ವಾಷಿಂಗ್ಟನ್: ಕೈಲಿ ಜೆನ್ನರ್.. ಖ್ಯಾತ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದಿದ್ದ ಹಾಲಿವುಡ್ ನ ಖ್ಯಾತ ನಟಿ. ಆದರೆ ಈ ನಟಿಯ ಅಪರೂಪದ ದಾಖಲೆಯನ್ನು ಕೇವಲ ಒಂದು ಮೊಟ್ಟೆ ಅಳಿಸಿ ಹಾಕಿದೆ.
ಅರೆ ಇದು ನಿಜ.. ಹೌದು.. ಈ ಹಿಂದೆ ಕೈಲಿ ಜೆನ್ನರ್ ರ ಒಂದು ಫೋಟೋಗೆ ದಾಖಲೆಯ ಸುಮಾರು 18 ಮಿಲಿಯನ್ ಲೈಕ್ ಸಿಕ್ಕಿತ್ತು. ಆದರೆ ಈ ದಾಖಲೆಯನ್ನು ಒಂದು ಮೊಟ್ಟೆಯ ಫೋಟೋ ಮುರಿದು ಹಾಕಿದ್ದು. ಅಷ್ಟು ಮಾತ್ರವಲ್ಲದೇ ಇನ್ ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಮೊದಲ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದೆ. ಆ ಮೂಲಕ ಇನ್ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದಿದ್ದ ಹಾಲಿವುಡ್ ನಟಿ ಕೈಲಿ ಜೆನ್ನರ್ ಈಗ ದ್ವಿತೀಯ ಸ್ಥಾನಕ್ಕೆ ಇಳಿದಿದ್ದಾರೆ.
ವರ್ಲ್ಡ್ ರೆಕಾರ್ಡ್ ಎಗ್ ಎಂಬ ಹೆಸರಿನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಇತ್ತೀಚೆಗೆ ಮೊಟ್ಟೆಯೊಂದರ ಫೋಟೋ ಹಾಕಲಾಗಿತ್ತು. ಈ ಫೋಟೋಗೆ ಕೈಲಿ ಜೆನ್ನರ್ ದಾಖಲೆಯನ್ನು ಮುರಿದು ಇನ್ ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಸೃಷ್ಟಿಸೋಣ ಎಂಬ ಟ್ಯಾಗ್ ಲೈನ್ ಕೂಡ ನೀಡಲಾಗಿತ್ತು. ಈದೀಗ ಈ ಫೋಟೋ ಯಾವ ಮಟ್ಟಿಗೆ ವೈರಲ್ ಆಗಿದೆ ಎಂದರೆ, ಈ ಫೋಟೋಗೆ 47 ಕೋಟಿಗಿಂತಲೂ ಹೆಚ್ಚಿನ ಲೈಕ್ ಸಿಕ್ಕಿದೆ. ಈ ಮೂಲಕ ಇನ್ ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಲೈಕ್ ಪಡೆದ ಫೋಟೋ ಎಂಬ ದಾಖಲೆ ಮೊಟ್ಟೆಯ ಪಾಲಾಗಿದೆ.
ಈ ಹಿಂದೆ ನಟಿ ಜೆನ್ನರ್ ತನ್ನ ಮಗಳ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗೆ 18 ಮಿಲಿಯನ್ ಲೈಕ್ಸ್ ಸಿಕ್ಕಿತ್ತು. ಇದು ಈವರೆಗಿನ ದಾಖಲೆಯಾಗಿತ್ತು. ಆದರೆ ಈ ದಾಖಲೆಯನ್ನು ಅದ್ಯಾರೋ ಹಾಕಿದ ಒಂದು ಮೊಟ್ಟೆಯ ಫೋಟೋ ಅಳಿಸಿ ಹಾಕಿದೆ. ವರ್ಲ್ಡ್ ರೆಕಾರ್ಡ್ ಎಗ್ ಹೆಸರಿನ ಈ ಖಾತೆಯ ಮತ್ತೊಂದು ವಿಶೇಷತೆ ಎಂದರೆ ಮೊಟ್ಟೆಯ ಫೋಟೋ ಅವರು ಅಪ್ಲೋಡ್ ಮಾಡಿದ ಮೊದಲ ಚಿತ್ರವಾಗಿತ್ತು. ಅಲ್ಲದೆ ಅನಂತರ ಕೂಡ ಯಾವುದೇ ಫೋಟೋ ಹಾಕಿಲ್ಲ. ಹಾಕಿದ ಒಂದೇ ಒಂದು ಪೋಸ್ಟ್ ನಿಂದ ಈ ಖಾತೆಯನ್ನು 7.3 ಕೋಟಿ ಜನರು ಫಾಲೋ ಕೂಡ ಮಾಡುತ್ತಿದ್ದಾರೆ.