ವಿಶೇಷ

ಕೋಮುಸೌಹಾರ್ದತೆ ಸಾರುತ್ತಿರುವ ಗ್ರಾಮ: ಒಗ್ಗಟ್ಟಿನಿಂದ ಗಣೇಶ ಚತುರ್ಥಿ, ಮೊಹರಂ ಆಚರಣೆ 

Manjula VN

ಹುಬ್ಬಳ್ಳಿ: ಗಣೇಶ ಚತುರ್ಥಿಯೇ ಆಗಲೀ, ಮೊಹರಂ ಹಬ್ಬವೇ ಆಗಲೀ ಈ ಗ್ರಾಮದಲ್ಲಿರುವ ಹಿಂದೂ-ಮುಸ್ಲಿಮರು ಒಗ್ಗಟ್ಟಿನಿಂದ ಆಚರಣೆ ಮಾಡುವ ಮೂಲಕ ಕೋಮು ಸೌಹಾರ್ದತೆಯನ್ನು ಸಾರುತ್ತಿದ್ದಾರೆ.

ಹುಬ್ಬಳ್ಳಿಯ ಹೊರವಲಯದಲ್ಲಿರುವ ಬಿದ್ನಾಳ್ ಎಂಬ ಪುಟ್ಟ ಗ್ರಾಮದಲ್ಲಿರುವ ಜನರು ಕೋಮು ಸೌಹಾರ್ದತೆಯನ್ನು ಸಾರುತ್ತಿದ್ದಾರೆ. 

ಗ್ರಾಮದಲ್ಲಿ ಯಾವುದೇ ರೀತಿಯ ಪ್ರತ್ಯೇಕ ಸಮುದಾಯಗಳಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಸೇರಿಕೊಂಡು ಪ್ರತೀ ಹಬ್ಬವನ್ನೂ ಆಚರಿಸುತ್ತಿದ್ದಾರೆ. ಶ್ರೀ ಗಜಾನನ ಹಾಗೂ ಮೊಹರಂ ಉತ್ಸ ಸಮಿತಿ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬ ಆಚರಣೆಗಳನ್ನು ನೋಡಿಕೊಳ್ಳುತ್ತಿದೆ. ಗ್ರಾಮದಲ್ಲಿರುವ ಎರಡೂ ಸಮುದಾಯಗಳ ಜನಸಂಖ್ಯೆ ಸಮಾನವಾಗಿದ್ದು, ಎರಡೂ ಸಮುದಾಯಗಳ ಜನರು ಹಬ್ಬವನ್ನು ಸಮಾನತೆಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. 

ಕಳೆದ 35 ವರ್ಷಗಳಿಂದಲೂ ಗಣೇಶ ಮೂರ್ತಿ ಸ್ಥಾಪಿಸುತ್ತಿದ್ದೇವೆ. ಅದೇ ರೀತಿ ಪೆಂಡಾಲ್ ಹಾಕಿ ಮೊಹರಂ ಹಬ್ಬವನ್ನು ಆಚರಿಸುತ್ತಿದ್ದೇವೆ. 1982, 1983 ಹಾಗೂ 1984ರಲ್ಲಿ ಒಂದೇ ತಿಂಗಳಿನಲ್ಲಿಯೇ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬ ಬಂದಿತ್ತು. 2018ರಲ್ಲಿಯೂ ಹೀಗೆಯೇ ಆಗಿತ್ತು. ಈ ವರ್ಷ ಕೂಡ ಹಾಗೆಯೇ ಆಗಿದೆ. ಮುಂದಿನ ಪ್ರತೀವರ್ಷವೂ ಹೀಗೆಯೇ ಆಗಲಿದೆ. ಎರಡೂ ಸಮುದಾಯದವರೂ ಹಬ್ಬವನ್ನು ಉತ್ತಮ ರೀತಿಯಲ್ಲಿ ಆಚರಿಸುತ್ತೇವೆ. ಗಣೇಶ ಮೂರ್ತಿ ಬಳಿ ಮುಸ್ಲಿಂ ಮಹಿಳೆಯರೂ ಬರುತ್ತಾರೆ. ಅವರೂ ಆರತಿ ಮಾಡುತ್ತಾರೆಂದು ಸ್ಥಳೀಯ ನಿವಾಸಿ ಬಸವರಾಜ್ ಮುಗಡ್ ಹೇಳಿದ್ದಾರೆ. 

ಮೊಹರಂ ಉತ್ಸವ ಸಮಿತಿಯ ನಾಯಕರಾಗಿರುವ ಧವಾಲ್ ಸಾಬ್ ನಡಾಫ್ ಮಾತನಾಡಿ, ಹಿಂದೂ ಹಾಗೂ ಮುಸ್ಲಿಂ ಎಂಬ ಯಾವುದೇ ಭೇದಭಾವಗಳಿಲ್ಲ. ಇಲ್ಲಿ ಪ್ರತೀಯೊಬ್ಬರು ಸಹೋದರ ಹಾಗೂ ಸಹೋದರಿಯರಂತೆ ಜೀವನ ನಡೆಸುತ್ತಿದ್ದಾರೆ. ಕೇವಲ ಹಬ್ಬದ ಸಮಯದಲ್ಲಿ ಮಾತ್ರವೇ ಅಲ್ಲ. ಎರಡೂ ಸಮುದಾಯಗಳು ಒಟ್ಟಿಗೆ ಕೈ ಜೋಡಿಸಿ ಪ್ರತೀ ಕಾರ್ಯಕ್ರಮಗಳನ್ನೂ ಮಾಡುತ್ತೇವೆ. ಇದೇ ಈ ಗ್ರಾಮದ ಸೌಂದರ್ಯ ಎಂದು ತಿಳಿಸಿದ್ದಾರೆ. 

SCROLL FOR NEXT