು ಕಾಪಿಟ್ಟುಕೊಳ್ಳಲು ಜೆರುಸಲೇಮ್ ನ ಫೈನಲ್ ಸ್ಟೇಟಸ್ ಗೆ ಸಂಬಂಧಿಸಿದಂತೆ 1990 ರಲ್ಲಿ ಇಸ್ರೇಲ್- ಪ್ಯಾಲೆಸ್ತೇನ್ ನಡುವೆ ಓಸ್ಲೋ ಶಾಂತಿ ಒಪ್ಪಂದಗಳೂ ನಡೆದಿತ್ತು. 2000 ರಲ್ಲಿ ಇಸ್ರೇಲ್ ನ ಅಂದಿನ ಪ್ರಧಾನಿ ಎಹುದ್ ಬರಾಕ್ ಹಾಗೂ ಪ್ಯಾಲೆಸ್ತೇನ್ ನಾಯಕ ಯಾಸರ್ ಅರಾಫತ್ ಮಾತುಕತೆ ಮೂಲಕ ಕೊನೆಗೂ ಜೆರುಸಲೇಮ್ ವಿವಾದವನ್ನು ಒಂದು ನಿರ್ಣಾಯಕ ಘಟ್ಟವನ್ನು ತಲುಪಿಸಿ, ಜೆರುಸಲೇಮ್ ನ್ನು ವಿಭಜನೆ ಮಾಡುವ ತೀರ್ಮಾನಕ್ಕೆ ಬರುತ್ತಾರೆ. ಈ ಪ್ರಕಾರ ವೆಸ್ಟ್ರನ್ ವಾಲ್ ಇರುವ ಪ್ರದೇಶವನ್ನು ಇಸ್ರೇಲಿಗಳ ನಿಯಂತ್ರಣಕ್ಕೆ ನೀಡುವುದು, ಹರಮ್ ಅಲ್-ಷರೀಫ್ ಪ್ರದೇಶದ ನಿಯಂತ್ರಣವನ್ನು ಪ್ಯಾಲೆಸ್ತೇನ್ ಗೆ ನೀಡಬೇಕೆಂಬುದು ಒಪ್ಪಂದದ ಅಂಶವಾಗಿತ್ತು ಎನ್ನುತ್ತದೆ ಇತಿಹಾಸ.
ಬಹುಶಃ ಅಂದಿನ ಮಾತುಕತೆ ಯಶಸ್ವಿಯಾಗಿಬಿಟ್ಟಿದ್ದರೆ ಇಂದು ಈ ಸಮಸ್ಯೆಯೇ ಇರುತ್ತಿರಲಿಲ್ಲವೇನೋ. ಬಹುತೇಕ ಸಂದರ್ಭಗಳಲ್ಲಿ ಕೊನೆ ಘಳಿಗೆಗಳಲ್ಲಿ ಯೋಜನೆಗಳು ತಲೆಕೆಳಗಾಗುವಂತೆ ಇಲ್ಲೂ ಆಯಿತು. ಜೆರುಸಲೇಮ್ ನ ಹಳೆಯ ನಗರದ ಅಂಡರ್ ಗ್ರೌಂಡ್ ಟನಲ್ ನ ಜಾಲವನ್ನು ಯಾರ ನಿಯಂತ್ರಣಕ್ಕೊಳಪಡಬೇಕೆಂಬುದೇ ಜಟಿಲ ಸಮಸ್ಯೆಯಾಗಿ ಅಂತಿಮ ಹಂತದ ಮಾತುಕತೆಯೂ ಮುರಿದುಬಿತ್ತು! ಅಂದು ಮುರಿದುಬಿದ್ದ ಮಾತುಕತೆ ವರ್ಷಗಟ್ಟಲೆ, ಯಾವಾಗ ಪುನಾರಂಭಗೊಳ್ಳುತ್ತದೆ ಎಂಬ ಸಣ್ಣ ಸುಳಿವೂ ಇಲ್ಲದೇ ಸ್ಥಗಿತಗೊಂಡಿದೆ. ಹೀಗೆ ದಶಕಗಳಿಂದ ಹಾಗೆಯೇ ಉಳಿದಿದ್ದ ವಿವಾದವನ್ನು ಟ್ರಂಪ್ ಈಗ ಮುಟ್ಟಿದ್ದಾರೆ. ಈ ನಡುವೆ ಅತಂತ್ರ ಸ್ಥಿತಿ ಎದುರಿಸುತ್ತಿರುವ ಜೆರುಸಲೇಮ್, ವಿಚಿತ್ರವಾದ status ಹೊಂದಿದ್ದು, ಈ ನಗರ ಯಾವ ರಾಷ್ಟ್ರಕ್ಕೆ ಸೇರಿದ್ದೆಂಬುದು ವಿವಾದದಲ್ಲಿಯೇ ಇರುವ ಕಾರಣ ಇಲ್ಲಿ ಹುಟ್ಟಿದ ಅಮೆರಿಕನ್ನರು ತಮ್ಮ ಪಾಸ್ ಪೋರ್ಟ್ ಗಳ ಮೇಲೆ ಇಸ್ರೇಲ್ ಎಂದು ಹಾಕಿಕೊಳ್ಳುವ ಬದಲು ಜೆರುಸಲೇಮ್ ಎಂದು ಹಾಕಿಕೊಳ್ಳುವ ಸ್ಥಿತಿ ಎದುರಾಗಿದೆ.
ಟ್ರಂಪ್ ಭಾಷಣವನ್ನು ಸೂಕ್ಷ್ಮವಾಗಿ ಗಮನಿಸುವುದು ಮುಖ್ಯ!
ಇಡಿ ವಿಶ್ವಸಮುದಾಯವನ್ನು, ವಿಶ್ವಸಂಸ್ಥೆಯನ್ನು ಎದುರು ಹಾಕಿಕೊಂಡು ಡೊನಾಲ್ಡ್ ಟ್ರಂಪ್ ಇಸ್ರೇಲ್ ಗೆ ಇಡಿಯ ಜೆರುಸಲೇಮ್ ನ್ನು ದಕ್ಕಿಸಿಕೊಡುವುದಂತೂ ಸುಲಭದ ಮಾತಲ್ಲ, ಇದನ್ನು ಪುಷ್ಟೀಕರಿಸುವಂತೆ ಜೆರುಸಲೇಮ್ ವಿಷಯವಾಗಿ ಡಿ.22 ರಂದು ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಅಮೆರಿಕ 'ಏಕಾಂಗಿ'ಯಾಗಿತ್ತು.
ಅಮೆರಿಕ ಅಧ್ಯಕ್ಷರ ಘೋಷಣೆಯಲ್ಲಿ ಮತ್ತೊಂದು ಗಮನಾರ್ಹ ಅಂಶವೆಂದರೆ ಅದು ಜೆರುಸಲೇಮ್ ಗೆ ಸಂಬಂಧಿಸಿದಂತೆ ದೀರ್ಘಾವಧಿಯ ಭವಿಷ್ಯದ ಬಗ್ಗೆ ಯಾವುದೇ ಹೇಳಿಕೆ ನೀಡದೇ ಗೊತ್ತಿದುದ್ದನ್ನೇ ಮತ್ತೊಮ್ಮೆ ಹೇಳಿದ್ದು. ಹಾಗಾಗಿಯೇ ಡೊನಾಲ್ಡ್ ಟ್ರಂಪ್ ಇಡಿಯ ಜೆರುಸಲೇಮ್ ನ್ನು ಇಸ್ರೇಲ್ ನ ರಾಜಧಾನಿ ಎಂದು ತಮ್ಮ ಹೇಳಿಕೆಯಲ್ಲಿ ಎಲ್ಲಿಯೂ ಸ್ಪಷ್ಟವಾಗಿ ಹೇಳಲಿಲ್ಲ. ಬದಲಾಗಿ ಅಮೆರಿಕ ಈಗಲೂ ಜೆರುಸಲೇಮ್ ನ್ನು ವಿಭಜನೆ ಮಾಡುವ ಮುಂದಿನ ಶಾಂತಿ ಮಾತುಕತೆಗೆ ಬೆಂಬಲಿಸುತ್ತದೆ ಎಂದೇ ಹೇಳಿದ್ದಾರೆ. ಇಲ್ಲೂ ಜಾಣತನ ಮೆರೆದಿರುವ ಡೊನಾಲ್ಡ್ ಟ್ರಂಪ್ ಇಸ್ರೇಲ್ ನ್ನೂ ಎದುರು ಹಾಕಿಕೊಳ್ಳದೇ ಇಸ್ರೇಲ್ ನ ಸಾರ್ವಭೌಮತ್ವ ಹಾಗೂ ಜೆರುಸಲೇಮ್ ನ ನಿರ್ದಿಷ್ಟ ಗಡಿಗಳು ಫೈನಲ್ ಸ್ಟೇಟಸ್ ಗೆ ಸಂಬಂಧಿಸಿದಂತೆ ಪ್ಯಾಲೆಸ್ತೇನ್ ಹಾಗೂ ಇಸ್ರೇಲಿಗಳ ನಡುವಿನ ಭವಿಷ್ಯದ ಶಾಂತಿ ಮಾತುಕತೆಯ ಪ್ರಮುಖ ವಿಷಯವಾಗಿರಲಿವೆ ಎಂಬುದನ್ನೂ ತಿಳಿಸಿದ್ದಾರೆ.
ಜೆರುಸಲೇಮ್ ನಲ್ಲಿ ಇಸ್ರೇಲ್ ನ ಸಾರ್ವಭೌಮತ್ವದ ಗಡಿಯ ವಿಷಯ ಅಥವಾ ವಿವಾದದಲ್ಲಿರುವ ಗಡಿಯ ವಿಷಯವೂ ಸೇರಿದಂತೆ ಅಂತಿಮ ಸ್ಥಿತಿಯ ಬಗ್ಗೆ ನಾವು ಯಾವುದೇ ನಿಲುವನ್ನೂ ತೆಗೆದುಕೊಳ್ಳುತ್ತಿಲ್ಲ ಎಂಬುದನ್ನು ಟ್ರಂಪ್ ಹೇಳಿದ್ದಾರೆ.
ಜೆರುಸಲೇಮ್ ವಿಷಯದಲ್ಲಿ ಅಮೆರಿಕ ಲಗಾಯ್ತಿನಿಂದ ಪ್ರತಿಪಾದಿಸುತ್ತಿರುವ two-state solution ನ್ನೇ ಟ್ರಂಪ್ ಸಹ ಹೊಸ ರೀತಿಯಲ್ಲಿ ಹೇಳಿದ್ದಾರೆ. ಒಂದು ವೇಳೆ ಟ್ರಂಪ್ ಏನಾದರೂ ಹಿಂದಿನ ಸರ್ಕಾರಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಜೆರುಸಲೇಮ್ ಪೂರ್ಣವಾಗಿ ಇಸ್ರೇಲ್ ನ ರಾಜಧಾನಿ ಎಂದು ಘೋಷಿಸಿದ್ದರೆ ಅಮೆರಿಕ ಫೈನಲ್ ಸ್ಟೇಟಸ್ ಗೆ ಸಂಬಂಧಿಸಿದಂತೆ ಸ್ಪಷ್ಟ ನಿಲುವು ತೆಗೆದುಕೊಂಡಂತಾಗುತ್ತಿತ್ತು. ಈಗಿನ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಸದ್ಯಕ್ಕೆ ಅದ್ಯಾವುದೂ ಆಗಿಲ್ಲ ಎನ್ನಬಹುದು, ಈ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯಿಂದ ಇಸ್ರೇಲ್ ಗೆ ಜೆರುಸಲೇಮ್ ಪೂರ್ಣವಾಗಿ ದಕ್ಕುತ್ತದೆ, ಅಮೆರಿಕ ಜೆರುಸಲೇಮ್ ನ ವಿವಾದದಲ್ಲಿ ಸಂಪೂರ್ಣವಾಗಿ ನಿರೀಕ್ಷೆಗೂ ಮೀರಿದ ಪಾಲಿಸಿ ಶಿಫ್ಟ್ ತೆಗೆದುಕೊಂಡಿದೆ ಅಥವಾ ಈ ವಿಷಯದಲ್ಲಿ ಜೆರುಸಲೇಮ್ ಗೆ ಸಂಬಂಧಿಸಿದಂತೆ ತಕ್ಷಣವೇ ಅದ್ಭುತವೇನೋ ಘಟಿಸಿಬಿಡುತ್ತದೆ ಎನ್ನುವುದಂತೂ ಸಾಧ್ಯವಿಲ್ಲದ ಮಾತಷ್ಟೇ.
srinivasrao@newindianexpress.com