ವಿಶೇಷ

ವೈದ್ಯಲೋಕದಲ್ಲಿ ನೂತನ ದಾಖಲೆ! ಜಗತ್ತಿನ ಅತಿದೊಡ್ಡ ಕ್ಯಾನ್ಸರ್ ಗಡ್ಡೆ ಶಸ್ತ್ರಚಿಕಿತ್ಸೆ ಯಶಸ್ವಿ

Raghavendra Adiga
ಕೊಯಮತ್ತೂರ್(ತಮಿಳುನಾಡು): ತಮಿಳುನಾಡಿನ ಊಟಿಯಲ್ಲಿ ಕೃಷಿ ಕಾರ್ಮಿಕರಾಗಿದ್ದ ವಸಂತಾ ಎನ್ನುವವರ ಹೊಟ್ಟೆಯಲ್ಲಿದ್ದ ಜಗತ್ತಿನಲ್ಲಿ ಇದುವರೆಗೆ ಸಿಕ್ಕ ಕ್ಯಾನ್ಸರ್ ಗಡ್ಡೆಗಳಲ್ಲಿ ಅತಿ ದೊಡ್ಡದೆನ್ನಲಾದ ಗಡ್ಡೆಯನ್ನು ಕೊಯಮತ್ತೂರು ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶೇಷವೆಂದರೆ ವಸಂತಾಗೆ ಕ್ಯಾನ್ಸರ್ ಗಡ್ಡೆ ಇಷ್ಟು ಬೃಹತ್ ಗಾತ್ರಕ್ಕೆ ಬೆಳೆವವರೆಗೆ ಆಕೆಗೆ ನೋವಿನ ಅನುಭವವಾಗಿರಲಿಲ್ಲ! ವಸಂತಾ ತಾನು ವಯಸ್ಸಾಗುತ್ತಾ ಹೆಚ್ಚು ತೂಕವನ್ನು ಹೊಂದುತ್ತಿದ್ದೇನೆ ಎಂದೇ ಭಾವಿಸಿದ್ದರು.ಸೊಂಟದ ಗಾತ್ರ ದಿನ ದಿನಕೆ ಹೆಚ್ಚುತ್ತಿದ್ದದ್ದೂ ಸಹ ಆಕೆಗೆ ಯಾವ ವಿಶೇಷವೆಂದೂ ಕಾಣಿಸಿರಲಿಲ್ಲ. 
ಆದರೆ ಅದೊಮ್ಮೆ ಯಾವಾಗ ಇನ್ನು ತಡೆಯುವುದು ಅಸಾಧ್ಯ ಎಂದು ಅರಿತರೋ ಆಗ ಸ್ಥಳೀಯ ವೈದ್ಯರಲ್ಲಿ ಆಗಮಿಸಿ ಪರೀಕ್ಷೆಗೆ ಒಳಗಾಗಿದ್ದಾರೆ. ಆಗ ಆಕೆಯ ಹೊಟ್ಟೆಯಲ್ಲಿ ಬೃಹತ್ ಗಾತ್ರದ ಕ್ಯಾನ್ಸರ್ ಗಡ್ಡೆ ಇದೆ ಎನ್ನುವುದು ಬೆಳಕಿಗೆ ಬಂದಿದೆ. ವೈದ್ಯರು ಇದನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಬೇಕು, ಆದರೆ ಹೀಗೆ ಮಾಡುವಾಗ ಆಕೆಯ ಜೀವಕ್ಕೆ ತೊಂದರೆಯಾಗುವ ಸಾಧ್ಯತೆ ಅಲ್ಲಗೆಳೆಯಲಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಆಕೆಯ ಪತಿ ಕಣ್ಣೀರಾಗಿದ್ದಾರೆ. ಬಸ್ ನಿಲ್ದಾಣದಲ್ಲಿ ಅಳುತ್ತಿದ್ದ ವಸಂತಾ ಪತಿಯನ್ನು ನೋಡಿದ ವ್ಯಕ್ತಿಯೊಬ್ಬರು ಅವರಿಗೆ ಕೊಯಮತ್ತೂರು ಆಸ್ಪತ್ರೆಗೆ ತೆರಳು ಸೂಚಿಸಿದ್ದಾರೆ.
"ರೋಗಿ ನಮ್ಮ ಬಳಿ ಆಗಮಿಸಿದಾಗ ಅವರ ತೂಕ 75 ಕೆ.ಜಿ ಆಗಿತ್ತು. ಆಕೆಯ ಹೊಟ್ಟೆಯಲ್ಲಿದ್ದ ಗಡ್ಡೆಯನ್ನು ನಾವು ಹೊರತೆಗೆದಿದ್ದು ಆ ಗಡ್ಡೆ  33.5 ಕೆ.ಜಿ ತೂಕ ಹೊಂದಿತ್ತು. ಇದೀಗ ರೋಗಿ ಗುಣಮುಖರಾಗಿದ್ದು ಅವರ ನೈಜ ತೂಕ ಸುಮಾರು 42 ಕೆ.ಜಿ ಇದೆ" ಡಾ. ಕುಮಾರ್ ಎ ಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಇದುವರೆಗೆ ಭಾರತದಲ್ಲಿ ಯಶಸ್ವಿಯಾಗಿ ಹೊರತೆಗೆಯಲಾದ ಕ್ಯಾನ್ಸರ್ ಗಡ್ಡೆಯ ಗರಿಷ್ಠ ತೂಕ 20 ಕೆ.ಜಿಯಷ್ಟಿದ್ದು ದೆಹಲಿಯ ಏಮ್ಸ್ ಹಾಗೂ ಪುದುಚೇರಿ ವೈದ್ಯರು ಈ ಸಾಧನೆ ಮಾಡಿದ್ದರು.
ಅಲ್ಲದೆ ಇದಕ್ಕೆ ಮುನ್ನ ಕ್ಯಾನ್ಸರ್ ಕಾರಕವಲ್ಲದೆ ದೊಡ್ಡ ಗಡ್ಡೆಗಳನ್ನು ದೇಹದಿಂದ ಹೊರಹಾಕಿದ ಉದಾಹರಣೆಗಳಿದೆ, ಆದರೆ ವಸಂತಾ ದೇಹದಲ್ಲಿದ್ದದ್ದು ಅಂಡಾಶಯ ಕ್ಯಾನ್ಸರ್ ಕಾರಕವಾಗಬಲ್ಲ ಗಡ್ಡೆ. ಹೀಗಾಗಿ ಇಷ್ಟು ದೊಡ್ಡ ಗಾತ್ರದ ಕ್ಯಾನ್ಸರ್ ಗಡ್ಡೆ ಶಸ್ತ್ರಚಿಕ್ತ್ಸೆ ಮೂಲಕ ಹೊರತೆಗೆದಿರುವುದು ದಾಕಲೆಯಾಗಿದೆ ಎಂದು ವೈದ್ಯರು ನುಡಿದಿದ್ದಾರೆ.
"ನಾವು ಶಸ್ತ್ರಚಿಕಿತ್ಸೆಯ ವೇಳೆ ಅರೆವಳಿಕೆ ನಿಡುವಾಗಲೂ, ದೇಹದಿಂದ ಅತ್ಯಂತ ಕನಿಷ್ಟ ಪ್ರಮಾಣದ ರಕ್ತಸ್ರಾವ ಉಂಟಾಗಬೇಕೆಂದೂ ಸಾಕಷ್ಟು ಪ್ರಯತ್ನ ನಡೆಸಿದ್ದೆವು. ನಮ್ಮಲ್ಲಿ ಅತ್ಯಂತ ನುರಿತ ವೈದ್ಯರ ತಂಡವಿದ್ದು ನಮ್ಮ ಈ ಶಸ್ತ್ರಚಿಕಿತ್ಸೆ ವಿವರಗಳನ್ನು ವಿಶ್ವ ದಾಖಲೆ ಪುಸ್ತಕ ಸೇರ್ಪಡೆಗಾಗಿ ಎದುರು ನೋಡುತ್ತೇವೆ, ಇದಕ್ಕಾಗಿ ಇದಾಗಲೇ ಅರ್ಜಿ ಸಲ್ಲಿಸಿದ್ದೇವೆ" ಕುಮಾರ್ ಹೇಳಿದ್ದಾರೆ.
SCROLL FOR NEXT