ವಿಶೇಷ

ವಿಚಿತ್ರವಾದರೂ ಸತ್ಯ: ಸಹಾಯ ಮಾಡುವಂತೆ ಈಜುಗಾರರ ಕೇಳಿದ 'ಮಂಟಾ ರೇ' ಫಿಶ್, ವಿಡಿಯೋ ವೈರಲ್!

Srinivasamurthy VN
ಸಿಡ್ನಿ: ಈ ಸುದ್ದಿ ಕೊಂಚ ವಿಚಿತ್ರವಾದರೂ ಸತ್ಯ... ಸಮುದ್ರಾದಳದಲ್ಲಿ ಜೀವಿಸುವ ರೇ ಜಾತಿಗೆ ಸೇರಿದ ಮಂಟಾ ರೇ ಮೀನು ತನಗೆ ನೆರವು ನೀಡುವಂತೆ ಅಲ್ಲಿನ ಮುಳುಗು ತಜ್ಞರನ್ನು ಕೇಳಿದೆ. ಈ ಕುರಿತ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಪಶ್ಚಿಮ ಆಸ್ಟ್ರೇಲಿಯಾದ ಖ್ಯಾತ ಪ್ರವಾಸಿ ತಾಣ ನಿಂಗಲೂ ರೀಫ್ ಸಮುದ್ರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಸ್ಥಳೀಯ ಪ್ರವಾಸಿ ಸಂಸ್ಥೆಯೊಂದರ ಈಜು ತಜ್ಞರು ಸಮುದ್ರಕ್ಕೆ ಧುಮುಕಿದ್ದಾಗ ಸಮುದ್ರದಾಳದಲ್ಲಿದ್ದ ಮಂಟಾರೇ ಮೀನೊಂದು ಕೂಡಲೇ ಅವರ ಬಳಿ ಬಂದು ಏನೋ ಹೇಳಲು ಪ್ರಯತ್ನಿಸಿದೆ. ಆರಂಭದಲ್ಲಿ ಮೀನು ಆಟವಾಡಲು ಬಂದಿದೆ ಎಂದು ಈಜು ತಜ್ಞರು ಅದರೊಂದಿಗೆ ಆಟವಾಡಲು ಮುಂದಾಗಿದ್ದಾರೆ. ಆದರೆ ಆ ಮೀನು ಮಾತ್ರ ಆ ಈಜುಗಾರರಿಗೆ ಬೇರೇನೋ ಹೇಳಲು ಪ್ರಯತ್ನಿಸುತ್ತಿತ್ತು.
ಮೀನಿನ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದ ಈಜು ತಜ್ಞರು ಮೀನನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಅದರ ಕಣ್ಣಿಗೆ ಕಬ್ಬಿಣದ ಹುಕ್ (ತಂತಿಯಂತಹ ಪದಾರ್ಥ, ಗಾಳ)ವೊಂದು ಚುಚ್ಚಿಕೊಂಡಿರುತ್ತದೆ. ಕೂಡಲೇ ಅದನ್ನು ಗಮನಿಸಿದ ಈಜುಗಾರರು ಅದನ್ನು ತೆಗೆಯುವ ಪ್ರಯತ್ನ ಮಾಡುತ್ತಾರೆ. ಆರಂಭದಲ್ಲಿ ಕಷ್ಟವಾದರೂ, ಬಳಿಕ ಅದನ್ನು ಕಷ್ಟ ಪಟ್ಟು ತೆಗೆಯುತ್ತಾರೆ. ಹುಕ್ ತೆಗೆಯುತ್ತಿದ್ದರಂತೆಯೇ ಸಂತಸಗೊಂಡ ಮಂಟಾ ರೇ, ತನ್ನ ರೆಕ್ಕೆಗಳ ಮೂಲಕ ಈಜುಗಾರರನ್ನು ತಬ್ಬಿಕೊಂಡು ತನ್ನ ಧನ್ಯವಾದ ಹೇಳಿ ಅಲ್ಲಿಂದ ತೆರಳುತ್ತದೆ. ಮೀನಿನ ಈ ಗುಣ ಈಜುಗಾರರಿಗೆ ಅಚ್ಚರಿಯನ್ನುಂಟು ಮಾಡುತ್ತದೆ.
ಇವಿಷ್ಯೂ ಘಟನಾವಳಿಯನ್ನು ಮತ್ತೋರ್ವ ಮುಳುಗುತಜ್ಞ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಈ ವಿಡಿಯೋ ವ್ಯಾಪಕ ವೈರಲ್ ಆಗಿದೆ.
ಇನ್ನು ಪಶ್ಚಿಮ ಆಸ್ಟ್ರೇಲಿಯಾದ ಖ್ಯಾತ ಪ್ರವಾಸಿ ತಾಣ ನಿಂಗಲೂ ರೀಫ್ ಸಮುದ್ರ ಪ್ರದೇಶ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ಇಲ್ಲಿ ನಿತ್ಯ ನೂರಾರು ಪ್ರವಾಸಿಗರು ಕರಾವಳಿಗೆ ಬಂದು ಕಾಲಕಳೆಯುತ್ತಾರೆ. ಕೆಲವರು ಬೋಟ್ ಗಳಲ್ಲಿ ಫಿಶಿಂಗ್ ತೆರಳುತ್ತಾರೆ. ಹೀಗೆ ಪ್ರವಾಸಿಗರು ಮೀನು ಹಿಡಿಯಲು ಹಾಕಿದ ಹುಕ್ ಮಂಟಾ ರೇ ಕಣ್ಣಿಗೆ ಚುಚ್ಚಿಕೊಂಡಿರಬಹುದು ಎಂದು ಈಜುಗಾರರು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಸಮುದ್ರವನ್ನು ಕಲುಷಿತಗೊಳಿಸಬೇಡಿ ಎಂದು ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ.
SCROLL FOR NEXT