ವಿಶೇಷ

ವೈದ್ಯಲೋಕದ ವಿಸ್ಮಯ! ಗರ್ಭಕೋಶದ ಬದಲು ಅಂಡಾಶಯದಲ್ಲಿ ಬೆಳೆದ ಮಗು, ಸರ್ಕಾರಿ ವೈದ್ಯೆಯಿಂದ ಯಶಸ್ವಿ ಶಸ್ತ್ರಚಿಕಿತ್ಸೆ

Raghavendra Adiga
ದಾವಣಗೆರೆ: ವೈದ್ಯಕೀಯ ಲೋಕದಲ್ಲೇ ಪ್ರಥಮ ಎನ್ನಬಹುದಾದ ಶಸ್ತ್ರ ಚಿಕಿತ್ಸೆಯೊಂದನ್ನು ಯಶಸ್ವಿಯಾಗಿ ಪೂರೈಸಿ ದಾವಣಗೆರೆ ಸರ್ಕಾರಿ ಆಸ್ಪತ್ರೆಯ ವೈದ್ಯರು ನೂತನ ದಾಖಲೆ ಬರೆದಿದ್ದಾರೆ. ತಾಯಿಯ ಗರ್ಭದ ಬದಲು ಅಂಡಾಶಯದಲ್ಲಿ ಬೆಳೆದ ಮಗುವನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಾಸ್ವಿಯಾಗಿ ಹೆರಿಗೆ ಮಾಡಿ ದಾವಣಗೆರೆ ವೈದ್ಯರು ಹೊಸ ಇತಿಹಾಸ ಬರೆದಿದ್ದಾರೆ.
ದಾವಣಗೆರೆಯ ಚಾಮರಾಜಪೇಟೆಯಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಈ ಪ್ರಕರಣ ವರದಿಯಾಗಿದ್ದು ಸಾಮಾನ್ಯವಾಗಿ ತಾಯಿಯ ಗರ್ಭಕೋಶದಲ್ಲಿ ಬೆಳೆಯಬೇಕಿದ್ದ ಮಗು ಅಂಡಾಶಯದಲ್ಲಿ ಬೆಳೆದಿತ್ತು.ಸರ್ಕಾರಿ ಆಸ್ಪತ್ರೆ ವೈದ್ಯೆ  ಅನಿತಾ ರವಿ ಮತ್ತು ತಂಡ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಹೊರ ತೆಗೆದಿದ್ದಾರೆ.
ಜಗಳೂರು ತಾಲ್ಲೂಕಿನ ರಾಜಕುಮರ್, ಕರಿಬಸಮ್ಮ ದಂಪತಿಗಳಿಗೆ ಈ ಅಸಾಮಾನ್ಯ ಮಗು ಜನಿಸಿದೆ.ಕರಿಯಮ್ಮನಿಗೆ ಇದು ಎರಡನೇ ಮಗುವಾಗಿದ್ದು ಸ್ಕ್ಯಾನಿಂಗ್  ಮಾಡಿಸಿದ್ದಾಗ ಮಗು ಗರ್ಭಕೋಶದ ಬದಲು ಗರ್ಭಕೋಶದ ಬಲಭಾಗದಲ್ಲಿರುವ ಅಂಡಾಶಯದಲ್ಲಿ ಬೆಳೆಯುತ್ತಿದೆ ಎನ್ನುವುದು ಅರಿವಾಗಿದೆ. ಇದಾಗಿ ಸಾಕಷ್ಟು ಆಧುನಿಕ ಯಂತ್ರೋಪಕರಣ ಹೊಂದಿರುವ ಖಾಸಗಿ ಆಸ್ಪತ್ರೆಗಳ ವೈದ್ಯರು ಸಹ ಮಗು ಬದುಕುಳಿಯುವುದು ಕಷ್ಟ, ಮಗುವನ್ನು ತೆಗೆಯುವುದು ಅಸಾಧ್ಯವೆಂದು ಕೈಚೆಲ್ಲಿದ್ದರು.
ಮಗು ದೊಡ್ಡದಾಗಿ ಬೆಳೆದಿದ್ದು ಅಂಡಾಶಯಕ್ಕೆ ಆ ಮಗುವನ್ನು ಹೊರುವ ಶಕ್ತಿ ಇಲ್ಲ, ಅಂಡಾಶಯ ಒಂದೊಮ್ಮೆ ಒಡೆದು ಹೋದರೆ ತಾಯಿ, ಮಗು ಇಬ್ಬರ ಜೀವಕ್ಕೆ ಅಪಾಯವಿತ್ತು.ಈ ವೇಳೆ ಸರ್ಕಾರಿ ಆಸ್ಪತ್ರೆಗೆ ಧಾವಿಸಿದ ಕರಿಯಮ್ಮ ದಾಂಪತಿಗೆ ಅಲ್ಲಿನ ವೈದ್ಯರು ನೆರವಾಗಿದ್ದಾರೆ. ಈಗ ಕರಿಯಮ್ಮ ಸುಂದರ ಹೆಣ್ಣುಮಗುವಿನ ತಾಯಿಯಾಗಿದ್ದಾರೆ.
ಈ ಘಟನೆ ಭಾರತದ ಇತಿಹಾಸದಲ್ಲೇ ಪ್ರಥಮ ಎನ್ನಲಾಗಿದ್ದು ಬಾಪೂಜಿ ಆಸ್ಪತ್ರೆಯ ವೈದ್ಯೆ ಅನಿತ ರವಿ ಈ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.ಫೆಬ್ರವರಿ 27ರಂದುಈ ಮಗುವಿನ ಜನನವಾಗಿದ್ದು 1.8 ಕೆಜಿ ತೂಕದ ಹೆಣ್ಣುಮಗು ಜನಿಸಿದೆ. ಸಧ್ಯ ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದು ಕುಟುಂಬ ಸಂತಸದಲ್ಲಿ ಮುಳುಗಿದೆ.
SCROLL FOR NEXT