ವಿಶೇಷ

98ನೇ ವಯಸ್ಸಿನಲ್ಲಿ ಎಂಎ ಪಾಸ್‌ ಮಾಡಿದ ಬಿಹಾರದ ಹಿರಿಯ ಚೇತನ

Lingaraj Badiger
ಪಾಟ್ನಾ: ಬಿಹಾರದ ಹಿರಿಯ ನಾಗಕರಿಕರೊಬ್ಬರು ತಮ್ಮ ಇಳಿ ವಯಸ್ಸಿನಲ್ಲಿ ನಳಂದಾ ಮುಕ್ತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ.
98 ವರ್ಷದ  ರಾಜ್‌ ಕುಮಾರ್‌ ವೈಶ್ಯ ಅವರು ಯಾವುದೇ ವಿಶೇಷ ಸೌಕರ್ಯ ಪಡೆಯದೆ, ಇತರೆ ವಿದ್ಯಾರ್ಥಿಗಳಂತೆ ಪರೀಕ್ಷಾ ಕೊಠಡಿಗೆ ಬಂದು ಎಂಎ ಪರೀಕ್ಷೆ ಬರೆದು, ದ್ವಿತೀಯ ದರ್ಜೆಯಲ್ಲಿ ಪಾಸ್ ಆಗಿದ್ದಾರೆ.
ಅರ್ಥಶಾಸ್ತ್ರ(ಭಾಗ 2) ವಿಷಯದಲ್ಲಿ ಎಂಎ ಅಂತಿಮ ವರ್ಷದ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ರಾಜ್‌ ಕುಮಾರ್‌ ಉತ್ತೀರ್ಣರಾಗಿದ್ದಾರೆ. ಇದೀಗ ಅವರು ಸಾಮಾಜಿಕ–ಆರ್ಥಿಕ ವಿಚಾರಗಳ ಕುರಿತು ಲೇಖನ ಬರೆಯಲು ಉತ್ಸುಕರಾಗಿದ್ದಾರೆ. ಬಡತನ ಹಾಗೂ ನಿರುದ್ಯೋಗ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚು ಆಸಕ್ತಿ ವಹಿಸಿರುವುದಾಗಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕೊನೆಗೂ ನನ್ನ ಬಹು ದಿನಗಳ ಕನಸು ನನಸಾಗಿದೆ. ನಾನು ಈಗ ಸ್ನಾತಕೋತ್ತರ ಪದವೀಧರ. ಎರಡು ವರ್ಷಗಳ ಹಿಂದೆಯೇ ನಾನು ಎಂಎ ಪರೀಕ್ಷೆ ಬರೆಯಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಈಗ ಸಾಧ್ಯವಾಗಿದೆ ಎಂದು ವೈಶ್ಯ ತಿಳಿಸಿದ್ದಾರೆ. ತಮ್ಮ ಈ ಸಾಧನೆ ಯುವಕರಿಗೆ ಮಾದರಿಯಾಗಲಿದೆ ಎಂದಿದ್ದಾರೆ. 
1920ರಲ್ಲಿ ಜನಿಸಿದ ರಾಜ್‌ ಕುಮಾರ್‌ ವೈಶ್ಯ ಅವರಿಗೆ ಶಿಕ್ಷಣದ ಬಗ್ಗೆ ಇರುವ ಉತ್ಸುಕತೆ ಹಾಗೂ ಬದ್ಧತೆ ಎಲ್ಲರಿಗೂ ಮಾದರಿ ಎಂದು ನಳಂದಾ ವಿವಿಯ ಕುಲಸಚಿವ ಎಸ್‌ಪಿ ಸಿನ್ಹಾ ಅಭಿಪ್ರಾಯ ಪಟ್ಟಿದ್ದಾರೆ. 
ರಾಜ್‌ ಕುಮಾರ್‌ 1938ರಲ್ಲಿ ಆಗ್ರಾ ವಿವಿಯಿಂದ ಪದವಿ ಪಡೆದಿದ್ದರು. ಅವರ ಮೂವರು ಮಕ್ಕಳು ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
SCROLL FOR NEXT