ವಿಶೇಷ

ಉಡುಪಿ: ನಿಜವಾಯ್ತು 'ದೈವ' ನುಡಿ: ಮನೆಯಲ್ಲೇ ಸಿಕ್ಕಿತು 1000 ವರ್ಷದ ಹಳೇ ನಾಗಮೂರ್ತಿ!

Raghavendra Adiga
ಉಡುಪಿ: ಉಡುಪಿ ಸೇರಿದಂತೆ ಕರಾವಳಿ ಭಾಗದ ಜನರು ನಾಗ ಹಾಗೂ ದೈವದ ಬಗ್ಗೆ ಭಾರೀ ನಂಬಿಕೆ ಇಟ್ಟಿರುವುದು ಎಲ್ಲರಿಗೆ ತಿಳಿದ ವಿಚಾರ. ಇಲ್ಲಿನ ದೈನ ನುಡಿ ಕೊಡುವ ದರ್ಶನ ಪಾತ್ರಿಗಳು ಹೇಳುವ ಮಾತುಗಳು ಸತ್ಯವಾಗುತ್ತದೆಂದು ಜನರು ನಂಬುತ್ತಾರೆ. ಇಂತಹಾ ನಂಬಿಕೆಗೆ ಪುಷ್ಟಿಯೊದಗಿಸುವ ಘಟನೆಯೊಂದು ಉಡುಪಿ ಜಿಲ್ಲೆ ಮುದ್ರಾಡಿ ಗ್ರಾಮದಲ್ಲಿ ನಡೆದಿದೆ.
ಹೆಬ್ರಿ ತಾಲೂಕು ಮುದ್ರಾಡಿ ಗ್ರಾಮದ ಮನೆಯೊಂದರ ಚಾವಡಿಯಲ್ಲಿ ನೆಲದಡಿ ಹೂತು ಹೋಗಿದ್ದ ಸಾವಿರ ವರ್ಷದ ಹಿಂದಿನ ನಾಗನ ವಿಗ್ರಹವೊಂದು ಪತ್ತೆಯಾಗಿದೆ. 
ಶಿವಮೊಗ್ಗ-ಉಡುಪಿ ಸುತ್ತಮುತ್ತ ನಾಗದೇವರ ಆರಾಧಕ,  ನಾಗಪಾತ್ರಿ, ಆದ್ಯಾತ್ಮ ಚಿಂತಕರಾಗಿ ಪ್ರಸುದ್ದರಾದ ನಾಗರಾಜ್ ಭಟ್ ಹೇಳಿದ ಮಾತಿನಂತೆ  ಮನೆಯ ಚಾವಡಿ (ಹಾಲ್) ನ ಕೆಳಭಾಗದಲ್ಲಿ ಅಗೆದಾಗ ಜೈನರ ಕಾಲದಲ್ಲಿ ಪೂಜಿಸಲಾಗುತ್ತಿದ್ದ ನಾಗನ ಬಿಂಬ (ಮೂರ್ತಿ) ಪತ್ತೆಯಾಗಿದೆ. 
ಮುದ್ರಾಡಿಯ ಗಂಗಾಧರ ಶೆಟ್ಟಿಎಂಬವರ ಮನೆಯಲ್ಲಿ ಈ ಪವಾಡ ನಡೆದಿದೆ.
ಘಟನೆ ಹಿನ್ನೆಲೆ
ಮುದ್ರಾಡಿಯ ಗಂಗಾಧರ ಶೆಟ್ಟಿಯವರದು ದೊಡ್ಡ ಕುಟುಂಬ. ಅವರು ಮುಂಬೈನಲ್ಲಿ ಟ್ರಾನ್ಸ್ ಪೋರ್ಟ್, ಶೋರೂಂ ಉದ್ಯಮ ನಡೆಸುತ್ತಿದ್ದಾರೆ.ಅವರು ಬಹಳ ವರ್ಷದ ಬಳಿಕ ಮುದ್ರಾಡಿಯಲ್ಲಿ ಹೊಸದಾಗಿ ಮನೆ ಕಟ್ಟಿಸಿದ್ದರು. ಆದರೆ ಮನೆ ಕಟ್ಟಿಸಿದಾಗಿನೊಂದ ಅವರಿಗೆ ಅಲ್ಲಿ ನೆಮ್ಮದಿಯಾಗಿರಲು ಸಾಧ್ಯವಾಗಿರಲಿಲ್ಲ. ಕಡೆಗೆ ಉದ್ಯಮ, ವ್ಯವಹಾರದಲ್ಲಿ ಸಹ ನಷ್ಟಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗಿತ್ತು. 
ಈ ಸಂಬಂಧ ಸ್ನೇಹಿತರ ಸಲಹೆಯಂತೆ ಶ್ಟ್ಟರು ನಾಗಪಾತ್ರಿ ನಾಗರಾಜ್ ಭಟ್ ಅವರ ಸಲಹೆ ಕೇಳಿದ್ದಾರೆ. ಆಗ ಭಟ್ "ನಿಮ್ಮ ಮನೆ ಹಾಲ್ ನಲ್ಲಿ ನಾಗದೇವರ ಕಲ್ಲಿದೆ. ಈ ಸ್ಥಳವನ್ನು ಅಗೆದು ಕಲ್ಲು ಹೊರತೆಗೆದು ಪೂಜಿಸಿದರೆ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತದೆ ಎಂದಿದ್ದಾರೆ. ಅದರಂತೆ ಶೆಟ್ಟರು ಮನೆಯಲ್ಲಿ ಗುರುತು ಮಾಡಲಾಗಿದ್ದ ಜಾಗವನ್ನು ಅಗೆದಾಗ ಸಾವಿರ ವರ್ಷದ ಹಳೆಯ ನಾಗ ಮೂರ್ತಿ ಪತ್ತೆಯಾಗಿದ್ದು ಇದು ಮನೆಯವರಿಗಲ್ಲದೆ ಊರಿನ ಜನರಲ್ಲಿ ಸಹ ಅಚ್ಚರಿ ಮೂಡಿಸಿದೆ.
ಮನೆಯ ನಿಗದಿತ ಜಾಗದಲ್ಲಿ ಆರು ಅಡಿ ಕೆಳಗೆ ನಾಗರ ಕಲ್ಲು ಸಿಕ್ಕಿರುವುದು ನಾಗಪಾತ್ರಿಯ ಖಚಿತ ನುಡಿಯು ಸತ್ಯವಾಗಿರುವುದು ಎಲ್ಲೆಡೆ ಚರ್ಚೆಯ ವಿಷಯವಾಗಿದೆ.
SCROLL FOR NEXT