ವಿಶೇಷ

ಭೀಮಾ ಕೋರೆಗಾಂವ್ ಯುದ್ಧ ದಲಿತರ ಪಾಲಿಗೆ ಅತ್ಯಂತ ಮಹತ್ವದ್ದು ಏಕೆ?

Lingaraj Badiger
ಭೀಮಾ ಕೋರೆಗಾಂವ್ ಸಂಗ್ರಾಮದ 200ನೇ ವಿಜಯೋತ್ಸವ ವೇಳೆ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಬಳಿಕ ಪುಣೆ ಹಾಗೂ ಮುಂಬೈನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಮಹಾರಾಷ್ಟ್ರಾದ್ಯಂತ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ದಲಿತಪರ ಸಂಘಟನೆಗಳು ಬುಧವಾರ ಮಹಾರಾಷ್ಟ್ರ ಬಂದ್ ಗೆ ಕರೆ ನೀಡಿದ್ದು, ರಾಜ್ಯಾದ್ಯಂತ ಉದ್ವಿಗ್ನ ಪರಿಸ್ಥಿತಿ ಕಂಡು ಬಂದಿದೆ. ಕೆಲ ಆಯಕಟ್ಟಿನ ಪ್ರದೇಶಗಳಲ್ಲಿ ವ್ಯಾಪಕ ಪೊಲೀಸ್‌ ಬಂದೋಬಸ್ತ್ ಸಹ ಕೈಗೊಳ್ಳಲಾಗಿದೆ. 
ಓರ್ವನನ್ನು ಬಲಿ ಪಡೆದ ಭೀಮಾ ಕೋರೆಗಾಂವ್ ಹಿಂಸಾಚಾರ ಇದೀಗ ದೇಶದೆಲ್ಲೆಡೆ ಸದ್ದು ಮಾಡುತ್ತಿದ್ದು, ಭಾರತದ ಇತಿಹಾಸದಲ್ಲೇ ಹೆಸರಾದ ಈ ಯುದ್ಧ ದಲಿತರ ಆತ್ಮಗೌರವ ಹಾಗೂ ಹಕ್ಕುಗಳಿಗೆ ತಳುಕು ಹಾಕಿಕೊಂಡಿದೆ.
ಭೀಮಾ ಕೋರೆಗಾಂವ್ ಯುದ್ಧ ದಲಿತರ ಪಾಲಿಗೆ ಅತ್ಯಂತ ಮಹತ್ವದಾಗಿದ್ದು ಏಕೆ?
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಪೇಶ್ವೆಗಳ ನಡುವೆ ಭೀಮಾ ಕೋರೆಗಾಂವ್ ನಲ್ಲಿ ಜನವರಿ 1, 1818ರಲ್ಲಿ ಐತಿಹಾಸಿಕ ಯುದ್ದ ನಡೆಯಿತು. ಈ ವೇಳೆ ಐನೂರು ಮಂದಿ ದಲಿತ ಹೋರಾಟಗಾರರು ಆಹಾರ, ನೀರು ಹಾಗೂ ವಿಶ್ರಾಂತಿ ಇಲ್ಲದೆ ಇಪ್ಪತ್ತೆಂಟು ಸಾವಿರ ಮಂದಿ ಇದ್ದ ಸೈನ್ಯದ ವಿರುದ್ಧ ನಿರಂತರ ಹನ್ನೆರಡು ಗಂಟೆ ಕಾದಾಡಿದ ಸ್ಮರಣೀಯ ಕದನ ಅದು. 
ಪೇಶ್ವೆಗಳ ಇಪ್ಪತ್ತೆಂಟು ಸಾವಿರ ಸೈನ್ಯ ಬಲವನ್ನು ಸೋಲಿಸಿದರು. ಕೋರೆಗಾಂವ್ ಸ್ಮಾರಕದಲ್ಲಿ ಆ ಇಪ್ಪತ್ತೆರಡು ಮಹರ್ ಸೈನಿಕರ ಚಿತ್ರಗಳು ದೇಶ ಸ್ವಾತಂತ್ರ್ಯ ಪಡೆಯುವವರೆಗೂ ಇತ್ತು. ಮಹರ್ ಸೈನಿಕರ ವೀರಗಾಥೆ ಹೇಳುವ ಸ್ಮಾರಕ ಅದು.
ಪೇಶ್ವೆಗಳದು ಬ್ರಾಹ್ಮಣರ ಸೈನಿಕರೇ ಹೆಚ್ಚಿದ್ದ ಇಪ್ಪತ್ತೆಂಟು ಸಾವಿರ ಸಂಖ್ಯೆಯ ಸೈನ್ಯ. ಐನೂರು ಮಂದಿಯಿದ್ದ 'ಅಸ್ಪೃಶ್ಯ' ಸೈನಿಕರಿಗೆ ಅವರ ಮುಂದೆ ನಿಲ್ಲಲಾದರೂ ಸಾಧ್ಯವೇ ಎಂದು ಪ್ರಶ್ನೆ ಮೂಡಿಸುವಂಥ ಸನ್ನಿವೇಶ. ಶಿರೂರಿನಿಂದ ಇಪ್ಪತ್ತೇಳು ಮೈಲು ಭೀಮಾ ಕೋರೆಗಾಂವ್ ನವರೆಗೆ ನಡೆದುಕೊಂಡೇ ಬಂದ ಮಹರ್ ಸೈನಿಕರಿಗೆ ಆಹಾರ, ನೀರು ಕೂಡ ಇರಲಿಲ್ಲ. ಆದರೂ ಹನ್ನೆರಡು ಗಂಟೆಗಳ ಕಾಲ ಆ ಸೈನಿಕರು ರಣಭೂಮಿಯಲ್ಲಿ ಕಾದಾಡಿದರು. ಆ ಯುದ್ಧದಲ್ಲಿ ಪೇಶ್ವೆಗಳು ಬರೀ ಸೋತಿದ್ದಲ್ಲ. ಮಹಾರಾಷ್ಟ್ರದಲ್ಲಿ ಪೇಶ್ವಾಗಳ ಉತ್ತರಾದಾಯಿತ್ವವೇ ಅಂತ್ಯವಾಯಿತು. ಹಲವು ಕಾರಣಗಳಿಗಾಗಿ ಈ ಯುದ್ಧಕ್ಕೆ ಮಹತ್ವ ಇದೆ.
ಅತ್ಯಂತ ಕಡಿಮೆ ಸಂಖ್ಯೆಯ ಸೈನಿಕರೊಂದಿಗೆ ಯುದ್ಧಕ್ಕೆ ಇಳಿದ ಬ್ರಿಟಿಷರಿಗೆ ಗೆಲ್ಲುವ ನಂಬಿಕೆ ಇರಲಿಲ್ಲ. ಆದರೆ ಈ ಯುದ್ಧವೇ ಪೇಶ್ವೆಗಳ ಆಡಳಿತದ ಅಂತ್ಯಕ್ಕೆ ಕಾರಣವಾಯಿತು. ಮಹಾರಾಷ್ಟ್ರದಲ್ಲಿ ಆಳವಾಗಿ ಬೇರೂರಿದ್ದ ಅಸ್ಪೃಶ್ಯತೆಯ ಬೇರುಗಳನ್ನು ಅಲುಗಾಡಿಸಲು ನೆರವಾದ ಸಂದರ್ಭ ಅದು.
ಐನೂರು ಸೈನಿಕರ ನೇತೃತ್ವ ವಹಿಸಿದ್ದು ಸಿದ್ಧಾಂಕ್ ಮಹರ್. "ಬ್ರಿಟಿಷರು ವಿದೇಶೀಯರು. ನಿಮಗೆ ನಾವು ನೆರವು ನೀಡುತ್ತೇವೆ" ಎಂದು ಆತ ಮನವಿ ಮಾಡುತ್ತಾರೆ. ಆದರೆ ಆತನ ಮನವಿಯನ್ನು ನಿರಾಕರಿಸಿದ ಪೇಶ್ವೆಗಳು, ಆ ಸೈನಿಕರನ್ನು ಅವಹೇಳನ ಮಾಡುತ್ತಾರೆ. ಹೀಯಾಳಿಸುತ್ತಾರೆ. ನಿಮಗೆ ಯಾವುದೇ ಹಕ್ಕು ಸಿಗಲ್ಲ. ನಮ್ಮ ವಿರುದ್ಧ ಕಾದಾಡಿದರೂ ಅಷ್ಟೇ, ಬ್ರಿಟಿಷರ ವಿರುದ್ಧ ಹೋರಾಡಿದರೂ ಅಷ್ಟೇ ಎನ್ನುತ್ತಾರೆ. ಆಗ ಯುದ್ಧ ಆರಂಭವಾಗುವುದು ಮಹರ್ ಸೈನಿಕರ ಆತ್ಮಗೌರವ ಹಾಗೂ ಹಕ್ಕುಗಳಿಗಾಗಿ. ಅಷ್ಟು ದೊಡ್ಡ ಸಂಖ್ಯೆಯ ಪೇಶ್ವೆ ಪಡೆ ಮಹರ್ ಸೈನಿಕರ ಎದುರು ಮಂಡಿಯೂರುತ್ತದೆ. ಬ್ರಿಟಿಷರಿಗೆ ಮಹತ್ವದ ವಿಜಯ ಲಭಿಸುತ್ತದೆ. ಆ ಮಹರ್ ಸೈನಿಕರಿಗೆ ಬ್ರಿಟಿಷರು ಗೌರವ- ಸಮ್ಮಾನ ನೀಡುತ್ತಾರೆ. ಮಹರ್ ರೆಜಿಮೆಂಟ್ ಮತ್ತು ಬಾಂಬೆ ಸೈನ್ಯದ ಸಾಹಸದ ಬಗ್ಗೆ ಹಲವು ದಂತಕಥೆಗಳೇ ಇವೆ.
ಈ ಸೈನಿಕರ ಸಾಹಸ ಬಿಂಬಿಸುವ ಕೋರೆಗಾಂವ್ ಸ್ಥಂಭ (ವಿಜಯ ಸ್ಥಂಭ) ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ತನಕ ಇತ್ತು. ಇಪ್ಪತ್ತೆರಡು ಮಹರ್ ಸೈನಿಕರ ತ್ಯಾಗದ ಬಗ್ಗೆ ಅದರಲ್ಲಿ ಪ್ರಸ್ತಾವ ಇತ್ತು. ಇಂದಿಗೂ ಆ ಸ್ಮಾರಕ ಅಸ್ಪೃಶ್ಯರ (ಮಹರ್) ವೀರ ಕಥೆಗೆ ಸಾಕ್ಷಿಯಂತೆ ಇದೆ. ಡಾ.ಬಿ.ಆರ್.ಅಂಬೇಡ್ಕರ್ ಪ್ರತಿವರ್ಷ ಜನವರಿ ಒಂದರಂದು ಭೀಮಾ ಕೋರೆಗಾಂವ್ ಗೆ ಭೇಟಿ ನೀಡಿ, ಗೌರವ ಸಲ್ಲಿಸುತ್ತಿದ್ದರು.
SCROLL FOR NEXT